ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madenuru Manu: ಮಡೆನೂರು ಮನುಗೆ ಶಾಕ್‌ ಕೊಟ್ಟ ಫಿಲ್ಮ್‌ ಚೇಂಬರ್; ಸ್ಯಾಂಡಲ್‌ವುಡ್‌ನಿಂದ ಬ್ಯಾನ್‌!

Madenuru Manu: ಮಡೆನೂರು ಮನು (Madenuru Manu) ವಿರುದ್ಧ ದಾಖಲಾಗಿರುವ ಆರೋಪಗಳು, ಕೇಸ್‌ಗಳಿಂದ ಮುಕ್ತರಾಗುವವರೆಗೆ ನಾವು ಅಸಹಕಾರ ತೋರಬೇಕು ಎಂದು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ನಿಂದ ಮಡೆನೂರು ಮನು ಬ್ಯಾನ್‌; ಫಿಲ್ಮ್‌ ಚೇಂಬರ್ ನಿರ್ಧಾರ

Profile Prabhakara R May 27, 2025 5:28 PM

ಬೆಂಗಳೂರು: ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ನಟ ಮಡೆನೂರು ಮನು ಸದ್ಯ ಜೈಲಿನಲ್ಲಿದ್ದಾರೆ. ಈ ನಡುವೆ ಸ್ಯಾಂಡಲ್‌ವುಡ್‌ನ ಪ್ರಮುಖ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ವೈರಲ್‌ ಆಗಿದ್ದರಿಂದ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಬೇಕು ಎಂಬ ಆಗ್ರಹ ಅಭಿಮಾನಿಗಳಿಂದ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮಹತ್ವದ ಸಭೆ ನಡೆಸಿರುವ ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ಕನ್ನಡದ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನಿಂದ ಮಡೆನೂರು ಮನಿವನ್ನು ದೂರ ಇಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಅವರು, ಕನ್ನಡದ ಪ್ರಮುಖ ಕಲಾವಿದರ ಬಗ್ಗೆ ಮಡೆನೂರು ಮನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆಡಿಯೋ ವೈರಲ್‌ ಆಗಿತ್ತು. ನಟ ದುರಹಂಕಾರಿ ಮಾತುಗಳನ್ನು ಆಡಿದ್ದಾರೆ, ಹೀಗಾಗಿ ಅವರಿಗೆ ಸಹಕಾರ ನೀಡಬಾರದು ಎಂದು ಎಲ್ಲರೂ ಹೇಳಿದ್ದಾರೆ. ಮಡೆನೂರು ಮನು ವಿರುದ್ಧ ದಾಖಲಾಗಿರುವ ಆರೋಪಗಳು, ಕೇಸ್‌ಗಳಿಂದ ಮುಕ್ತರಾಗುವವರೆಗೆ ನಾವು ಅಸಹಕಾರ ತೋರಬೇಕು ಎಂದು ನಿರ್ಧರಿಸಿದ್ದೇವೆ. ಅವರು ಕಿರುತೆರೆ, ಹಿರಿತೆರೆ ಸೇರಿ ಚಿತ್ರರಂಗದ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದ್ದಾರೆ.‌



ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಮಡೆನೂರು ಮನು ಕೆಟ್ಟದಾಗಿ ಮಾತಾಡಿರುವ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ರಾಜ್‌ ಕುಮಾರ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಶಿವಣ್ಣನ ಅಭಿಮಾನಿಗಳು ದೂರು ಕೊಟ್ಟ ಬೆನ್ನಲ್ಲೇ ಫಿಲ್ಮ್ ಚೇಂಬರ್ ಮಹತ್ವದ ತಿರ್ಮಾನ ಕೈಗೊಂಡಿದೆ. ಮಡೆನೂರು ಮನು ಅವರನ್ನು ಕಿರುತೆರೆ ಹಾಗೂ ಹಿರಿತೆರೆಯಿಂದ ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿದೆ.

ಏನಿದು ಪ್ರಕರಣ?

ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿ ಕಿರುತೆರೆ ಸಹನಟಿಯೊಬ್ಬರು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಕೇಸ್‌ ದಾಖಲಿಸಿಕೊಂಡು, ಮಡೆನೂರು ಮನುವನ್ನು ಬಂಧಿಸಿದ್ದರು. ಮಡೆನೂರು ಮನು ನಟನೆಯ ಮೊದಲ ಸಿನಿಮಾ ‘ಕುಲದಲ್ಲಿ ಕೀಳ್ಯಾವುದೊ’ ಬಿಡುಗಡೆ ಮುನ್ನವೇ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸ್ವಯಂಕೃತ ಅಪರಾಧದಿಂದಾಗಿ ತಮ್ಮ ಮೊದಲ ಚಿತ್ರವನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ. ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಮಡೆನೂರು ಮನು ಬಂಧನವಾಗಿದೆ. ಅವರಿಗೆ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಸ್ಯಾಂಡಲ್‌ವುಡ್‌ ನಟರ ಬಗ್ಗೆ ನಾಲಗೆ ಹರಿಯಬಿಟ್ಟಿದ್ದ ಮನು

ಇದಲ್ಲದೆ ಮನು ಸ್ಯಾಂಡಲ್‌ವುಡ್‌ ನಟರ ಬಗ್ಗೆ ಕೀಳಾಗಿ ಮಾತನಾಡಿರುವ ಹಳೆಯ ಆಡಿಯೊ ಕೂಡ ಈಗ ವೈರಲ್‌ ಆಗಿತ್ತು. ಅದರಲ್ಲಿ ಅವರು, ʼʼಶಿವ ರಾಜ್‌ಕುಮಾರ್‌ ಇನ್ನೊಂದು ಆರು ವರ್ಷ ಬದುಕಿದ್ರೆ ಹೆಚ್ಚು, ಸತ್ತು ಹೋಗ್ತಾರೆ ನನಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ ಮಾರ್ಕೆಟ್‌ನಲ್ಲಿರಬಹುದು. ನಟ ದರ್ಶನ್‌ ಈಗಾಗಲೇ ಸತ್ತೇ ಹೋದ. ದರ್ಶನ್‌ ಸರ್‌ಗೆ ಇನ್ನೊಂದು ಆರು ವರ್ಷ ಕ್ರೇಜ್‌ ಇರುತ್ತೆ, ಆದ್ರೆ ಸಿನಿಮಾ ಮಾಡಲ್ಲ. ಈ ಮೂವರ ವಿರುದ್ಧ ಕಾಂಪಿಟೇಶನ್‌ ಕೊಡೋಕೆ ಬಂದಿರೋ ಗಂಡುಗಲಿ ನಾನುʼʼ ಎಂದು ಹೇಳಿದ್ದಾರೆ.

ಈ ಧ್ವನಿ ಮಡೆನೂರು ಮನು ಅವರದ್ದೇ ಎಂದು ಹೇಳಲಾಗುತ್ತಿದೆ. ಮನು ಗೆಳೆಯರೊಂದಿಗೆ ಮದ್ಯ ಸೇವಿಸಿದಾಗ ಈ ರೀತಿ ಮಾತನಾಡಿದ್ದಾರೆ. ಈ ವೇಳೆ ಅಲ್ಲಿದ್ದವರು ಯಾರೋ ಇದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಇದೀಗ ವೈರಲ್‌ ಮಾಡಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.