Rukmini Vasanth: ರುಕ್ಮಿಣಿ ವಸಂತ್ಗೆ ಅವಕಾಶಗಳ ಬಾಗಿಲು ತೆರೆದ ʼಕಾಂತಾರ ಚಾಪ್ಟರ್ 1'; ಕನ್ನಡತಿ ಈಗ ಪರಭಾಷೆಯಲ್ಲೂ ಬ್ಯುಸಿ
ಸದ್ಯ ಪರಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡ ಕಲಾವಿದರ ಪೈಕಿ ರುಕ್ಮಿಣಿ ವಸಂತ್ ಕೂಡ ಒಬ್ಬರು. ಅದರಲ್ಲಿಯೂ ಇತ್ತೀಚೆಗೆ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿರುವ ʼಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದ ರುಕ್ಮಿಣಿ ಅವರ ರಾಜಕುಮಾರಿ ಕನಕವತಿ ಪಾತ್ರ ರಿಷಬ್ ಶೆಟ್ಟಿ ಅವರ ಬೆರ್ಮೆ ಪಾತ್ರದಷ್ಟೇ ಜನಪ್ರಿಯವಾಗಿದೆ. ನಾಯಕನಿಗೆ ಸರಿಸಮನಾಗಿ ನಿಲ್ಲುವ ನಾಯಕಿಯಾಗಿ ಅವರು ಕಾಣಿಸಿಕೊಂಡ ರೀತಿಗೆ, ಪವರ್ಫುಲ್ ನಟನೆಗೆ ನೋಡುಗರು ಫಿದಾ ಆಗಿದ್ದಾರೆ. ಇದರೊಂದಿಗೆ ಅವರಿಗೆ ವಿವಿಧ ಚಿತ್ರರಂಗಗಳಿಂದ ಅವಕಾಶ ಹರಿದು ಬರುತ್ತಿದೆ.
ರುಕ್ಮಿಣಿ ವಸಂತ್ (ಇನ್ಸ್ಟಾಗ್ರಾಮ್ ಚಿತ್ರ). -
Ramesh B
Oct 31, 2025 10:14 PM
ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ʼಕಾಂತಾರʼ ಹವಾ
ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬಂದ ʼಕಾಂತಾರ ಚಾಪ್ಟರ್ 1' ಜಾಗತಿಕವಾಗಿ 867 ಕೋಟಿ ರೂ. ಬಾಚಿಕೊಂಡು ಇತಿಹಾಸ ಬರೆದಿದೆ. ಜತೆಗೆ ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. ಈ ಚಿತ್ರದ ಮೂಲಕ ಹಲವರ ಲಕ್ ಬದಲಾಗಿದ್ದು, ರುಕ್ಮಿಣಿ ವಸಂತ್ ಅವರಿಗೂ ಅದೃಷ್ಟದ ಜತೆಗೆ ಅವಕಾಶಗಳ ಬಾಗಿಲನ್ನು ತೆರೆದಿದೆ. ಒಂದರ ಹಿಂದೆ ಒಂದರಂತೆ ಪರಭಾಷೆಯ, ಸ್ಟಾರ್ ನಟರ ಚಿತ್ರ ಒಪ್ಪಿಕೊಳ್ಳುತ್ತಿದ್ದಾರೆ.
ಹೊಸ ಪ್ರತಿಭೆಗೆ ರುಕ್ಮಿಣಿ ನಾಯಕಿ
ಸ್ನಿಗ್ಧ ಚೆಲುವು, ಮುದ್ದಾಗ ನಗು, ಸಹಜಾಭಿನಯ ಮೂಲಕವೇ ಎಲ್ಲರ ಗಮನ ಸೆಳೆವ ರುಕ್ಮಿಣಿ ವಸಂತ್ ಸದ್ಯ ಬಹು ಬೇಡಿಕೆಯ ನಟಿ. ಸ್ಟಾರ್ ನಟರಿಂದ ಹಿಡಿದು ನವ ಪ್ರತಿಭೆಗಳ ಚಿತ್ರಕ್ಕೂ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಇದೀಗ ಅಂತಹದ್ದೊಂದು ಅವಕಾಶ ಅವರನ್ನು ಅರಸಿಕೊಂಡು ಬಂದಿದೆ. ತಮಿಳು ಮೂಲದ, ಬಹುಭಾಷಾ ಸಂಗೀತ ನಿರ್ದೇಶಕ ವಿದ್ಯಾಸಾಗರ್ ಅವರ ಪುತ್ರ ಹರ್ಷ ವರ್ಧನ್ ಕಾಲಿವುಡ್ಗೆ ಕಾಲಿಡುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ತಮಿಳಿನಲ್ಲಿ ರುಕ್ಮಿಣಿಗೆ 3ನೇ ಚಿತ್ರ
ವಿದ್ಯಾಸಾಗರ್ ಅವರ ಪುತ್ರ ಹರ್ಷ ವರ್ಧನ್ ಈಗಾಗಲೇ ಗಾಯಕ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಾಯಕನಾಗಿ ತಮಿಳು ಚಿತ್ರತಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅವರ ಮೊದಲ ಚಿತ್ರಕ್ಕೆ ಕಾಲಿವುಡ್ನ ಖ್ಯಾತ ನಿರ್ದೇಶಕ ಲಿಂಗುಸ್ವಾಮಿ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ. ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆವಿರುವ ಹಿನ್ನೆಲೆಯಲ್ಲಿ ರುಕ್ಮಿಣಿ ವಸಂತ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಎಲ್ಲವೂ ಅಂದುಕೊಂಡಂತಾದರೆ ಇದು ರುಕ್ಮಿಣಿ ಅವರ 3ನೇ ತಮಿಳು ಚಿತ್ರವಾಗಲಿದೆ. ಈ ಹಿಂದೆ ಅವರು ವಿಜಯ್ ಸೇತುಪತಿ ಅವರೊಂದಿಗೆ ʼಏಸ್ʼ ಮತ್ತು ಶಿವಕಾರ್ತಿಕೇಯನ್ ಅವರ ʼಮದರಾಸಿʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.
ರೊಮ್ಯಾಂಟಿಕ್ ರೋಡ್ ಜರ್ನಿಯ ಕಥೆ?
ಮೂಲಗಳ ಪ್ರಕಾರ ಈ ಚಿತ್ರ ಕಾರ್ತಿ-ತಮನ್ನಾ ಭಾಟಿಯಾ-ಲಿಂಗುಸ್ವಾಮಿ ಕಾಂಬಿನೇಷನ್ನ ʼಪೈಯಾʼ ಚಿತ್ರದಂತೆ ರೊಮ್ಯಾಂಟಿಕ್ ರೋಡ್ ಜರ್ನಿಯ ಕಥೆ ಹೊಂದಿರಲಿದೆಯಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ. ವಿದ್ಯಾಸಾಗರ್ ಇದುವರೆಗೆ 250ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದು, ಕನ್ನಡ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.
ಯಶ್, ಜೂ. ಎನ್ಟಿಆರ್ ಚಿತ್ರಗಳಲ್ಲಿ ರುಕ್ಮಿಣಿ ವಸಂತ್
ಸದ್ಯ ʼಕಾಂತಾರ ಚಾಪ್ಟರ್ 1' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ರುಕ್ಮಿಣಿ ವಸಂತ್ ಬಹುನಿರೀಕ್ಷಿತ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಯಶ್ ಅಭಿನಯದ ʼಟಾಕ್ಸಿಕ್ʼ ಮತ್ತು ಜೂ. ಎನ್ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್ ಮುಂದಿನ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.