ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ’: ‘ಆಪ್ ಕಿ ಅದಾಲತ್’ನಲ್ಲಿ ರಾಕಿಂಗ್ ಸ್ಟಾರ್ ಯಶ್ ಖಡಕ್ ಮಾತು

'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್, ತಾವು 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪ್ರಭು ಶ್ರೀರಾಮನ ದೈವಿಕತೆಯನ್ನು ಪರಿಣಾಮಕಾರಿಯಾಗಿ ತೋರಿಸಲು ಎದುರಾಳಿ ರಾವಣ ಅಷ್ಟೇ ಪ್ರಬಲವಾಗಿರಬೇಕು ಎಂದು ಯಶ್‌ ಹೇಳಿದ್ದಾರೆ.

ʻರಾವಣನ ಪಾತ್ರಕ್ಕೆ ನಾನೇ ಬೆಸ್ಟ್ʼ; 'ಆಪ್ ಕಿ ಅದಾಲತ್' ಶೋನಲ್ಲಿ ಯಶ್ ಮಾತು

-

Avinash GR
Avinash GR Aug 15, 2026 2:21 PM

‘ಟಾಕ್ಸಿಕ್’ ಚಿತ್ರದ ಬೆನ್ನಲ್ಲೇ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿರುವ ರಾಕಿಂಗ್ ಸ್ಟಾರ್ ಯಶ್, ಚಿತ್ರದಲ್ಲಿ ತಾವು ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತು ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ. ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ಜನಪ್ರಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಈ ಕುರಿತು ಕೇಳಲಾದ ಪ್ರಶ್ನೆಗೆ ತಮ್ಮದೇ ಖಡಕ್ ಶೈಲಿಯಲ್ಲಿ ಉತ್ತರಿಸಿದ್ದಾರೆ.

‘ರಾಮನ ಪಾತ್ರವನ್ನೇ ಮಾಡಬಹುದಿತ್ತಲ್ಲವೇ?’

ಕಾರ್ಯಕ್ರಮದಲ್ಲಿ ಮಾತನಾಡಿದ ರಜತ್ ಶರ್ಮಾ, "ನೀವು ಈ ಚಿತ್ರಕ್ಕೆ ಕೇವಲ ನಟರಷ್ಟೇ ಅಲ್ಲ, ಸಹ-ನಿರ್ಮಾಪಕರೂ ಆಗಿದ್ದೀರಿ. ಚಿತ್ರದ ಮೇಲೆ ನಿಮಗೆ ಸಂಪೂರ್ಣ ಹಿಡಿತವಿರುವಾಗ, ರಾಮನ ಪಾತ್ರವನ್ನು ಬಿಟ್ಟು ರಾವಣನ ಪಾತ್ರವನ್ನೇ ಏಕೆ ಆರಿಸಿಕೊಂಡಿರಿ?" ಎಂದು ಯಶ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ನೇರವಾಗಿ ಉತ್ತರಿಸಿದ ಯಶ್, "ಪರದೆಯ ಮೇಲೆ ಶ್ರೀರಾಮನ ಒಳ್ಳೆಯತನ ಮತ್ತು ದೈವಿಕತೆಯನ್ನು ಪರಿಣಾಮಕಾರಿಯಾಗಿ ತೋರಿಸಬೇಕೆಂದರೆ, ಎದುರಾಳಿ ರಾವಣನ ಪಾತ್ರ ಮತ್ತು ಆತನ ಕೆಟ್ಟತನವೂ ಅಷ್ಟೇ ಪ್ರಬಲವಾಗಿ, ಅಷ್ಟೇ ಶಕ್ತಿಯುತವಾಗಿ ಕಾಣಿಸಿಕೊಳ್ಳಬೇಕಾಗುತ್ತದೆ" ಎಂದರು.

‘ನನಗಿಂತ ಉತ್ತಮವಾಗಿ ಯಾರೂ ನಿಭಾಯಿಸಲಾಗದು’

ಯಶ್ ಅವರ ಮಾತಿಗೆ ಮುಂದುವರಿದು, "ಹಾಗಾದರೆ ಕೆಟ್ಟತನವನ್ನು ತೋರಿಸುವ ಗುತ್ತಿಗೆಯನ್ನು ನೀವೇ ತೆಗೆದುಕೊಂಡಿದ್ದೀರಾ?" ಎಂದು ರಜತ್ ಶರ್ಮಾ ನಗುತ್ತಲೇ ಕೇಳಿದ ಪ್ರಶ್ನೆಗೆ, ಯಶ್ ಆತ್ಮವಿಶ್ವಾಸದಿಂದ ಉತ್ತರ ನೀಡಿದರು. "ಹೌದು, ಆ ರಾವಣನ ಪ್ರಭಾವವನ್ನು ನನಗಿಂತ ಉತ್ತಮವಾಗಿ ಯಾರೂ ತೆರೆಯ ಮೇಲೆ ತರಲು ಸಾಧ್ಯವಿಲ್ಲ. ಹಾಗಂತ ಕೇವಲ ನೆಗೆಟಿವ್ ಪಾತ್ರಗಳಲ್ಲಷ್ಟೇ ಅಲ್ಲ, ಪಾಸಿಟಿವ್ ಪಾತ್ರಗಳನ್ನು ಮಾಡಿದಾಗಲೂ ನನಗೆ ಅಷ್ಟೇ ಆತ್ಮವಿಶ್ವಾಸವಿರುತ್ತದೆ; ನನಗಿಂತ ಉತ್ತಮವಾಗಿ ಯಾರೂ ಕಾಣಿಸಲು ಸಾಧ್ಯವಿಲ್ಲ. ರಾಮಾಯಣದಲ್ಲಿ ರಾವಣನಿಗೆ ಸಾವೇ ಇಲ್ಲ, ಬ್ರಹ್ಮಾಂಡದ ವರಗಳೆಲ್ಲವೂ ಆತನ ಬಲವಾಗಿವೆ, ಆತನನ್ನು ಯಾರಿಂದಲೂ ಸೋಲಿಸಲು ಸಾಧ್ಯವೇ ಇಲ್ಲ ಎಂಬ ಸನ್ನಿವೇಶ ಪ್ರೇಕ್ಷಕರಿಗೆ ಸಂಪೂರ್ಣವಾಗಿ ಮನದಟ್ಟಾಗಬೇಕು. ಅಂಥ ಪ್ರಬಲ ಶಕ್ತಿಯನ್ನು ಪ್ರಭು ಶ್ರೀರಾಮ ಸಂಹರಿಸಿದಾಗ ಮಾತ್ರ ಆ ಕ್ಷಣಕ್ಕೆ ನಿಜವಾದ ರೋಮಾಂಚನ ಮತ್ತು ದೈವಿಕ ಮಹತ್ವ ಸಿಗುತ್ತದೆ" ಎನ್ನುತ್ತಾರೆ ಯಶ್‌.

Yash Meets Shivanna: ರಾಕಿಭಾಯ್‌ ಮೀಟ್ಸ್‌ ಶಿವಣ್ಣ; ಶಿವ ರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌

ಅಹಂ ಬದಿಗಿಟ್ಟು ಕೆಲಸ ಮಾಡಿದ್ದೇವೆ

ಸಿನಿಮಾದ ಆಶಯದ ಬಗ್ಗೆ ಮಾತನಾಡಿದ ಅವರು, "ಇವನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ಅಂದುಕೊಂಡಾಗ ಶ್ರೀರಾಮ ಆತನನ್ನು ಮಣಿಸುತ್ತಾನೆ. ಆಗಲೇ ಅಲ್ಲವೇ ಅದು ನಿಜವಾದ ರಾಮಾಯಣವಾಗುವುದು? ಈ ಅದ್ಭುತ ಕಾವ್ಯವನ್ನು ತೆರೆಯ ಮೇಲೆ ತರಲು ನಾವೆಲ್ಲರೂ ನಮ್ಮ ವೈಯಕ್ತಿಕ ಅಹಂಗಳನ್ನು ಬದಿಗಿಟ್ಟು ಕೆಲಸ ಮಾಡಿದ್ದೇವೆ" ಎಂದು ಯಶ್ ತಿಳಿಸಿದ್ದಾರೆ.

ಸದ್ಯ ಯಶ್ ಅವರ ಈ ಮಾತುಗಳು ಮತ್ತು ರಾವಣನ ಪಾತ್ರದ ಮೇಲಿನ ಅವರ ಆತ್ಮವಿಶ್ವಾಸ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ‘ರಾಮಾಯಣ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.