ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳಾ ಪ್ರಧಾನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ತಮಿಳಿನ ಖ್ಯಾತ ನಟಿ ಐಶ್ವರ್ಯಾ ರಾಜೇಶ್!

ತಮಿಳು ಹಾಗೂ ತೆಲುಗಿನ ಪ್ರತಿಭಾವಂತ ನಟಿ ಐಶ್ವರ್ಯಾ ರಾಜೇಶ್ ಕೊನೆಗೂ ಅನಿವಾಸಿ ಭಾರತೀಯ ಅಮೋಘ್ ವಿಜಯ್ ನಿರ್ದೇಶಿಸಲಿರುವ ಹೊಸ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಯುಎಸ್‌ಎ ಮೂಲದ 'ಮ್ಯಾವ್ರಿಕ್ ಪ್ರೊಡಕ್ಷನ್ಸ್' ನಿರ್ಮಿಸಲಿರುವ ಈ ಮಹಿಳಾ ಪ್ರಧಾನ ಸಿನಿಮಾವು ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಮೂಡಿಬರಲಿದೆ.

‌ಮಹಿಳಾ ಪ್ರಧಾನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಐಶ್ವರ್ಯಾ ರಾಜೇಶ್ ಎಂಟ್ರಿ

-

Avinash GR
Avinash GR Jun 10, 2026 4:59 PM

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಗುರುತಿಸಿಕೊಂಡಿರುವ ನಟಿ ಐಶ್ವರ್ಯಾ ರಾಜೇಶ್ ಅವರು ಈಗ ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯ ಅಮೋಘ್ ವಿಜಯ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಐಶ್ವರ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದು, ಇದು ಮಹಿಳಾ ಪ್ರಧಾನ ಚಿತ್ರ ಎಂದು ತಿಳಿದುಬಂದಿದೆ. ಇದು ನಟಿ ಐಶ್ವರ್ಯಾ ರಾಜೇಶ್ ಅವರ ವೃತ್ತಿಜೀವನದ ಮೊದಲ ಅಧಿಕೃತ ಕನ್ನಡ ಸಿನಿಮಾವಾಗಿದೆ.

ಕಳೆದ ಒಂದು ದಶಕದಿಂದ ಅಮೆರಿಕದಲ್ಲಿ ನೆಲೆಸಿರುವ ಅಮೋಘ್ ವಿಜಯ್ ಅವರಿಗೆ ಕನ್ನಡದಲ್ಲೊಂದು ಸಿನಿಮಾ ನಿರ್ದೇಶಿಸಬೇಕೆಂಬ ದೀರ್ಘಕಾಲದ ಆಸೆ ಇತ್ತು. 2016ರಲ್ಲಿ ಅಮೆರಿಕಕ್ಕೆ ವಲಸೆ ಹೋದಾಗಿನಿಂದಲೂ ಕನ್ನಡ ಚಿತ್ರರಂಗದೊಂದಿಗೆ ನಿರಂತರ ನಂಟು ಕಾಯ್ದುಕೊಂಡಿದ್ದ ಅವರ ಕನಸು ಈಗ ಕೊನೆಗೂ ನನಸಾಗುತ್ತಿದೆ.

ತೆಲುಗು ಹಾಗೂ ತಮಿಳಿನಲ್ಲೂ ತೆರೆಗೆ ಬರಲಿದೆ ಸಿನಿಮಾ

ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅಮೋಘ್ ವಿಜಯ್, ತಾವೇ ಒಂದು ಸ್ವತಂತ್ರ ಹಾಗೂ ವಿಭಿನ್ನ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅಮೆರಿಕ ಮೂಲದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮ್ಯಾವ್ರಿಕ್ ಪ್ರೊಡಕ್ಷನ್ಸ್’ (Mvrick Productions) ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸದ್ಯ ಸಿನಿಮಾವು ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಈ ಚಿತ್ರವನ್ನು ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದು, ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಅಧಿಕೃತ ವಿವರಗಳು ಹೊರಬೀಳಲಿವೆ.

ಧ್ರುವ ಸರ್ಜಾ, ಧನಂಜಯ್ ಸಿನಿಮಾಗಳಲ್ಲಿ ಕೇಳಿಬಂದಿದ್ದ ಐಶ್ವರ್ಯಾ ಹೆಸರು

ಐಶ್ವರ್ಯಾ ರಾಜೇಶ್ ಅವರ ಹೆಸರು ಈ ಹಿಂದಿನಿಂದಲೂ ಕನ್ನಡ ಚಿತ್ರರಂಗದೊಂದಿಗೆ ಹಲವು ಬಾರಿ ಕೇಳಿಬಂದಿತ್ತಾದರೂ, ಯಾವುದೇ ಪ್ರಾಜೆಕ್ಟ್‌ಗಳು ಅಧಿಕೃತವಾಗಿ ಕೈಗೂಡಿರಲಿಲ್ಲ. ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರದಲ್ಲಿ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಸಿನಿಮಾವೊಂದರಲ್ಲೂ ಐಶ್ವರ್ಯಾ ನಟಿಸಲಿದ್ದಾರೆ ಎಂಬ ವದಂತಿಗಳಿದ್ದವು. ಆದರೆ ಈಗ, ಅಮೋಘ್ ವಿಜಯ್ ಅವರ ಚಿತ್ರದ ಮೂಲಕವೇ ಅವರು ಚೊಚ್ಚಲ ಪ್ರವೇಶ ಮಾಡುತ್ತಿರುವುದು ಖಚಿತವಾಗಿದೆ.

ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟಿ

ಕಳೆದ ಹಲವು ವರ್ಷಗಳಿಂದ ಐಶ್ವರ್ಯಾ ರಾಜೇಶ್ ಅವರು ಕಮರ್ಷಿಯಲ್ ಪಾತ್ರಗಳಿಗಿಂತ ಹೆಚ್ಚಾಗಿ, ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನೇ ಆಯ್ದುಕೊಳ್ಳುವ ಮೂಲಕ ಹೆಸರು ಮಾಡಿದ್ದಾರೆ. ತಮಿಳಿನ ‘ಕಾಕ ಮುಟ್ಟೈ’ ಚಿತ್ರದಿಂದ ಹಿಡಿದು, ಮಹಿಳಾ ಕ್ರಿಕೆಟರ್ ಪಾತ್ರದಲ್ಲಿ ಮಿಂಚಿದ್ದ ‘ಕನಾ’ ಹಾಗೂ ಸೈಕಲಾಜಿಕಲ್ ಡ್ರಾಮಾ ‘ಫರ್ಹಾನಾ’ ಚಿತ್ರದವರೆಗೆ, ವೈವಿಧ್ಯಮಯ ಕಥೆಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯ ತಮಗಿದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ತೆಲುಗು ನಟ ತಿರುವೀರ್ ಈಗ ಪ್ಯಾನ್‌ ಇಂಡಿಯಾ ಸ್ಟಾರ್‌; ಹೊಸ ಚಿತ್ರಕ್ಕೆ ಐಶ್ವರ್ಯಾ ರಾಜೇಶ್ ಸಾಥ್‌

ಪ್ರಸ್ತುತ ಅವರು ತಮಿಳು ಮತ್ತು ತೆಲುಗಿನ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಿರ್ದೇಶಕ ಅಮೋಘ್ ವಿಜಯ್ ಅವರಿಗೆ ತಮ್ಮ ಮೊದಲ ಕನ್ನಡ ಚಿತ್ರದಲ್ಲೇ ಐಶ್ವರ್ಯಾ ರಾಜೇಶ್ ಅವರಂತಹ ಅದ್ಭುತ ನಟಿಯ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ದೊಡ್ಡ ಮೈಲಿಗಲ್ಲಾಗಿದೆ. ಈ ಚಿತ್ರದ ಪ್ರಮುಖ ಪಾತ್ರಗಳಿಗಾಗಿ ಸ್ಯಾಂಡಲ್‌ವುಡ್‌ನ ಕೆಲವು ಪ್ರಸಿದ್ಧ ನಟರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.