ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಯಾಂಡಲ್‌ವುಡ್‌ನಲ್ಲಿ 14 ವರ್ಷ ಪೂರೈಸಿದ ʻಡಿಂಪಲ್‌ ಕ್ವೀನ್‌ʼ ರಚಿತಾ ರಾಮ್; ಬುಲ್‌ಬುಲ್‌ನಿಂದ ಲೇಡಿ ಸೂಪರ್‌ ಸ್ಟಾರ್‌ವರೆಗೆ

'ಡಿಂಪಲ್ ಕ್ವೀನ್' ರಚಿತಾ ರಾಮ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಯಶಸ್ವಿ 14 ವರ್ಷಗಳು ಪೂರೈಸಿವೆ. ಕಿರುತೆರೆಯಿಂದ ಬೆಳ್ಳಿತೆರೆಯ 'ಬುಲ್‌ಬುಲ್' ಆಗಿ ಮಿಂಚಿದ ಇವರು, ಇಂದು ಕನ್ನಡದ 'ಲೇಡಿ ಸೂಪರ್ ಸ್ಟಾರ್' ಅಂತ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ 14 ವರ್ಷ ಪೂರೈಸಿದ ʻಬುಲ್‌ಬುಲ್ʼ ಬೆಡಗಿ ರಚಿತಾ ರಾಮ್

-

Avinash GR
Avinash GR May 10, 2026 5:41 PM

ಕನ್ನಡ ಚಿತ್ರರಂಗದಲ್ಲಿ ನಾಯಕಿಯರ ಮಾರುಕಟ್ಟೆ ಕ್ಷಣಿಕ ಎನ್ನುವ ಮಾತಿದೆ. ಆದರೆ, ದಶಕ ಕಳೆದರೂ ಅದೇ ಕ್ರೇಜ್, ಅದೇ ಸೌಂದರ್ಯ ಮತ್ತು ಅದೇ 'ಡಿಂಪಲ್' ಜಾದೂ ಉಳಿಸಿಕೊಂಡಿರುವ ಏಕೈಕ ನಟಿ ಎಂದರೆ ಅದು 'ಬುಲ್ ಬುಲ್' ಬ್ಯೂಟಿ ರಚಿತಾ ರಾಮ್. ಸ್ಯಾಂಡಲ್‌ವುಡ್‌ನ 'ಗುಳಿಕೆನ್ನೆಯ ಚೆಲುವೆ' ಎಂದೇ ಖ್ಯಾತರಾಗಿರುವ ರಚ್ಚು, ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ ಭರ್ತಿ 14 ವರ್ಷಗಳು ಪೂರೈಸಿವೆ.

14 ವರ್ಷದಿಂದ ಸ್ಟಾರ್‌ ನಟಿ

ರಚಿತಾ ರಾಮ್ ಅವರ ಸಿನಿ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಕಿರುತೆರೆಯ 'ಅರಸಿ' ಧಾರಾವಾಹಿಯ ಮೂಲಕ 'ಬಿಂದಿಯಾ ರಾಮ್' ಆಗಿ ಮನೆಮಾತಾಗಿದ್ದ ಈ ಪ್ರತಿಭೆ, ಮುಂದೆ 'ರಚಿತಾ ರಾಮ್' ಆಗಿ ಬದಲಾಗಿದ್ದು ಇತಿಹಾಸ. ಚೊಚ್ಚಲ ಸಿನಿಮಾ 'ಬುಲ್ ಬುಲ್'ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತಹ ದಿಗ್ಗಜ ನಟನಿಗೆ ನಾಯಕಿಯಾಗಿ ಆಯ್ಕೆಯಾದಾಗ ಇಡೀ ಗಾಂಧಿನಗರವೇ ಆಶ್ಚರ್ಯಚಕಿತವಾಗಿತ್ತು. ಮೊದಲ ಚಿತ್ರದಲ್ಲೇ ಅಮೋಘ ನಟನೆ ತೋರಿದ ರಚ್ಚು, ಅಂದಿನಿಂದ ಇಂದಿನವರೆಗೆ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿಯಾಗಿ ಅಧಿಪತ್ಯ ಸ್ಥಾಪಿಸಿದ್ದಾರೆ.

Rachita Ram: ʻಲ್ಯಾಂಡ್‌ಲಾರ್ಡ್ʼ ಸಿನಿಮಾದಿಂದ ಬಂತು ಬಿಗ್‌ ಅಪ್‌ಡೇಟ್‌; ರಚ್ಚು ಫ್ಯಾನ್ಸ್‌ ಫುಲ್‌ ಖುಷ್‌

ಸ್ಟಾರ್‌ ನಟರ ಲಕ್ಕಿ ಚಾರ್ಮ್ ರಚ್ಚು

ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲ ಸ್ಟಾರ್‌ ಕಲಾವಿದರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಹೆಗ್ಗಳಿಕೆ ರಚಿತಾ ಅವರದ್ದು. ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮೇಶ್ ಅರವಿಂದ್, ಧ್ರುವ ಸರ್ಜಾ ಅವರಂತಹ ದಿಗ್ಗಜರ ಜೊತೆ ನಟಿಸಿ ಲಕ್ಕಿ ಚಾರ್ಮ್‌ ಎನಿಸಿಕೊಂಡಿದ್ದಾರೆ. ಕೇವಲ ಗ್ಲಾಮರ್ ಗೊಂಬೆಯಾಗದೆ, ಅಭಿನಯಕ್ಕೂ ಪ್ರಾಮುಖ್ಯತೆ ನೀಡುವ ಇವರು ಸದ್ಯ ಕನ್ನಡದ 'ಲೇಡಿ ಸೂಪರ್ ಸ್ಟಾರ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ.

ಪರಭಾಷೆಯಲ್ಲೂ ಮಿಂಚಿದ್ದಾರೆ ರಚಿತಾ

ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ರಚಿತಾ ಅವರ ಖ್ಯಾತಿ ಈಗ ಗಡಿ ದಾಟಿದೆ. ಭಾರತೀಯ ಚಿತ್ರರಂಗದ ತಲೈವಾ ರಜನಿಕಾಂತ್ ಅಭಿನಯದ 'ಕೂಲಿ' ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡುವ ಮೂಲಕ ತಮಿಳು ಚಿತ್ರರಂಗಕ್ಕೂ ಭರ್ಜರಿಯಾಗಿ ಕಾಲಿಟ್ಟಿದ್ದಾರೆ. ಇದರ ಜೊತೆಗೆ ಈ ತಿಂಗಳಲ್ಲೇ ತೆಲುಗಿನ ಎರಡು ದೊಡ್ಡ ಸಿನಿಮಾಗಳು ಅಧಿಕೃತವಾಗಿ ಅನೌನ್ಸ್ ಆಗಲಿದ್ದು, ಟಾಲಿವುಡ್‌ನಲ್ಲೂ ರಚ್ಚು ಹವಾ ಶುರುವಾಗಲಿದೆ. ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆಯುತ್ತಿದೆ.

Rachita Ram: 8 ವರ್ಷಗಳ ಬಳಿಕ ಧ್ರುವ ಸರ್ಜಾಗೆ ಜೋಡಿಯಾಗ್ತಾರೆ ನಟಿ ರಚಿತಾ ರಾಮ್! ಯಾವ ಸಿನಿಮಾ, ಡೈರೆಕ್ಟರ್‌ ಯಾರು?

ರಚ್ಚು ಕೈಯಲ್ಲಿರುವ ಸಿನಿಮಾಗಳು

ಸದ್ಯ ರಚಿತಾ ರಾಮ್ ಕೈತುಂಬಾ ಸಿನಿಮಾಗಳಿವೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ 'ಕ್ರಿಮಿನಲ್', ಸತೀಶ್ ನೀನಾಸಂ ಜೊತೆ ಬಹುನಿರೀಕ್ಷಿತ 'ಅಯೋಗ್ಯ 2' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 14 ವರ್ಷಗಳ ಈ ಸುದೀರ್ಘ ಪಯಣದಲ್ಲಿ ಅದೇ ಡಿಮ್ಯಾಂಡ್ ಮತ್ತು ಅದೇ ಚಾರ್ಮ್ ಉಳಿಸಿಕೊಂಡಿರುವ ಡಿಂಪಲ್ ಕ್ವೀನ್ ಗೆ ಅಭಿಮಾನಿ ಬಳಗವು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದೆ.