Brahmakamala Review: ತಾಯ್ತನದ ತುಡಿತ ಜೊತೆಗೆ ಸಮಾಜದ ಮುಖವಾಡ ಬಿಚ್ಚಿಡುವ ʻಬ್ರಹ್ಮಕಮಲʼ
Brahmakamala Movie Review: ಸಮಾಜದಲ್ಲಿ ಸಂತಾನವಿಲ್ಲದ ಹೆಣ್ಣು ಅನುಭವಿಸುವ ಅಪಮಾನ ಹಾಗೂ ಮಾನಸಿಕ ತೊಳಲಾಟವನ್ನು ಸಸ್ಪೆನ್ಸ್ ಥ್ರಿಲ್ಲರ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿರುವ ಪ್ರಯೋಗಾತ್ಮಕ ಚಿತ್ರವಿದು. ಅಪೇಕ್ಷಾ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ತಾಯ್ತನದ ಹಂಬಲ ಮತ್ತು ಸಾಮಾಜಿಕ ಒತ್ತಡವನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ.
-
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮಾದರಿಯ ಪ್ರಯೋಗಗಳು ಆಗೊಮ್ಮೆ ಹೀಗೊಮ್ಮೆ ನಡೆಯುತ್ತಿರುತ್ತವೆ. ಬಹುತೇಕ ಅಂಥ ಪ್ರಯೋಗಗಳನ್ನು ಮಾಡುವುದು ಹೊಸಬರ ತಂಡಗಳೇ ಎಂಬುದು ವಿಶೇಷ. ಸದ್ಯ ಕನ್ನಡದಲ್ಲೊಂದು ಅಂಥ ಸಿನಿಮಾ ಬಂದಿದೆ. ಹೆಸರು ʻಬ್ರಹ್ಮ ಕಮಲʼ. ನಟಿ ಅದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವು ತೆರೆಕಂಡಿದೆ. ಈ ಸಿನಿಮಾದ ಹೇಗಿದೆ? ರೇಟಿಂಗ್ ಎಷ್ಟು? ಮುಂದೆ ಓದಿ.
ಬ್ರಹ್ಮ ಕಮಲ ಸಿನಿಮಾದ ಕಥೆ ಏನು?
ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗದಿದ್ದರೇ, ಸಮಾಜ ಆ ಹೆಣ್ಣನ್ನು ಹೇಗೆ ನೋಡುತ್ತದೆ, ಎಷ್ಟೆಲ್ಲಾ ಚುಚ್ಚುಮಾತುಗಳಿಂದ ಹಿಂಸಿಸುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಂಥದ್ದೇ ಒಂದು ಸಂಕಟದೊಂದಿಗೆ ಜೀವನವನ್ನು ದೂಡುತ್ತಿರುವ ಹೆಣ್ಣು ಅಪೇಕ್ಷಾ (ಅದ್ವಿತಿ ಶೆಟ್ಟಿ). ಕಥೆ ಆರಂಭವಾಗುವುದೇ ಹೆಣ್ಣನ್ನು ಬಂಜೆ ಎಂದು ಹಂಗಿಸುವ ದೃಶ್ಯಗಳಿಂದ. ನಂತರ ಅಪೇಕ್ಷಾ ತುಂಬು ಗರ್ಭಿಣಿ ಮತ್ತು ಆಕೆ ಒಬ್ಬಳೇ ಮುಂದೆ ನಿಂತು ಸೀಮಂತ ಮಾಡಿಸಿಕೊಳ್ಳುವ ಕಾರ್ಯಕ್ರಮ ಇಟ್ಟುಕೊಂಡಿದ್ದಾಳೆ. ಅದನ್ನು ಯಶಸ್ವಿಯಾಗಿಯೂ ಮುಗಿಸುತ್ತಾಳೆ. ನಂತರವೇ ಎದುರಾಗುವುದು ಅಸಲಿ ಟ್ವಿಸ್ಟ್!
ಅಸಲಿಗೆ, ಅಪೇಕ್ಷಾ ಗರ್ಭಿಣಿಯೇ ಅಲ್ಲ. ಅದು ಸಿನಿಮಾ ಆರಂಭವಾದ ಕೆಲ ನಿಮಿಷಗಳಲ್ಲಿ ಗೊತ್ತಾಗುತ್ತದೆ. ಅಲ್ಲಿಂದ ಪ್ರೇಕ್ಷಕರಲ್ಲಿ ಕುತೂಹಲ ಗರಿಗೆದರುತ್ತದೆ. ಅಷ್ಟಕ್ಕೂ ಇಂಥದ್ದೊಂದು ಡ್ರಾಮಾವನ್ನು ಅಪೇಕ್ಷಾ ಮಾಡಿದ್ದೇಕೆ? ಎಲ್ಲರೂ ಇದ್ದು ಆಕೆ ಏಕೆ ಒಬ್ಬಳೇ ಇರುತ್ತಾಳೆ? ಆಕೆಯ ಗಂಡು ಯಾರು ಎಂಬ ಪ್ರಶ್ನೆಗಳೊಂದಿಗೆ ಸಿನಿಮಾವು ರೋಚಕ ಆರಂಭವನ್ನೇ ಪಡೆದುಕೊಳ್ಳುತ್ತದೆ. ಅಂತಿಮವಾಗಿ ಸಾಕಷ್ಟು ಟ್ವಿಸ್ಟ್‌ಗಳ ಜೊತೆಗೆ ಸಂದೇಶವನ್ನೂ ನೀಡಿ, ಸಿನಿಮಾ ಮುಗಿಸಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ.
ಮೇಕಿಂಗ್ ಹೇಗಿದೆ?
ಸರಿಯಾದ ಸಮಯಕ್ಕೆ ಮಕ್ಕಳು ಆಗದೇ ಇದ್ದಾಗ ಮಹಿಳೆಯು ಎದುರಿಸುವ ಅಪಮಾನ, ಆಕೆಯ ಮನದಾಳದ ತೊಳಲಾಟವೇ ಚಿತ್ರದ ಕಥೆಯ ಮೂಲ ಜೀವಾಳ. ಸಂತಾನೋತ್ಪತ್ತಿಯ ವಿಚಾರದಲ್ಲಿ ಸಮಾಜ ಹೆಣ್ಣಿನ ಮೇಲೆ ಹೇರುವ ಅತಿಯಾದ ಒತ್ತಡ ಮತ್ತು ದೋಷ ಯಾರಲ್ಲೇ ಇದ್ದರೂ ಅಂತಿಮವಾಗಿ ಹೆಣ್ಣನ್ನೇ ಹೊಣೆ ಮಾಡುವ ಸಮಾಜದ ಮನಸ್ಥಿತಿಯನ್ನು ʻಬ್ರಹ್ಮ ಕಮಲʼ ಸಿನಿಮಾವು ಮನಸ್ಸಿಗೆ ನಾಟುವಂತೆ ಪ್ರಶ್ನಿಸುತ್ತದೆ. ತಾಯ್ತನ ಕಥೆ ಇದೆ ಎಂದಮಾತ್ರಕ್ಕೆ, ಇದು ಭಾವನಾತ್ಮಕ ಜರ್ನಿ ಎಂದುಕೊಳ್ಳುವಂತಿಲ್ಲ. ಇಡೀ ಕಥೆ ಒಂದೇ ರಾತ್ರಿಯಲ್ಲಿ ನಡೆಯವುದರಿಂದ ಇಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಕಥೆಯೂ ಇದೆ. ಅಪೇಕ್ಷಾ ಕಥೆಯ ಜೊತೆಗೆ ಮತ್ತೊಂದು ದಂಪತಿಯ ಕಥೆಯೂ ರೋಚಕವಾಗಿ ಸಾಗುತ್ತದೆ. ಆ ದಂಪತಿಗೂ ಮತ್ತು ಅಪೇಕ್ಷಾಗೂ ಏನು ಕನೆಕ್ಷನ್ ಅನ್ನೋದು ಕೂಡ ಕುತೂಹಲಕಾರಿಯಾಗಿಯೇ ಮೂಡಿಬಂದಿದೆ.
Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ `ಬ್ರಹ್ಮ ಕಮಲ' ಟ್ರೈಲರ್ ಔಟ್!
ಸಿನಿಮಾದ ಅವಧಿಯು 1.47 ಗಂಟೆ ಇರುವುದು ಇದರ ಒಂದು ಹೈಲೈಟ್ ಎನ್ನಬಹುದು. ಅನವಶ್ಯಕ ದೃಶ್ಯಗಳಿಲ್ಲದೇ, ಕಥೆಯು ನೇರವಾಗಿ ಸಾಗುತ್ತದೆ. ಆದರೆ, ಕೆಲವೊಂದು ದೃಶ್ಯಗಳನ್ನು ಒಂದಷ್ಟು ಮೊನಚಾಗಿ ಬರೆಯುವ ಅವಕಾಶ ಇತ್ತು. ಹಾಗೆಯೇ, ಮೇಕಿಂಗ್ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ನೀಡಿದ್ದರೆ, ʻಬ್ರಹ್ಮ ಕಮಲʼ ಸೊಗಸು ಹೆಚ್ಚುತ್ತಿತ್ತು. ಹಾಗಾಗಿ, ಈ ಸಿನಿಮಾ ಮೇಕಿಂಗ್ ವಿಚಾರದಲ್ಲಿ ಸಾಧಾರಣ ಎನಿಸುತ್ತದೆ. ಹಾಡುಗಳಿಗೆ ಜಾಸ್ತಿ ಒತ್ತು ನೀಡಿಲ್ಲ, ಹಿನ್ನೆಲೆ ಸಂಗೀತ ಸುಮಾರಾಗಿದೆ. ಬ್ರಹ್ಮಕಮಲ ಹೂವು ರಾತ್ರಿ ಸಮಯದಲ್ಲಿ ಅರಳುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಅದು ಬಾಡಿಹೋಗುತ್ತದೆ. ಹಾಗಾಗಿ, ಅದನ್ನೇ ಇಲ್ಲಿ ರೂಪಕವಾಗಿ ಬಳಸಿಕೊಂಡಿರುವುದು ವಿಶೇಷ.
ಮಿಂಚುವ ಅದ್ವಿತಿ ಶೆಟ್ಟಿ
ಈ ಸಿನಿಮಾದ ಕೇಂದ್ರ ಪಾತ್ರಧಾರಿಯಾದ ಅದ್ವಿತಿ ಶೆಟ್ಟಿ ಉತ್ತಮವಾಗಿ ಅಭಿನಯಿಸಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಮಾಗಿದ ನಟನೆಉ ನೀಡಿದ್ದಾರೆ. ಅವರ ವೃತ್ತಿ ಜೀವನಕ್ಕೆ ಇದೊಂದು ಸವಾಲಿನ ಪಾತ್ರವೇ ಸರಿ. ಋತು ಚೈತ್ರಾ, ಲೋಕೇಂದ್ರ ಸೂರ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಪರಿಮಳಾ ಸುಬ್ರಮಣ್ಯ, ಮಮತಾ ರಾಹುತ್ ಮುಂತಾದವರು ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ..
ತಾಯ್ತನದ ತುಡಿತ ಹಾಗೂ ಹೆಣ್ಣಿನ ಅಂತರಂಗದ ವೇದನೆಯನ್ನು ಭಾವನಾತ್ಮಕವಾಗಿ ಕಟ್ಟಿಕೊಡುವಲ್ಲಿ ಚಿತ್ರತಂಡ ಭಾಗಶಃ ಯಶಸ್ವಿಯಾಗಿದೆ. ಮೇಕಿಂಗ್‌ನಲ್ಲಿನ ಕೆಲ ಮಿತಿಗಳನ್ನು ಸೈಡಿಗಿಟ್ಟರೆ ‘ಬ್ರಹ್ಮ ಕಮಲ’ ಒಂದು ಅರ್ಥಪೂರ್ಣ ಸಂದೇಶವುಳ್ಳ ಫ್ಯಾಮಿಲಿ ಸಿನಿಮಾ ಎನ್ನಬಹುದು.
ಚಿತ್ರ ವಿಮರ್ಶೆ: ಬ್ರಹ್ಮ ಕಮಲ
ತಾರಾಗಣ: ಅದ್ವಿತಿ ಶೆಟ್ಟಿ, ಋತು ಚೈತ್ರಾ, ಲೋಕೇಂದ್ರ ಸೂರ್ಯ, ಸಿದ್ದು ಪೂರ್ಣಚಂದ್ರ, ಬಲ ರಾಜ್ವಾಡಿ, ಆಟೋ ನಾಗರಾಜ್, ಪರಿಮಳಾ ಸುಬ್ರಮಣ್ಯ, ಮುಂತಾದವರು
ನಿರ್ದೇಶನ: ಸಿದ್ದು ಪೂರ್ಣಚಂದ್ರ
ಅವಧಿ: 1 ಗಂಟೆ 47 ನಿಮಿಷ
ರೇಟಿಂಗ್: 3/5