ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prabhas: ‘ಕಲ್ಕಿ 2’ ಅಡ್ಡದಿಂದ ದೀಪಿಕಾ ಪಡುಕೋಣೆ‌ ಔಟ್‌; ಸೈಲೆಂಟ್‌ ಆಗಿ ಅಖಾಡಕ್ಕಿಳಿದ ನಟಿ ಆಲಿಯಾ ಭಟ್!

ಪ್ರಭಾಸ್ ನಟನೆಯ ಬ್ಲಾಕ್‌ಬಸ್ಟರ್ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್‌ನಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಮೊದಲ ಭಾಗದ 'ಸುಮತಿ' ಪಾತ್ರಧಾರಿ ದೀಪಿಕಾ ಪಡುಕೋಣೆ ಸೀಕ್ವೆಲ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಈಗ ಆ ಸಿನಿಮಾಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ರಹಸ್ಯವಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ಸುಮತಿ ಪಾತ್ರವನ್ನು ಮಾಡುತ್ತಿಲ್ಲ.

ಪ್ರಭಾಸ್‌ ನಟನೆಯ ʻಕಲ್ಕಿ 2ʼ ಸಿನಿಮಾಗೆ ಆಲಿಯಾ ಭಟ್‌ ಎಂಟ್ರಿ!

-

Avinash GR
Avinash GR Jun 16, 2026 3:49 PM

ಪ್ರಭಾಸ್ ಮತ್ತು ನಿರ್ದೇಶಕ ನಾಗ್ ಅಶ್ವಿನ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಸೈನ್ಸ್ ಫಿಕ್ಷನ್ ಸಿನಿಮಾ ‘ಕಲ್ಕಿ 2898 ಎಡಿ’ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗೆಲುವು ಕಂಡಿತ್ತು. ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ದಿಗ್ಗಜರ ನಟರು ಬಣ್ಣ ಹಚ್ಚಿದ್ದ ಈ ಚಿತ್ರದ ಸೀಕ್ವೆಲ್ ಆಗಿ ಬರಲಿರುವ ‘ಕಲ್ಕಿ 2’ ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯ ಈ ಚಿತ್ರದ ಕಡೆಯಿಂದ ಒಂದು ಬಿಗ್‌ ಅಪ್ಡೇಟ್‌ ಸಿಕ್ಕಿದೆ.

ದೀಪಿಕಾ ಬದಲು ಆಲಿಯಾ ಭಟ್‌ ಬಂದಿಲ್ಲ!

ಹೌದು, ‘ಕಲ್ಕಿ’ ಸಿನಿಮಾದ ಸೀಕ್ವೆಲ್‌ಗೆ ಬಾಲಿವುಡ್‌ನ ನಟಿ ಆಲಿಯಾ ಭಟ್ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಮೊದಲ ಭಾಗದಲ್ಲಿದ್ದ 'ಸುಮತಿ' ಪಾತ್ರವನ್ನು ದೀಪಿಕಾ ಪಡುಕೋಣೆ ಅವರು ನಿಭಾಯಿಸಿದ್ದರು. ಆದರೆ ಅವರನ್ನು ಸೀಕ್ವೆಲ್‌ನಿಂದ ಕೈಬಿಡಲಾಗಿದೆ. ಅದನ್ನು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ಹೀಗಾಗಿ ಆ ಪಾತ್ರವನ್ನು ಮುಂದೆ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಹಾಗಂತ, ಆಲಿಯಾ ಭಟ್‌ ದೀಪಿಕಾ ಅವರ ಜಾಗವನ್ನ ಆಕ್ರಮಿಸಿಕೊಂಡಿಲ್ಲ, ಅವರೇನೂ ಸುಮತಿ ಪಾತ್ರವನ್ನು ಮಾಡುತ್ತಿಲ್ಲ. ಬದಲಿಗೆ, ಕಲ್ಕಿ 2 ಸಿನಿಮಾದಲ್ಲಿ ಕಥೆಗೆ ದೊಡ್ಡ ತಿರುವು ನೀಡುವಂತಹ ಒಂದು ಪವರ್‌ಫುಲ್ ಪಾತ್ರವನ್ನು ಆಲಿಯಾ ನಿಭಾಯಿಸಲಿದ್ದಾರೆ ಎನ್ನಲಾಗಿದೆ.

ಶೂಟಿಂಗ್‌ನಲ್ಲಿ ಭಾಗಿಯಾದ ಆಲಿಯಾ ಭಟ್

ಈಗಾಗಲೇ ಆಲಿಯಾ ಭಟ್ ತಮ್ಮ ಪಾತ್ರಕ್ಕೆ ಸಂಬಂಧಿಸಿದ ಚಿತ್ರೀಕರಣವನ್ನು ಕೂಡ ಯಾರಿಗೂ ತಿಳಿಯದಂತೆ ಗುಟ್ಟಾಗಿ ಪೂರ್ಣಗೊಳಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಕಳೆದ ತಿಂಗಳು ಹೈದರಾಬಾದ್‌ನಲ್ಲಿ ನಡೆದ ‘ಕಲ್ಕಿ-2’ ಚಿತ್ರದ ಎರಡನೇ ಶೆಡ್ಯೂಲ್‌ನಲ್ಲಿ ಆಲಿಯಾ ಸ್ವತಃ ಭಾಗವಹಿಸಿದ್ದರು ಎನ್ನಲಾಗಿದೆ. ಅಲ್ಲಿ ಅವರ ಸುಮಾರು ಐದು ದಿನಗಳ ಕಾಲ ಪ್ರಮುಖ ಸನ್ನಿವೇಶಗಳನ್ನು ನಿರ್ದೇಶಕ ನಾಗ್ ಅಶ್ವಿನ್ ರಹಸ್ಯವಾಗಿ ಶೂಟ್ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಅವರು ಆಲಿಯಾ ಅವರಿಗಾಗಿ ಒಂದು ವಿಶಿಷ್ಟ ಪಾತ್ರವನ್ನು ಡಿಸೈನ್ ಮಾಡಿದ್ದು, ಈ ಪಾತ್ರವು ʻಕಲ್ಕಿ 2ʼ ಸಿನಿಮಾವನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ಯಲಿದೆ ಎಂದು ಹೇಳಲಾಗುತ್ತಿದೆ.

Alia Bhatt: ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಲಿಯಾ-ರಣಬೀರ್; ಕ್ಯೂಟ್‌ ಫೋಟೋಸ್‌ ವೈರಲ್‌

ಎರಡನೇ ಬಾರಿಗೆ ತೆಲುಗು ಚಿತ್ರದಲ್ಲಿ ಆಲಿಯಾ

ರಾಜಮೌಳಿ ಅವರ ‘ಆರ್‌ಆರ್‌ಆರ್’ (RRR) ಚಿತ್ರದಲ್ಲಿ ‘ಸೀತಾ’ ಪಾತ್ರದ ಮೂಲಕ ಈಗಾಗಲೇ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿರುವ ಆಲಿಯಾ ಭಟ್, ಈಗ ಈ ಪ್ರತಿಷ್ಠಿತ ಸೈನ್ಸ್ ಫಿಕ್ಷನ್ ಸಿನಿಮಾದ ಸೀಕ್ವೆಲ್‌ನ ಭಾಗವಾಗುವ ಮೂಲಕ ಮತ್ತೊಮ್ಮೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಕಲ್ಕಿ 2 ರಲ್ಲಿ ಆಲಿಯಾ ಇದ್ದಾರೆ ಎಂಬ ಸುದ್ದಿ ವೈರಲ್‌ ಆಗುತ್ತಿದೆ ವಿನಃ ಈವರೆಗೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.