ʻಗಿಚ್ಚಿ ಗಿಲಿ ಗಿಲಿʼ ಖ್ಯಾತಿಯ ನಟ ಪ್ರಶಾಂತ್‌ರನ್ನು ಟ್ರೋಲ್ ಮಾಡಿದವರಿಗೆ ಸಖತ್ ಆಗಿಯೇ ತಿರುಗೇಟು ಕೊಟ್ಟ ನಟಿ ಅನುಪಮಾ ಗೌಡ
'ಗಿಚ್ಚಿ ಗಿಲಿಗಿಲಿ' ಶೋ ಮೂಲಕ ಗುರುತಿಸಿಕೊಂಡಿರುವ ಪ್ರಶಾಂತ್ ಗೌಡ ಅವರು ಕೃತಿ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಯ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಕೆಲವರು ಕೀಳುಮಟ್ಟದ ಕಾಮೆಂಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನಟಿ ಅನುಪಮಾ ಗೌಡ ಅವರು ಪ್ರಶಾಂತ್ ಪರ ಧ್ವನಿ ಎತ್ತಿದ್ದು, "ಬಣ್ಣ ಮತ್ತು ಸೌಂದರ್ಯ ಶಾಶ್ವತವಲ್ಲ, ಗುಣ ಮುಖ್ಯ" ಎಂದು ಟ್ರೋಲಿಗರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
-
'ಗಿಚ್ಚಿ ಗಿಲಿಗಿಲಿ' ಶೋ ಮೂಲಕ ಮನೆಮಾತಾಗಿರುವ ಪ್ರಶಾಂತ್ ಗೌಡ ಇತ್ತೀಚೆಗಷ್ಟೇ ಕೃತಿ ಗೌಡ ಅವರೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗುತ್ತಿರುವ ಈ ಜೋಡಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಈ ಸಂತಸದ ನಡುವೆಯೇ ಕೆಲವರು ಮಾಡಿರುವ ಕೀಳು ಮಟ್ಟದ ಕಾಮೆಂಟ್ಸ್ ಈಗ ಚರ್ಚೆಗೆ ಕಾರಣವಾಗಿದೆ.
ಪ್ರಶಾಂತ್ ಅವರ ರೂಪ ಹಾಗೂ ಆರ್ಥಿಕ ಸ್ಥಿತಿಯನ್ನು ಗುರಿಯಾಗಿಸಿಕೊಂಡು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು. "ದುಡ್ಡಿದ್ದರೆ ಮೂದೇವಿಯಂಥ ಹುಡುಗನಿಗೂ ಶ್ರೀದೇವಿ ಥರದ ಹುಡುಗಿ ಸಿಗ್ತಾಳೆ", "ದುಡ್ಡು ಇರೋರನ್ನೇ ಲವ್ ಮಾಡ್ತಾರೆ ಅನ್ನೋಕೆ ಇದೇ ಸಾಕ್ಷಿ" ಎಂಬಂತಹ ಕೀಳು ಮಟ್ಟದ ಕಾಮೆಂಟ್‌ಗಳು ಕೇಳಿಬಂದಿದ್ದವು. ಇದೀಗ ಪ್ರಶಾಂತ್ ಅವರ ಬೆಂಬಲಕ್ಕೆ ನಿಂತಿರುವ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ, ಈ ಟ್ರೋಲ್ ಸಂಸ್ಕೃತಿಯ ವಿರುದ್ಧ ಕಿಡಿಕಾರಿದ್ದಾರೆ.
Bhavya Gowda: ಅನುಪಮಾ ಗೌಡ ನಿರೂಪಣೆಯ Boys Vs Girls ಶೋನಿಂದ ಭವ್ಯಾ ಗೌಡ ಹೊರನಡೆದಿದ್ದೇಕೆ?: ಅಸಲಿ ಕಾರಣ ಏನು?
ಅನುಪಮಾ ಗೌಡ ಹೇಳಿದ್ದೇನು?
ಪ್ರಶಾಂತ್ ಜೊತೆ ವ್ಲಾಗ್ ವಿಡಿಯೋವೊಂದನ್ನು ಮಾಡಿ, ಹಂಚಿಕೊಂಡಿರುವ ಅನುಪಮಾ ಗೌಡ, "ನಿನ್ನಂಥವನಿಗೆ ಇಂಥ ಬ್ಯೂಟಿ ಸಿಕ್ಕಿದ್ದಾಳೆ ಅಂತ ಟ್ರೋಲ್ ಮಾಡ್ತಾರೆ, ಇದನ್ನೆಲ್ಲಾ ಕಂಡಾಗ ನಿಂಗೆ ಬೇಜಾರಾಗಲ್ವಾ'' ಎಂದು ಪ್ರಶಾಂತ್‌ಗೆ ಕೇಳಿದ್ದಾರೆ. ಆಗ ಪ್ರಶಾಂತ್ ಗೌಡ, ''ಸ್ವಲ್ಪ ಬೇಜಾರ್ ಆಗುತ್ತದೆ. ನಾವು ಸೌಂದರ್ಯ ನೋಡಿ ಪ್ರೀತಿಸಲ್ಲ, ಗುಣ ನೋಡಿ ಪ್ರೀತಿಸಬೇಕು.." ಎಂದು ಹೇಳಿದ್ದಾರೆ.
ಮಾತಿನಲ್ಲೇ ಪೆಟ್ಟು ನೀಡಿದ ಅನುಪಮಾ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನೆಗೆಟಿವ್ ಟ್ರೋಲ್‌ಗಳ ಬಗ್ಗೆ ನಟಿ ಅನುಪಮಾ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ದುಡ್ಡಿದ್ದರೆ ಯಾರಿಗೆ ಬೇಕಾದರೂ ಎಂತಹ ಹುಡುಗಿಯರಾದರೂ ಸಿಗುತ್ತಾರೆ" ಎಂಬರ್ಥದ ಟ್ರೋಲ್‌ಗಳನ್ನು ಕಂಡು ಅವರು ಬೇಸರ ವ್ಯಕ್ತಪಡಿಸುತ್ತಲೇ, ಗುಣಕ್ಕೆ ಬೆಲೆ ಕೊಡದವರಿಗೆ ತಮ್ಮ ಮಾತಿನಲ್ಲೇ ಪೆಟ್ಟು ನೀಡಿದ್ದಾರೆ. "ಸೌಂದರ್ಯ ಮತ್ತು ಬಣ್ಣ ಎಂಬುದು ಶಾಶ್ವತವಲ್ಲ. ಕಾಲ ಕಳೆದಂತೆ ಮುಖದಲ್ಲಿ ಸುಕ್ಕುಗಳು ಬಂದೇ ಬರುತ್ತವೆ, ಎಲ್ಲರೂ ವಯಸ್ಸಾದ ಮೇಲೆ ಅಜ್ಜಿ-ತಾತರಾಗಲೇಬೇಕು. ಸೌಂದರ್ಯಕ್ಕಿಂತ ಗುಣವನ್ನು ಗಮನಿಸುವುದು ಮುಖ್ಯ. ಶ್ರೀದೇವಿಯಾಗಲಿ.. ಮೂದೇವಿಯಾಗಲಿ.. ಮುಖದಲ್ಲಿ ಸುಕ್ಕು ಬಂದೇ ಬರುತ್ತದೆ. ಎಲ್ಲರೂ ಗುಣವನ್ನು ಗಮನಿಸಬೇಕು ಅಷ್ಟೇ" ಎಂದು ಖಾರವಾಗಿ ಉತ್ತರಿಸಿದ್ದಾರೆ ಅನುಪಮಾ ಗೌಡ.
ಪ್ರಶಾಂತ್ ಅದ್ಭುತ ವ್ಯಕ್ತಿ ಎಂದ ಅನುಪಮಾ
ಪ್ರಶಾಂತ್ ಗೌಡ ಬಗ್ಗೆ ಮಾತನಾಡಿದ ಅನುಪಮಾ, "ಪ್ರಶಾಂತ್ ಎಲ್ಲರಿಗೂ ಸಮನಾದ ಗೌರವ ನೀಡುವ ಅದ್ಭುತ ವ್ಯಕ್ತಿ. ಅದರಲ್ಲೂ ಹೆಣ್ಣುಮಕ್ಕಳಿಗೆ ಅವರು ನೀಡುವ ಗೌರವ ಮೆಚ್ಚುವಂತಹದ್ದು. ಪ್ರಶಾಂತ್ ಮತ್ತು ಕೃತಿ ಇಬ್ಬರೂ ಬಹಳ ಖುಷಿಯಾಗಿದ್ದಾರೆ, ನಮಗೆ ಅದೊಂದೇ ಮುಖ್ಯ. ಈ ರೀತಿ ಯಾಕೆ ಟ್ರೋಲ್ ಮಾಡುತ್ತಾರೋ? ಅದು ನನಗೆ ಅರ್ಥವೇ ಆಗಲ್ಲ.. ಅಂದ ಇಲ್ಲದವರು ಸುಂದರವಾಗಿರುವವರನ್ನು ಪ್ರೀತಿಸಬಾರದೇ? ಈ ಜಗತ್ತಿನಲ್ಲಿ ಯಾರೂ ಕೂಡ ಸದಾ ಕಾಲ ಸುಂದರವಾಗಿ ಇರುವುದಿಲ್ಲ. ಮನಸ್ಸು ಚೆನ್ನಾಗಿರಬೇಕು ಅಷ್ಟೇ. ಮುಖ ಹೇಗಿದ್ದರೂ ಮನಸ್ಸು ಮಾತ್ರ 'ಶ್ರೀದೇವಿ'ಯಂತೆ ಇರಬೇಕೇ ಹೊರತು 'ಮೂದೇವಿ'ಯಂತೆ ಇರಬಾರದು" ಎಂದು ಟ್ರೋಲಿಗರಿಗೆ ಅನುಪಮಾ ಗೌಡ ತಿರುಗೇಟು ನೀಡಿದ್ದಾರೆ.
ಪ್ರಶಾಂತ್ ಗೌಡ ಏನಂದ್ರು ನೋಡಿ
ಇನ್ನು ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಗೌಡ, "ನಮ್ಮ ಪ್ರೀತಿ ಆರಂಭವಾದಾಗ ಕೃತಿಗೆ ನನ್ನ ಹಿನ್ನೆಲೆ ಬಗ್ಗೆ ಗೊತ್ತಿರಲಿಲ್ಲ. ಜನರು ಹೀಗೆ ಟ್ರೋಲ್ ಮಾಡುವುದು ಬೇಜಾರಿನ ಸಂಗತಿ. ಆದರೆ ನೂರರಲ್ಲಿ ಹತ್ತು ಜನ ಟ್ರೋಲ್ ಮಾಡಿದರೆ, ಉಳಿದ 90 ಜನ ನಮ್ಮನ್ನು ಇಷ್ಟಪಡುತ್ತಾರೆ. ನಾವು ಆ 90 ಜನರಿಗಾಗಿ ಖುಷಿಯಿಂದ ಬಾಳಬೇಕು" ಎಂದು ಪಾಸಿಟಿವ್ ಆಗಿ ಉತ್ತರಿಸಿದ್ದಾರೆ.
ಪ್ರಶಾಂತ್ ಅವರು ಮದುವೆ ಆಗುತ್ತಿರುವ ಕೃತಿ ಗೌಡ ರಿಯಾಕ್ಟ್ ಮಾಡಿದ್ದು, "ಪ್ರಶಾಂತ್ ಅವರಂತೆ ಕಾಳಜಿ ಮಾಡುವ ಹುಡುಗ ಸಿಗುವುದು ಎಷ್ಟೋ ಹುಡುಗಿಯರ ಕನಸಾಗಿದೆ. ಅವರು ಎಂದಿಗೂ ಸೌಂದರ್ಯಕ್ಕಿಂತ ಹೆಚ್ಚಾಗಿ ಗುಣಕ್ಕೆ ಬೆಲೆ ಕೊಡುತ್ತಾರೆ" ಎಂದು ಹೇಳಿದ್ದಾರೆ.