ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೃತಿ ಗೌಡ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಗಿಚ್ಚಿ ಗಿಲಿ ಗಿಲಿʼ ಖ್ಯಾತಿಯ ನಟ ಪ್ರಶಾಂತ್‌ ಗೌಡ

‘ಗಿಚ್ಚಿ ಗಿಲಿಗಿಲಿ’ ಶೋ ಮೂಲಕ ಮನೆಮಾತಾಗಿದ್ದ ಹಾಸ್ಯ ನಟ ಪ್ರಶಾಂತ್ ಗೌಡ ಅವರು ತಮ್ಮ ಗೆಳತಿ ಕೃತಿ ಗೌಡ ಅವರೊಂದಿಗೆ ಜುಲೈ 5 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ 'ವಿ ಲೆಗಸಿ' ಕನ್ವೆನ್ಷನ್ ಹಾಲ್‌ನಲ್ಲಿ ಜರುಗಿದ ಅದ್ದೂರಿ ಆರತಕ್ಷತೆಯಲ್ಲಿ ಕಿರುತೆರೆಯ ಕಲಾವಿದರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿ ನವದಂಪತಿಗಳನ್ನು ಹರಸಿದ್ದಾರೆ.

ಅದ್ದೂರಿಯಾಗಿ ನಡೆಯಿತು ʼಗಿಚ್ಚಿ ಗಿಲಿ ಗಿಲಿʼ ಪ್ರಶಾಂತ್‌ ಗೌಡ - ಕೃತಿ ಮದುವೆ

-

Avinash GR
Avinash GR Jul 5, 2026 1:27 PM

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಶೋ ʻಗಿಚ್ಚಿ ಗಿಲಿಗಿಲಿʼಯ ಮೂಲಕ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ನೀಡಿದ್ದ ನಟ ಪ್ರಶಾಂತ್‌ ಗೌಡ ಅವರು ಜುಲೈ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 5-6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರಶಾಂತ್ ಗೌಡ ಹಾಗೂ ಕೃತಿ ಗೌಡ ಇಂದು ಹೊಸ ಪಯಣ ಆರಂಭಿಸಿದ್ದಾರೆ.

ಅದ್ದೂರಿಯಾಗಿ ನಡೆದ ಆರತಕ್ಷತೆ

ನಿನ್ನೆ (ಜುಲೈ 4) ರಾತ್ರಿ ಬೆಂಗಳೂರಿನ 'ವಿ ಲೆಗಸಿ' ಕನ್ವೆನ್ಷನ್ ಹಾಲ್‌ನಲ್ಲಿ ಈ ಜೋಡಿಯ ಭವ್ಯ ಆರತಕ್ಷತೆ ನೆರವೇರಿತು. ರಿಸೆಪ್ಷನ್ ವೇದಿಕೆಗೆ ಪ್ರಶಾಂತ್ ಅವರು ತಮ್ಮ ಮನದನ್ನೆ ಕೃತಿ ಅವರೊಂದಿಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿಕೊಂಡೇ ಎಂಟ್ರಿ ಕೊಟ್ಟಿದ್ದು ವಿಶೇಷವಾಗಿತ್ತು. ಈ ವೇಳೆ ವರ ಪ್ರಶಾಂತ್ ಬಿಳಿ ಬಣ್ಣದ ಸೂಟ್‌ನಲ್ಲಿ ಮಿಂಚಿದರೆ, ವಧು ಕೃತಿ ಕೆಂಪು ಬಣ್ಣದ ಗೌನ್ ಧರಿಸಿ ಕಂಗೊಳಿಸಿದರು.

ʻಗಿಚ್ಚಿ ಗಿಲಿ ಗಿಲಿʼ ಖ್ಯಾತಿಯ ನಟ ಪ್ರಶಾಂತ್‌ರನ್ನು ಟ್ರೋಲ್‌ ಮಾಡಿದವರಿಗೆ ಸಖತ್‌ ಆಗಿಯೇ ತಿರುಗೇಟು ಕೊಟ್ಟ ನಟಿ ಅನುಪಮಾ ಗೌಡ

ಸಮಾರಂಭಕ್ಕೆ ಕಿರುತೆರೆ ತಾರೆಯರ ದಂಡು

ಈ ಅದ್ದೂರಿ ಆರತಕ್ಷತೆ ಹಾಗೂ ವಿವಾಹ ಮಹೋತ್ಸವಕ್ಕೆ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ಪ್ರಮುಖ ತಾರೆಯರು ಸಾಕ್ಷಿಯಾಗಿದ್ದರು. ಖ್ಯಾತ ನಟಿಯರಾದ ಅನುಪಮಾ ಗೌಡ, ನಿವೇದಿತಾ ಗೌಡ, ‘ಕರ್ಣ’ ಖ್ಯಾತಿಯ ಭವ್ಯಾ ಗೌಡ, ಶರ್ಮಿತಾ ಗೌಡ, ವಾಣಿ ಗೌಡ, ಸೂರಜ್, ‘ನಂದಗೋಕುಲ’ ಖ್ಯಾತಿಯ ಮೇಘ ಹಾಗೂ ನಿರಂಜನ್ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾಬಳಗವೇ ಆಗಮಿಸಿ ನವದಂಪತಿಗೆ ಶುಭ ಹಾರೈಸಿತು. ಇವರೊಂದಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಮತ್ತು ಟಿ.ಎ. ಶರವಣ ಅವರು ಕೂಡ ಆಗಮಿಸಿ ಹೊಸ ಜೋಡಿಗೆ ಆಶೀರ್ವದಿಸಿದರು.

ರಿಸೆಪ್ಷನ್ ಸಂಭ್ರಮದ ಬೆನ್ನಲ್ಲೇ, ಇಂದು (ಜುಲೈ 5) ಬೆಳಗಿನ ಶುಭ ಮುಹೂರ್ತದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಪ್ರಶಾಂತ್‌ ಗೌಡ ಅವರು ಕೃತಿ ಅವರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು. ಸದ್ಯ ಪ್ರಶಾಂತ್-ಕೃತಿ ಅವರ ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಸ್ನೇಹಿತರು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.