ಮೊದಲ ಬಾರಿಗೆ ಬಣ್ಣ ಹಚ್ಚಿದ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್; ಯಾವ ಸಿನಿಮಾಕ್ಕಾಗಿ ಗೊತ್ತಾ?
ಎ ಆರ್ ರೆಹಮಾನ್ ಅವರು ಇದೇ ಮೊದಲ ಬಾರಿಗೆ ಪ್ರಭುದೇವ ಅಭಿನಯದ 'ಮೂನ್‌ವಾಕ್' (Moonwalk) ಎಂಬ ಕಾಮಿಡಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮನೋಜ್ ಎನ್‌ಎಸ್ ನಿರ್ದೇಶನದ ಈ ಚಿತ್ರದಲ್ಲಿ ಅವರು 'ಆಂಗ್ರಿ ಡೈರೆಕ್ಟರ್' ಪಾತ್ರ ನಿರ್ವಹಿಸಲಿದ್ದಾರೆ.
-
ಕಳೆದ 4 ದಶಕಗಳಿಂದಲೂ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿರುವವರು ಎ ಆರ್ ರೆಹಮಾನ್. ಆಸ್ಕರ್‌ನಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಎ ಆರ್ ರೆಹಮಾನ್ ಅವರು ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ. ಆದರೆ ಇದೀಗ ಅವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಹೌದು, ಪ್ರಭುದೇವ ಅಭಿನಯದ ಕಾಮಿಡಿ ಚಿತ್ರ 'ಮೂನ್‌ವಾಕ್' (Moonwalk) ಮೂಲಕ ಎ ಆರ್ ರೆಹಮಾನ್ ಅವರು ನಟರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ಈ ಹಿಂದೆ ರೆಹಮಾನ್ ಅವರು ಕೆಲವು ಹಾಡುಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಾದರೂ, ಪೂರ್ಣ ಪ್ರಮಾಣದ ಪಾತ್ರದಲ್ಲಿ ಇದುವರೆಗೆ ನಟಿಸಿರಲಿಲ್ಲ. ಈಗ ಅವರು ಮನೋಜ್ ಎನ್‌ಎಸ್ ನಿರ್ದೇಶನದ ಮತ್ತು ಬಿಹೈಂಡ್‌ವುಡ್ಸ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಸಿನಿಮಾ ನಿರ್ದೇಶಕನ ಪಾತ್ರವನ್ನು ರೆಹಮಾನ್ ಅವರು ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ರೆಹಮಾನ್ ಒಬ್ಬ 'ಆಂಗ್ರಿ ಯಂಗ್ ಡೈರೆಕ್ಟರ್' ಆಗಿ ಕಾಣಿಸಿಕೊಳ್ಳಲಿದ್ದು, ಇದು ಅವರ ವೃತ್ತಿಜೀವನದ ಮತ್ತೊಂದು ತಿರುವಿಗೆ ಸಾಕ್ಷಿಯಾಗಲಿದೆಯಂತೆ.
Bhavya Gowda: ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?
ಮತ್ತೊಂದು ವಿಶೇಷ ಏನಪ್ಪ ಅಂದರೆ, ಈ ಚಿತ್ರದ ಆಲ್ಬಮ್‌ನಲ್ಲಿರುವ ಐದೂ ಹಾಡುಗಳನ್ನು ರೆಹಮಾನ್ ಅವರೇ ಕಂಪೋಸ್ ಮಾಡಿ, ಹಾಡಿದ್ದಾರೆ. ಅವರ ಇಡೀ ವೃತ್ತಿಜೀವನದಲ್ಲಿ ಒಂದು ಸಿನಿಮಾದ ಎಲ್ಲಾ ಹಾಡುಗಳನ್ನು ಹಾಡಿದ್ದು ಇದೇ ಮೊದಲ ಬಾರಿಯಾಗಿದೆ. ಹಾಗಾಗಿ, ಮೂನ್ ವಾಕ್ ಸಿನಿಮಾ ರೆಹಮಾನ್ ಪಾಲಿಗೆ ಸ್ಪೆಷಲ್ ಸಿನಿಮಾವಾಗಲಿದೆ.
ಪಾತ್ರವನ್ನು ತಕ್ಷಣವೇ ಒಪ್ಪಿದ್ದ ರೆಹಮಾನ್
ಈ ಪಾತ್ರವನ್ನು ರೆಹಮಾನ್ ಅವರಿಂದಲೇ ಮಾಡಿಸಬೇಕು ಎಂದು ಚಿತ್ರತಂಡ ಅಂದುಕೊಂಡು, ಅವರ ಬಳಿ ಕೇಳಿದಾಗ, ತಕ್ಷಣವೇ ಒಪ್ಪಿಗೆ ಸಿಕ್ಕಿತಂತೆ. ಸಂಗೀತದ ಜೊತೆಗೆ ತಮ್ಮ ನಟನಾ ಕೌಶಲವನ್ನು ಪ್ರದರ್ಶಿಸಲು ರೆಹಮಾನ್‌ಗೆ ಇದೊಂದು ಉತ್ತಮ ಆಯ್ಕೆ ಎನ್ನಲಾಗಿದೆ. ಬಹಳ ಸಮದಯ ನಂತರ ಪ್ರಭುದೇವ ಮತ್ತು ಎ ಆರ್ ರೆಹಮಾನ್ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಈಗಾಗಲೇ ಒಂದು ಹಾಡಿನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ಹಾಡು ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಲಾಗುತ್ತಿದೆ. ರೆಹಮಾನ್ ಕೂಡ ಚಿತ್ರೀಕರಣದಲ್ಲಿ ಖುಷಿಯಿಂದಲೇ ಭಾಗಿಯಾಗುತ್ತಿದ್ದಾರಂತೆ.
ಈ ಸಿನಿಮಾ ಯಾವಾಗ ಬಿಡುಗಡೆ?
ಇನ್ನು, ಪ್ರಭುದೇವ ಇಲ್ಲಿ ನೃತ್ಯ ಸಂಯೋಜಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ಎ ಆರ್ ರೆಹಮಾನ್ ಅವರು ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ, ಅಜು ವರ್ಗೀಸ್, ಅರ್ಜುನ್ ಅಶೋಕನ್, ಸಾಟ್ಜ್, ಸುಶ್ಮಿತಾ, ನಿಷ್ಮಾ, ಸ್ವಾಮಿನಾಥನ್, ರೆಡಿನ್ ಕಿಂಗ್ಸ್‌ಲಿ, ರಾಜೇಂದ್ರನ್, ದೀಪಾ ಅಕ್ಕ, ಸಂತೋಷ್ ಜೇಕಬ್ ಮತ್ತು ರಾಮ್‌ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. 'ಮೂನ್‌ವಾಕ್' ಚಿತ್ರವು 2026ರ ಮೇ ತಿಂಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.