ʻರಾಕಿಂಗ್ ಸ್ಟಾರ್ʼ ಯಶ್‌ಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ʻಟಾಕ್ಸಿಕ್ʼ ನಟಿ ಹುಮಾ ಖುರೇಷಿ; ಏನ್ ಕಾರಣ?
ಬಾಲಿವುಡ್ ನಟಿ ಹುಮಾ ಖುರೇಷಿ ಬೆಂಗಳೂರಿಗೆ ಭೇಟಿ ನೀಡಿ, ತಮ್ಮ 'ಬೇಬಿ ಡು ಡೈ ಡು' ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ನೀಡಿದ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ ದಾಸ್ ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆ ನಟಿಸುತ್ತಿರುವ ಅನುಭವ ಹಂಚಿಕೊಂಡಿದ್ದಾರೆ.
-
ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದು, ತಮ್ಮ ಮುಂಬರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ ಹಾಗೂ ತಮ್ಮದೇ ನಿರ್ಮಾಣದ ‘ಬೇಬಿ ಡು ಡೈ ಡು’ ಸಿನಿಮಾದ ಕುರಿತು ಮಾಧ್ಯಮಗಳೊಂದಿಗೆ ವಿಶೇಷವಾಗಿ ಮಾತನಾಡಿದ್ದಾರೆ. ಪ್ರೆಸ್‌ಮೀಟ್‌ನಲ್ಲಿ "ನಮಸ್ಕಾರ ಬೆಂಗಳೂರು... ಅಲ್ಪ ಸ್ವಲ್ಪ ಕನ್ನಡ ಗೊತ್ತು" ಎಂದು ಕನ್ನಡದಲ್ಲೇ ಮಾತು ಆರಂಭಿಸುವ ಮೂಲಕ ಹುಮಾ ಎಲ್ಲರ ಗಮನ ಸೆಳೆದರು.
ಯಶ್ ಮತ್ತು ಗೀತೂ ಮೋಹನ್ ದಾಸ್‌ಗೆ ವಿಶೇಷ ಧನ್ಯವಾದ
ತಮ್ಮ ಸಹೋದರ ಸಾಕಿಬ್ ಸಲೀಮ್ ಅವರೊಂದಿಗೆ ಸೇರಿ ಸ್ವತಂತ್ರವಾಗಿ ನಿರ್ಮಿಸಿರುವ ಸಣ್ಣ ಬಜೆಟ್‌ನ ಚಿತ್ರ ‘ಬೇಬಿ ಡು ಡೈ ಡು’ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, "ಇದು ತುಂಬಾ ಸಣ್ಣ ಸಿನಿಮಾವಾಗಿದ್ದರೂ, ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ ದಾಸ್ ಅವರು ನಮ್ಮ ಚಿತ್ರವನ್ನು ಬೆಂಬಲಿಸಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಂಚಿಕೊಂಡಿದ್ದರು. ಅವರ ಈ ಒಂದು ಬೆಂಬಲದಿಂದಾಗಿ ಬೆಂಗಳೂರಿನಲ್ಲಿ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಪ್ರಚಾರವಾಗಿದ್ದು, ಶೋಗಳ ಸಂಖ್ಯೆ ಕೂಡ ಹೆಚ್ಚಾಗಿದೆ" ಎಂದು ಇಬ್ಬರಿಗೂ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.
ಕಿಯಾರಾ ಅಡ್ವಾಣಿ ಜೊತೆ ಯಶ್ ಭರ್ಜರಿ ರೊಮ್ಯಾನ್ಸ್; 'ಟಾಕ್ಸಿಕ್' ಚಿತ್ರದ 'ತಬಾಹಿ' ವಿಡಿಯೋ ಸಾಂಗ್ ರಿಲೀಸ್!
ಕಿವುಡ-ಮೂಗಿ ಪಾತ್ರದಲ್ಲಿ ಹುಮಾ
‘ಗ್ಯಾಂಗ್ಸ್ ಆಫ್ ವಾಸಿಪುರ್’ ಖ್ಯಾತಿಯ ಹುಮಾ ಖುರೇಷಿ, ಇಡೀ ಸಿನಿಮಾದಲ್ಲಿ ಒಂದೇ ಒಂದು ಪದವನ್ನೂ ಮಾತನಾಡದ ಕಿವುಡ ಮತ್ತು ಮೂಗಿಯಾದ ಹಿಟ್-ವುಮನ್ (Baby Karmarkar) ಎಂಬ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸವಾಲಿನ ಪಾತ್ರಕ್ಕಾಗಿ ತಾವು ಸನ್ನೆ ಭಾಷೆಯ ತಜ್ಞರಿಂದ ತರಬೇತಿ ಪಡೆದಿದ್ದು, ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿ ಸಮಯ ಕಳೆದಿರುವುದಾಗಿ ತಿಳಿಸಿದರು. ಚಿತ್ರವು ಕಮರ್ಷಿಯಲ್ ಆಗಿರಬೇಕು ಎಂಬ ಉದ್ದೇಶದಿಂದ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಸಾರ್ವತ್ರಿಕ ಸನ್ನೆ ಭಾಷೆಯನ್ನು ಬಳಸಲಾಗಿದೆ ಎಂದು ಅವರು ವಿವರಿಸಿದರು.
'ಟಾಕ್ಸಿಕ್' ಸಿನಿಮಾ ಬಗ್ಗೆ ಅಪ್ಡೇಟ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಗ್ಗೆ ಮಾತನಾಡಿದ ಹುಮಾ, "ಇಡೀ ಜಗತ್ತೇ ಈಗ 'ಟಾಕ್ಸಿಕ್' ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದೆ ಎಂಬುದು ನನಗೆ ಗೊತ್ತು. ಯಶ್ ಅವರು ಈ ದೇಶದ ಅತಿ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು ಹಾಗೂ ಅದ್ಭುತ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡುವುದರಿಂದ ನಾನು ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ ಮತ್ತು ಸ್ಫೂರ್ತಿ ಪಡೆಯುತ್ತಿದ್ದೇನೆ" ಎಂದರು. ಅಲ್ಲದೆ, ಸಿನಿಮಾ ಶೀಘ್ರದಲ್ಲೇ ಬರಲಿದ್ದು, ಪ್ರೇಕ್ಷಕರು ಸ್ವಲ್ಪ ತಾಳ್ಮೆಯಿಂದಿರಬೇಕು ಎಂದು ಅವರು ವಿನಂತಿಸಿಕೊಂಡರು.