ರಿಷಬ್ ಶೆಟ್ಟಿಯ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಿಂದ ಬಿಗ್ ಅಪ್‌ಡೇಟ್: ‘ಬೆಳವಡಿ ಮಲ್ಲಮ್ಮ’ ಪಾತ್ರಕ್ಕೆ ಭೂಮಿ ಪೆಡ್ನೇಕರ್ ಆಯ್ಕೆ!
'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ನಟನೆಯ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸೇರ್ಪಡೆಯಾಗಿದ್ದಾರೆ. ಕರುನಾಡಿನ ಧೈರ್ಯಶಾಲಿ ವೀರಮಹಿಳೆ 'ಬೆಳವಡಿ ಮಲ್ಲಮ್ಮ' ಅವರ ಐತಿಹಾಸಿಕ ಪಾತ್ರವನ್ನು ಭೂಮಿ ನಿರ್ವಹಿಸುತ್ತಿದ್ದಾರೆ.
-
‘ಕಾಂತಾರ’ ಖ್ಯಾತಿಯ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾದ ಬಳಗಕ್ಕೆ ಈಗ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸೇರಿಕೊಂಡಿದ್ದಾರೆ. ಧೈರ್ಯ ಮತ್ತು ಸಾಹಸಕ್ಕೆ ಹೆಸರಾದ ಕರುನಾಡಿನ 'ಬೆಳವಡಿ ಮಲ್ಲಮ್ಮ' ಅವರ ಐತಿಹಾಸಿಕ ಪಾತ್ರವನ್ನು ಭೂಮಿ ಪೆಡ್ನೇಕರ್ ನಿರ್ವಹಿಸಲಿದ್ದಾರೆ.
ಸೋಮವಾರ (ಜುಲೈ 27) ಈ ಕುರಿತು ಅಧಿಕೃತವಾಗಿ ಘೋಷಿಸಲಾಗಿದ್ದು, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಭೂಮಿ ನಟಿಸುತ್ತಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಸಂದೀಪ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಓಬೆರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದುವರೆಗೆ ನಾನು ಮಾಡದಿರುವ ಪಾತ್ರವಿದು
ಈ ಚಿತ್ರದ ಬಗ್ಗೆ ಸಂತಸ ಹಂಚಿಕೊಂಡ ನಟಿ ಭೂಮಿ ಪೆಡ್ನೇಕರ್, "ಮಹಾ ಮರಾಠ ಯೋಧ-ರಾಜ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಪರಂಪರೆಯ ಕುರಿತಾದ ಈ ಬೃಹತ್ ಸಿನಿಮಾದ ಭಾಗವಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಕರ್ನಾಟಕದ ಧೈರ್ಯಶಾಲಿ ವೀರಮಹಿಳೆ ಬೆಳವಡಿ ಮಲ್ಲಮ್ಮ ಅವರ ಪಾತ್ರವನ್ನು ತೆರೆಯ ಮೇಲೆ ಜೀವಂತಗೊಳಿಸುವುದು ನನ್ನ ಸೌಭಾಗ್ಯ" ಎಂದು ಹೇಳಿದ್ದಾರೆ.
"ನಾನು 'ಕಾಂತಾರ' ಸಿನಿಮಾದ ದೊಡ್ಡ ಫ್ಯಾನ್, ರಿಷಬ್ ಶೆಟ್ಟಿ ಅವರ ಅದ್ಭುತ ನಟನೆ ನನ್ನನ್ನು ಬೆರಗುಗೊಳಿಸಿತ್ತು. ಹಾಗಾಗಿ, ಸಂದೀಪ್ ಸಿಂಗ್ ಅವರು ಈ ಚಿತ್ರದ ಕಥೆ ಹೇಳಿದ ತಕ್ಷಣವೇ ಒಪ್ಪಿಕೊಂಡೆ. ಇದುವರೆಗೆ ನಾನು ಮಾಡದಿರುವ ವಿಭಿನ್ನ ಪಾತ್ರವಿದು. ನನ್ನನ್ನು ಸಂಪೂರ್ಣವಾಗಿ ಹೊಸ ರೂಪದಲ್ಲಿ ಗುರುತಿಸಿ ಅವಕಾಶ ನೀಡಿದ ನಿರ್ಮಾಪಕರಿಗೆ ನಾನು ಚಿರಋಣಿಯಾಗಿದ್ದೇನೆ" ಎಂದು ಹೇಳಿದ್ದಾರೆ.
ಚಿತ್ರತಂಡ ಮತ್ತು ಬಿಡುಗಡೆಯ ವಿವರ
ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಲಿದ್ದು, ಖ್ಯಾತ ಗೀತರಚನೆಕಾರ ಪ್ರಸೂನ್ ಜೋಶಿ ಸಾಹಿತ್ಯ ಬರೆಯಲಿದ್ದಾರೆ. ರಿಷಿ ವಿರ್ಮಾನಿ ಈ ಚಿತ್ರಕ್ಕೆ ಚಿತ್ರಕಥೆ ರಚಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಐತಿಹಾಸಿಕ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಈ ವರ್ಷಾಂತ್ಯದಲ್ಲಿ ಶೂಟಿಂಗ್ ಆರಂಭವಾಗಲಿದೆ. ಪ್ರಸ್ತುತ ಚಿತ್ರತಂಡವು ಬೃಹತ್ ಮಟ್ಟದ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.
2024ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ರೂಪದಲ್ಲಿದ್ದ ರಿಷಬ್ ಶೆಟ್ಟಿ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿತ್ತು. ಆ ಪೋಸ್ಟರ್ ಪ್ರಕಾರ ಸಿನಿಮಾವು 2027ರ ಜನವರಿ 21 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಶೂಟಿಂಗ್ ಇನ್ನು ಆರಂಭವಾಗದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆಯಿದೆ.
Rishab Shetty: ರಕ್ಷಿತ್ ಶೆಟ್ಟಿ ಸೇರಿ ಎಲ್ಲರನ್ನ ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ!
ಇನ್ನೊಂದೆಡೆ, ರಿಷಬ್ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಎಂಬ ಪೌರಾಣಿಕ ಸಿನಿಮಾದಲ್ಲಿ ನಟಿಸುತ್ತಿದ್ದು, ಮೈತ್ರಿ ಮೂವೀ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.