‘ಇನ್ನೂ ಬಿಗ್ ಬಾಸ್ ಮನೆಯಲ್ಲೇ ಇದ್ದಿದ್ರೆ ನನ್ನ ಆರೋಗ್ಯಕ್ಕೆ ಮತ್ತಷ್ಟು ಹಾಳಾಗುತ್ತಿತ್ತು..ʼ: ಹೊರಬಂದ ಬಳಿಕ ನಟಿ ಸಂಗೀತಾ ಭಟ್ ಮೊದಲ ಪ್ರತಿಕ್ರಿಯೆ
Sangeetha Bhat Exit: ಬಿಗ್ ಬಾಸ್ ಮನೆಯೊಳಗಿನ ಅನಿರೀಕ್ಷಿತ ಒತ್ತಡ ಹಾಗೂ ಪ್ಯಾನಿಕ್ ಅಟ್ಯಾಕ್‌ನಿಂದಾಗಿ ಆಟವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರಬಂದಿದ್ದಾರೆ ನಟಿ ಸಂಗೀತಾ ಭಟ್. ತಮಗೆ ಎದುರಾದ ಉಸಿರಾಟದ ಸಮಸ್ಯೆ ಮತ್ತು ಮಾನಸಿಕ ತೊಳಲಾಟವನ್ನು ಬಹಿರಂಗಪಡಿಸಿರುವ ಅವರು, ತಾವು ತೆಗೆದುಕೊಂಡ ಈ ಕಠಿಣ ನಿರ್ಧಾರದ ಬಗ್ಗೆ ಸಂಪೂರ್ಣ ನೆಮ್ಮದಿ, ತೃಪ್ತಿ ಇದೆ ಎಂದಿದ್ದಾರೆ.
-
‘ಬಿಗ್ ಬಾಸ್’ ಮನೆಯಿಂದ ಅನಿರೀಕ್ಷಿತವಾಗಿ ಹೊರಬಂದ ನಟಿ ಸಂಗೀತಾ ಭಟ್, ತಮ್ಮ ನಿರ್ಧಾರ ಹಾಗೂ ಎದುರಾದ ಆರೋಗ್ಯ ಸಮಸ್ಯೆಯ ಕುರಿತು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಜಗತ್ತು, ಕೆಲಸದ ಜಂಜಾಟ ಅಥವಾ ಸಂಬಂಧಗಳ ಒತ್ತಡದಿಂದಾಗಿ ಆಂಗ್ಸೈಟಿ ಹಾಗೂ ಪ್ಯಾನಿಕ್ ಅಟ್ಯಾಕ್ ಎದುರಾಗುವುದು ಸಾಮಾನ್ಯವಾಗಿದೆ ಎಂದು ಹೇಳಿರುವ ಅವರು, ಬಿಗ್ ಬಾಸ್ ಮನೆಯೊಳಗೂ ತಮಗೆ ಸಹ-ಸ್ಪರ್ಧಿಗಳಿಂದ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಊಹಿಸದ ರೀತಿಯಲ್ಲಿ ಎದುರಾದ ಪ್ಯಾನಿಕ್ ಅಟ್ಯಾಕ್‌ನಿಂದಾಗಿ ಇಡೀ ದೇಹ ತೀವ್ರ ಆಘಾತಕ್ಕೆ ಒಳಗಾಯಿತು. ಈ ಹಿಂದೆಂದೂ ಇಂತಹ ಅನುಭವವಾಗಿರಲಿಲ್ಲ ಎಂದಿರುವ ಸಂಗೀತಾ, ಆ ಸಂದರ್ಭದಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದ್ದರಿಂದ ಆತಂಕಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.
ಆರೋಗ್ಯ ಮತ್ತಷ್ಟು ಬಿಗಡಾಯಿಸುತ್ತಿತ್ತು
ಪರಿಸ್ಥಿತಿಯನ್ನು ವಿವರಿಸುತ್ತಾ, ನಾವು ಎಷ್ಟೇ ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದರೂ ನೈಜ ಸನ್ನಿವೇಶ ಎದುರಾದಾಗ ನಮ್ಮ ದೇಹ ಹಾಗೂ ಮನಸ್ಸು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ನಿಯಂತ್ರಣದಲ್ಲಿರುವುದಿಲ್ಲ ಎಂದು ಸಂಗೀತಾ ಹೇಳಿದ್ದಾರೆ. "ದೈಹಿಕ ಟಾಸ್ಕ್‌ಗಳ ವೇಳೆ ಏನಾದರೂ ಪೆಟ್ಟಾಗಿದ್ದರೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಚೇತರಿಸಿಕೊಳ್ಳಬಹುದಿತ್ತು. ಆದರೆ ಜನರು ಮಾನಸಿಕ ಆರೋಗ್ಯವನ್ನು ಹಗುರವಾಗಿ ಪರಿಗಣಿಸುತ್ತಾರೆ, ವಾಸ್ತವದಲ್ಲಿ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಏಕೆಂದರೆ ಅದು ಒಟ್ಟಾರೆ ದೈಹಿಕ ಆರೋಗ್ಯವನ್ನೂ ಕುಗ್ಗಿಸುತ್ತದೆ. ಹಾಗಾಗಿ ಅಲ್ಲಿಯೇ ಉಳಿದುಕೊಂಡರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂಬ ಕಾರಣಕ್ಕೆ ಸ್ವತಃ ತಾವೇ ಹೊರಬರುವ ನಿರ್ಧಾರ ಕೈಗೊಂಡೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪತಿಗಾಗಿ ಫೋನ್ ಬೇಕು ಎನಿಸಿತ್ತು
ಇನ್ನು, ಮೊಬೈಲ್ ಫೋನ್ ಬಳಕೆ ಇಲ್ಲದೆ ಕಾಲ ಕಳೆಯುವುದು ಕಷ್ಟವೆನಿಸಲಿಲ್ಲ ಎಂದಿರುವ ಸಂಗೀತಾ, "ರೀಲ್ಸ್ ಅಥವಾ ಡೂಮ್ ಸ್ಕ್ರೋಲಿಂಗ್‌ನಿಂದ ಮುಕ್ತಿ ಸಿಕ್ಕಂತೆ ಅನಿಸಿತೇ ಹೊರತು ಎಲ್ಲಿಯೂ ಬಂಧಿಯಾದ ಭಾವನೆ ಮೂಡಲಿಲ್ಲ. ಆದರೆ ತಮ್ಮ ಪ್ರತಿಯೊಂದು ದಿನಚರಿಯನ್ನು ಹಂಚಿಕೊಳ್ಳುತ್ತಿದ್ದ ಪತಿ ಸುದರ್ಶನ್ ಅವರನ್ನು ಮಾತ್ರ ತುಂಬಾ ಮಿಸ್ ಮಾಡಿಕೊಂಡೆ. ಅವರ ಸಂಪರ್ಕಕ್ಕಾಗಿ ಮಾತ್ರ ಫೋನ್ ಬೇಕೆನಿಸುತ್ತಿತ್ತು" ಎಂದು ಭಾವುಕರಾಗಿ ನುಡಿದಿದ್ದಾರೆ.
ಈ ನಿರ್ಧಾರದ ಬಗ್ಗೆ ತೃಪ್ತಿ ಇದೆ
ಕೊನೆಯದಾಗಿ, ಬಿಗ್ ಬಾಸ್ ಪ್ರವೇಶಕ್ಕೂ ಮುನ್ನ ಎಲ್ಲಾ ಕಡ್ಡಾಯ ವೈದ್ಯಕೀಯ ತಪಾಸಣೆಗಳನ್ನು ಪೂರ್ಣಗೊಳಿಸಿಯೇ ಒಳಹೋಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. "ನಾನು ಬೇಗ ಹೊರಬಂದಿದ್ದಕ್ಕೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ. ಇದು ಕೇವಲ ವೈದ್ಯರ ಸಲಹೆಯಷ್ಟೇ ಅಲ್ಲದೆ ತಮ್ಮ ಸ್ವಂತ ವಿವೇಚನೆಯಿಂದ ತೆಗೆದುಕೊಂಡ ನಿರ್ಧಾರವಾಗಿತ್ತು. ಆ ವಾತಾವರಣದಲ್ಲೇ ಮುಂದುವರಿದಿದ್ದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಮತ್ತಷ್ಟು ಧಕ್ಕೆಯಾಗುತ್ತಿತ್ತು, ಆದ್ದರಿಂದ ತಮ್ಮ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ಸಂಪೂರ್ಣ ತೃಪ್ತಿ ಇದೆ" ಎಂದು ಸಂಗೀತಾ ಹೇಳಿದ್ದಾರೆ.