ಮಲಯಾಳಂ ʻಬಿಗ್ ಬಾಸ್ʼ ವಿನ್ನರ್ ಅನುಮೊಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ಭುವನೇಶ್
Bigg Boss Malayalam winner Anumol Marriage: ಮಲಯಾಳಂ ಕಿರುತೆರೆಯ ಖ್ಯಾತ ನಟಿ ಹಾಗೂ 'ಬಿಗ್ ಬಾಸ್ ಮಲಯಾಳಂ ಸೀಸನ್ 7' ವಿಜೇತೆ ಅನುಮೋಲ್ ಅವರು ತಮಿಳು ನಟ ಭುವನೇಶ್ ರಾಜೇಂದ್ರನ್ ಅವರೊಂದಿಗೆ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
-
ಮಲಯಾಳಂ ಕಿರುತೆರೆಯ ಜನಪ್ರಿಯ ನಟಿ ಹಾಗೂ ‘ಬಿಗ್ ಬಾಸ್ ಮಲಯಾಳಂ ಸೀಸನ್ 7’ ವಿಜೇತೆ ಅನುಮೋಲ್ ಅವರು ತಮಿಳು ನಟ ಭುವನೇಶ್ ರಾಜೇಂದ್ರನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳವಾರ (ಆಗಸ್ಟ್ 18) ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ಈ ಇಬ್ಬರ ವಿವಾಹ ಮಹೋತ್ಸವ ಸರಳವಾಗಿ ನೆರವೇರಿತು.
ಕೇವಲ ಆಪ್ತ ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ, ಕೇಂದ್ರ ಸಚಿವ ಹಾಗೂ ಹಿರಿಯ ನಟ ಸುರೇಶ್ ಗೋಪಿ ಸೇರಿದಂತೆ ಕಿರುತೆರೆಯ ಹಲವು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.
ಸಂಪ್ರದಾಯಬದ್ಧವಾಗಿ ನಡೆದ ಮದುವೆ
ವಿವಾಹ ಸಮಾರಂಭಕ್ಕಾಗಿ ಅನುಮೋಲ್ ಗೋಲ್ಡನ್ ಬಣ್ಣದ ಲೆಹೆಂಗಾ ತೊಟ್ಟು ಕಂಗೊಳಿಸಿದರೆ, ಭುವನೇಶ್ ಸಾಂಪ್ರದಾಯಿಕ ಕೇರಳ ಶೈಲಿಯ ಮುಂಡು ಮತ್ತು ಮೇಲುಡುಗೆಯಲ್ಲಿ ಮಿಂಚಿದರು. ನಂತರ ನಡೆದ ಮತ್ತೊಂದು ವಿಧಿಯ ವೇಳೆ ಅನುಮೋಲ್ ಕೆಂಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಇಬ್ಬರೂ ಎರಡೂ ಸಂಸ್ಕೃತಿ-ಸಂಪ್ರದಾಯಗಳನ್ನು ಗೌರವಿಸಿ ಮದುವೆಯಾಗಿದ್ದಾರೆ. ಮದುವೆಯ ಸುಂದರ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿರುವ ಭುವನೇಶ್, "ಹೌದು, ನಾನು ನನ್ನ ಪ್ರೀತಿಯನ್ನು ಕಂಡುಕೊಂಡೆ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಕಿರುತೆರೆಯ ನೆಚ್ಚಿನ ತಾರೆ ಅನುಮೋಲ್
ಮಲಯಾಳಂ ಕಿರುತೆರೆಯಲ್ಲಿ ಬಹುಬೇಡಿಕೆಯ ನಟಿಯಾಗಿರುವ 31 ವರ್ಷದ ಅನುಮೋಲ್ , 'ಸ್ಟಾರ್ ಮ್ಯಾಜಿಕ್' ರಿಯಾಲಿಟಿ ಶೋ ಮೂಲಕ ಮನೆಮಾತಾದವರು. ಬಳಿಕ 'ಬಿಗ್ ಬಾಸ್ ಮಲಯಾಳಂ ಸೀಸನ್ 7' ಪ್ರವೇಶಿಸಿ ಪ್ರೇಕ್ಷಕರ ಮನಗೆದ್ದು ವಿನ್ನರ್ ಟ್ರೋಫಿ ಮುಡಿಗೇರಿಸಿಕೊಂಡಿದ್ದರು. ಇವರಲ್ಲದೆ 'ಸತ್ಯ ಎನ್ನ ಪೆಂಕುಟ್ಟಿ', 'ಅಮ್ಮಯಾರಿಯಾದೆ' ಹಾಗೂ 'ವಾನಂಬಾಡಿ' ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಭುವನೇಶ್ ಹಂಚಿಕೊಂಡ ವಿಡಿಯೋ
ಯಾರಿದು ಭುವನೇಶ್?
ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ನಟ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿರುವ ಭುವನೇಶ್ ರಾಜೇಂದ್ರನ್, ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಹೌದು. ಇನ್‌ಸ್ಟಾಗ್ರಾಮ್‌ನಲ್ಲಿ 1.74 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಇವರು, ತಮ್ಮ ಖಾತೆಯಿಂದ ಯಾರನ್ನೂ ಫಾಲೋ ಮಾಡದಿರುವುದು ವಿಶೇಷ. ಇಬ್ಬರದ್ದು ಕುಟುಂಬಸ್ಥರು ನಿಶ್ಚಯಿಸಿದ ವಿವಾಹ ಎನ್ನಲಾಗಿದ್ದು, ಪರಸ್ಪರ ಪರಿಚಿತ ಸ್ನೇಹಿತರೊಬ್ಬರ ಮೂಲಕ ಈ ಸಂಬಂಧ ಕೂಡಿಬಂದಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ನವದಂಪತಿಯ ಮದುವೆ ಫೋಟೋ ಹಾಗೂ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ತಾರೆಯರು ನೂತನ ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.