ಸಿಂಗರ್ ಮಂಗ್ಲಿ ವಿರುದ್ಧ ಹೈದರಾಬಾದ್‌ನಲ್ಲಿ ಎಫ್‌ಐಆರ್; 10 ಕೋಟಿ ರೂ. ವಂಚನೆ - ಪ್ರಾಣ ಬೆದರಿಕೆ ಆರೋಪ!
Singer Mangli Fraud Case: ಗಾಯಕಿ ಮಂಗ್ಲಿ ಅವರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಹೈದರಾಬಾದ್‌ನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆ ಡ್ರಗ್ಸ್ ಪಾರ್ಟಿ ಮತ್ತು ಧಾರ್ಮಿಕ ವಿವಾದಗಳಿಂದ ಸುದ್ದಿಯಾಗಿದ್ದ ಮಂಗ್ಲಿ, ಈಗ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.
-
ಬಹುಭಾಷಾ ಗಾಯಕಿ ಮಂಗ್ಲ ಅವರು (ಸತ್ಯವತಿ ರಾಥೋಡ್) ಹಾಡುಗಳ ಜೊತೆಗೆ ವಿವಾದಗಳ ಮೂಲಕವು ಸುದ್ದಿಯಾಗುತ್ತಲೇ ಇರುತ್ತಾರೆ. ಈಚೆಗಷ್ಟೇ ಅವರು ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ಆರಂಭಿಸಿ, ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಆ ಬಗ್ಗೆ ಮಂಗ್ಲಿ ಸ್ಪಷ್ಟನೆಯನ್ನು ಕೂಡ ನೀಡಿದ್ದರು. ಈ ಮಧ್ಯೆ ಮಂಗ್ಲಿ ವಿರುದ್ಧ 10 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಮಂಗ್ಲಿ ವಿರುದ್ಧ ಕೇಸ್
ಹೈದರಾಬಾದ್‌ನಲ್ಲಿ ಮಂಗ್ಲಿ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಗಾಯಕಿ ಮಂಗ್ಲಿ ಅವರು ತಮಗೆ ಸುಮಾರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಕೇವಲ ಆರ್ಥಿಕ ವಂಚನೆ ಮಾತ್ರವಲ್ಲದೆ. ಮಂಗ್ಲಿ ತಮಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಈ ದೂರಿನ ಮೇರೆಗೆ ಪೊಲೀಸರು ಮಂಗ್ಲಿ ಸೇರಿದಂತೆ ಅವರ ಸಹೋದರ ಮತ್ತು ಇತರ ಮೂವರ ವಿರುದ್ಧ ಬಿಎನ್‌ಎಸ್ (BNS) ಸೆಕ್ಷನ್ 351 (2), 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗಾಯಕಿ ಮಂಗ್ಲಿ ಹೆಸರಿನಲ್ಲಿ ನಡೆಯಿತಾ ಮಹಾಮೋಸ? 150 ಕೋಟಿ ರೂ. ವಂಚನೆ ಆರೋಪಕ್ಕೆ ಸಿಕ್ಕ ಉತ್ತರವೇನು?
ಹಲವು ವಿವಾದಗಳಲ್ಲಿ ಮಂಗ್ಲಿ
ಮಂಗ್ಲಿ ಅವರ ವೃತ್ತಿಜೀವನದಲ್ಲಿ ಇಂತಹ ವಿವಾದಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಹಲವು ಸಂದರ್ಭಗಳಲ್ಲಿ ಸುದ್ದಿಯಲ್ಲಿದ್ದರು. 2021ರಲ್ಲಿ ಬೋನಾಲು ಹಾಡೊಂದರಲ್ಲಿ ದೇವಿಯನ್ನು ಉದ್ದೇಶಿಸಿ ಬಳಸಿದ ಪದಗಳು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿವೆ ಎಂಬ ಆರೋಪಗಳು ಕೇಳಿಬಂದಿದ್ದವು. 2025ರ ಜೂನ್‌ನಲ್ಲಿ ಚೇವೆಳ್ಳಾದ ರೆಸಾರ್ಟ್‌ವೊಂದರಲ್ಲಿ ನಡೆದ ಅವರ ಜನ್ಮದಿನದ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಅನುಮತಿಯಿಲ್ಲದೆ ಮದ್ಯ ಮತ್ತು ಸೌಂಡ್ ಸಿಸ್ಟಮ್ ಬಳಕೆ ಹಾಗೂ ಡ್ರಗ್ಸ್ ಬಳಕೆ ಆರೋಪಗಳಿಂದ ಆ ಸಂಭ್ರಮಾಚರಣೆ ವಿವಾದಕ್ಕೀಡಾಗಿತ್ತು. ಪ್ರತಿಯೊಂದು ವಿವಾದ ಎದುರಾದಾಗಲೂ ತಮ್ಮದೇ ಶೈಲಿಯಲ್ಲಿ ವಿವರಣೆ ನೀಡುತ್ತಿರುವ ಮಂಗ್ಲಿ, ಈಗ ದಾಖಲಾಗಿರುವ 10 ಕೋಟಿ ರೂ. ವಂಚನೆಯ ಪ್ರಕರಣಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಗಾಯಕಿ ಮಂಗ್ಲಿಯಿಂದ ಸಾಂಸ್ಕೃತಿಕ ಸಂಜೆ:ಕುಣಿದು ಕುಪ್ಪಳಿಸಿದ ಯುವ ಸಮೂಹ
ಯಾರು ಈ ಮಂಗ್ಲಿ?
ಅನಂತಪುರ ಜಿಲ್ಲೆಯ ಸತ್ಯವತಿ ರಾಥೋಡ್ ನಂತರ 'ಮಂಗ್ಲಿ' ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಟಿವಿ ವಾಹಿನಿಗಳಲ್ಲಿ ಜಾನಪದ ಕಲಾವಿದೆಯಾಗಿ ವೃತ್ತಿಜೀವನ ಆರಂಭಿಸಿದ ಅವರು, ಬತುಕಮ್ಮ ಮತ್ತು ಬೋನಾಲು ಹಾಡುಗಳ ಮೂಲಕ ತೆಲಂಗಾಣದ ಮನೆಮಾತಾದರು. 2017ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಮಂಗ್ಲಿ ಅವರಿಗೆ 'ಅಲಾ ವೈಕುಂಠಪುರಮುಲೋ' ಚಿತ್ರದ "ರಾಮುಲೋ ರಾಮುಲಾ" ಹಾಡು ದೊಡ್ಡ ಹೆಸರನ್ನು ತಂದುಕೊಟ್ಟಿತು. ಆನಂತರ ತೆಲುಗಿನಲ್ಲಿ ಮಾತ್ರವಲ್ಲದೆ ಕನ್ನಡ ಮತ್ತು ತಮಿಳು ಭಾಷೆಗಳಲ್ಲೂ ತಮ್ಮ ಗಾಯನದ ಮೂಲಕ ಮ್ಯಾಜಿಕ್ ಮಾಡಿದ್ದಾರೆ ಮಂಗ್ಲಿ.