ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಾಮ್ ಹಾಲೆಂಡ್ ಜೊತೆ ಇಡೀ 'ದಿ ಒಡಿಸ್ಸಿ' ಚಿತ್ರತಂಡವನ್ನು ಭಾರತಕ್ಕೆ ಕರೆತಂದ ನಿರ್ದೇಶಕ ಕ್ರಿಸ್ಟೋಫರ್ ನೋಲನ್

ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಸಿನಿಮಾದ ಪ್ರಚಾರಕ್ಕಾಗಿ ಟಾಮ್ ಹಾಲೆಂಡ್ ಹಾಗೂ ಮ್ಯಾಟ್ ಡಾಮನ್ ಮುಂಬೈಗೆ ಆಗಮಿಸಿದ್ದಾರೆ. ಸಂಪೂರ್ಣವಾಗಿ ಐಮ್ಯಾಕ್ಸ್ ಫಿಲ್ಮ್ ಕ್ಯಾಮೆರಾಗಳಲ್ಲೇ ಶೂಟ್ ಆದ ವಿಶ್ವದ ಮೊದಲ ಚಿತ್ರ ಎಂಬ ಹೆಗ್ಗಳಿಕೆಯ ಈ ಸಿನಿಮಾ ಜುಲೈ 17 ರಂದು ತೆರೆಕಾಣಲಿದೆ.

ಮುಂಬೈನಲ್ಲಿ ಹಾಲಿವುಡ್‌ ಹವಾ; 'ದಿ ಒಡಿಸ್ಸಿ' ಪ್ರಚಾರಕ್ಕಾಗಿ ಬಂದ ನೋಲನ್

-

Avinash GR
Avinash GR Jul 13, 2026 5:16 PM

ಹಾಲಿವುಡ್‌ನ ಮಾಂತ್ರಿಕ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರು ಇತ್ತೀಚೆಗೆ ಮುಂಬೈಗೆ ಭೇಟಿ ನೀಡುವ ಮೂಲಕ ಭಾರತೀಯ ಚಿತ್ರರಂಗ ಹಾಗೂ ಸಿನಿಮಾ ಪ್ರೇಕ್ಷಕರಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ತಮ್ಮ ಬಹುನಿರೀಕ್ಷಿತ ಹಾಗೂ ಅತ್ಯಂತ ಮಹತ್ವದ ಸಿನಿಮಾವಾದ 'ದಿ ಒಡಿಸ್ಸಿ' (The Odyssey) ಸಿನಿಮಾದ ಜಾಗತಿಕ ಬಿಡುಗಡೆಯ ಪ್ರಚಾರ ಪ್ರವಾಸದ ಅಂಗವಾಗಿ ಅವರು ಭಾರತಕ್ಕೆ ಆಗಮಿಸಿದ್ದರು. ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ನೋಲನ್ ಅವರಿಗೆ ಚಿತ್ರದ ಪ್ರಮುಖ ತಾರಾಗಣವಾದ ಆಸ್ಕರ್ ವಿಜೇತ ನಟ ಮ್ಯಾಟ್ ಡಾಮನ್, ಬಾಫ್ಟಾ ಪ್ರಶಸ್ತಿ ಪುರಸ್ಕೃತ ಯುವ ನಟ ಟಾಮ್ ಹಾಲೆಂಡ್ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ಖ್ಯಾತ ನಿರ್ಮಾಪಕಿ ಎಮ್ಮಾ ಥಾಮಸ್ ಸಾಥ್ ನೀಡಿದರು.

ಜುಲೈ 17ರಂದು 'ದಿ ಒಡಿಸ್ಸಿ' ರಿಲೀಸ್‌

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕ್ರಿಸ್ಟೋಫರ್ ನೋಲನ್ ಅವರ ಚಲನಚಿತ್ರವೊಂದರ ಜಾಗತಿಕ ಪ್ರೀಮಿಯರ್ ಪ್ರದರ್ಶನ ಹಾಗೂ ಇಷ್ಟು ದೊಡ್ಡ ಮಟ್ಟದ ಹಾಲಿವುಡ್ ಚಿತ್ರತಂಡ ಭಾರತಕ್ಕೆ ಆಗಮಿಸಿರುವುದು ಇದೇ ಮೊಟ್ಟಮೊದಲ ಬಾರಿಯಾಗಿದೆ. 'ದಿ ಒಡಿಸ್ಸಿ' ಸಿನಿಮಾದ ಜಾಗತಿಕ ಪ್ರಚಾರ ಪ್ರವಾಸದ ಪ್ರಮುಖ ತಾಣಗಳಲ್ಲಿ ಒಂದಾಗಿ ಮುಂಬೈ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಚಿತ್ರವು ಜುಲೈ 17ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲು ಸಜ್ಜಾಗಿದೆ.

ಐಮ್ಯಾಕ್ಸ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು

'ದಿ ಒಡಿಸ್ಸಿ' ಚಿತ್ರವು ಚಿತ್ರರಂಗದಲ್ಲೇ ಅತ್ಯಂತ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಪೂರ್ಣವಾಗಿ ಐಮ್ಯಾಕ್ಸ್‌ ಫಿಲ್ಮ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ವಿಶ್ವದ ಮೊದಲ ಚಲನಚಿತ್ರ ಎಂಬ ಐತಿಹಾಸಿಕ ದಾಖಲೆಯನ್ನು ಈ ಸಿನಿಮಾ ಬರೆದಿದೆ. ಮುಂಬೈನ ಫೀನಿಕ್ಸ್ ಪ್ಯಾಲೇಡಿಯಂನಲ್ಲಿರುವ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಅಭಿಮಾನಿಗಳ ಪ್ರದರ್ಶನದೊಂದಿಗೆ ಭಾರತದಲ್ಲಿನ ಈ ಸಿನಿಮೀಯ ಸಂಭ್ರಮಾಚರಣೆಗೆ ಅದ್ಧೂರಿ ಚಾಲನೆ ನೀಡಲಾಯಿತು. ಈ ಪ್ರದರ್ಶನದ ವೇಳೆ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಹಾಗೂ ಚಿತ್ರತಂಡದವರು ದಿಢೀರನೆ ಚಿತ್ರಮಂದಿರದಲ್ಲಿ ಪ್ರತ್ಯಕ್ಷರಾಗಿ ನೆರೆದಿದ್ದ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದರು. ಇಡೀ ಜಾಗತಿಕ ಪ್ರಚಾರ ಪ್ರವಾಸದಲ್ಲಿ ಚಿತ್ರತಂಡವು ಅಭಿಮಾನಿಗಳನ್ನು ನೇರವಾಗಿ ಭೇಟಿಯಾದ ಏಕೈಕ ಪ್ರದರ್ಶನ ಇದಾಗಿದೆ.

ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಚಿತ್ರಕ್ಕೆ ತಿಂಗಳಿಗೂ ಮೊದಲೇ ಅಡ್ವಾನ್ಸ್‌ ಬುಕ್ಕಿಂಗ್; ಇದು ಜಗತ್ತಿನ ಮೊದಲ ಸಂಪೂರ್ಣ ಐಮ್ಯಾಕ್ಸ್ ಸಿನಿಮಾ!

ಭಾರತದ ಭೇಟಿ ಕುರಿತು ನೋಲನ್ ತಂಡದ ಮಾಧ್ಯಮ ಸಂವಾದ

ಕಾರ್ಯಕ್ರಮದ ಭಾಗವಾಗಿ ಕ್ರಿಸ್ಟೋಫರ್ ನೋಲನ್, ಮ್ಯಾಟ್ ಡಾಮನ್, ಟಾಮ್ ಹಾಲೆಂಡ್ ಮತ್ತು ಎಮ್ಮಾ ಥಾಮಸ್ ಅವರು ಭಾರತೀಯ ಮಾಧ್ಯಮಗಳೊಂದಿಗೆ ಸುದೀರ್ಘ ಸಂವಾದ ನಡೆಸಿದರು. ಈ ವೇಳೆ 'ದಿ ಒಡಿಸ್ಸಿ' ಚಿತ್ರದ ಮೇಕಿಂಗ್, ಅದಕ್ಕಾಗಿ ಪಟ್ಟ ಶ್ರಮ ಹಾಗೂ ಜಾಗತಿಕ ಪ್ರವಾಸದ ಭಾಗವಾಗಿ ಭಾರತಕ್ಕೆ ಭೇಟಿ ನೀಡಿದಾಗ ತಮಗಾದ ಅದ್ಭುತ ಮತ್ತು ವಿಶೇಷ ಅನುಭವಗಳನ್ನು ಚಿತ್ರತಂಡದವರು ಅತ್ಯಂತ ಸಂತೋಷದಿಂದ ಹಂಚಿಕೊಂಡರು.

ಬಳಿಕ ನಡೆದ 'ರೆಡ್-ಕಾರ್ಪೆಟ್ ಪ್ರೀಮಿಯರ್' ಕಾರ್ಯಕ್ರಮದೊಂದಿಗೆ ಈ ವಿಶ್ವವಿಖ್ಯಾತ ಚಿತ್ರತಂಡದ ಭಾರತ ಪ್ರವಾಸವು ಮುಕ್ತಾಯಗೊಂಡಿತು. ಈ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿ ಗಣ್ಯರು ಹಾಗೂ ತಾರೆಯರು ಪಾಲ್ಗೊಂಡು ಹಾಲಿವುಡ್ ತಂಡವನ್ನು ಸ್ವಾಗತಿಸಿದ್ದಲ್ಲದೆ, ಈ ವರ್ಷದ ಅತಿ ದೊಡ್ಡ ಸಿನಿಮಾ ಸಂಭ್ರಮಕ್ಕೆ ಸಾಕ್ಷಿಯಾದರು.

ಭಾರಿ ತಾರಾಗಣದ 'ದಿ ಒಡಿಸ್ಸಿ'

ಹೋಮರ್ ಅವರ ಮೂಲ ಮಹಾಕಾವ್ಯದ ಕಥಾಹಂದರವನ್ನು ಆಧರಿಸಿರುವ 'ದಿ ಒಡಿಸ್ಸಿ' ಚಿತ್ರದಲ್ಲಿ ಹಾಲಿವುಡ್‌ನ ದೊಡ್ಡ ತಾರಾಬಳಗವೇ ಅಬ್ಬರಿಸಿದೆ. ಮ್ಯಾಟ್ ಡಾಮನ್ ಮತ್ತು ಟಾಮ್ ಹಾಲೆಂಡ್ ಜೊತೆಗೆ ಆಸ್ಕರ್ ವಿಜೇತೆ ಅನ್ನಿ ಹ್ಯಾಥ್‌ವೇ, ರಾಬರ್ಟ್ ಪ್ಯಾಟಿನ್ಸನ್, ಲುಪಿಟಾ ನೈಯೊಂಗೊ, ಸಮಂತಾ ಮಾರ್ಟನ್, ಚಾರ್ಲೈಜ್ ಥೆರಾನ್ ಹಾಗೂ ಎಮ್ಮಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ನಟಿ ಜೆಂಡಾಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಭಾರತ ನಮಗೆ ಪ್ರಮುಖ ಮಾರುಕಟ್ಟೆ

ಯೂನಿವರ್ಸಲ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವ ಈ ಚಿತ್ರವನ್ನು ಕ್ರಿಸ್ಟೋಫರ್ ನೋಲನ್ ಮತ್ತು ಎಮ್ಮಾ ಥಾಮಸ್ ಜಂಟಿಯಾಗಿ ತಮ್ಮ 'ಸಿಂಕೋಪಿ' ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಯೂನಿವರ್ಸಲ್ ಪಿಕ್ಚರ್ಸ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡೆನ್ಜಿಲ್ ಡಯಾಸ್ ಅವರು ಈ ಭೇಟಿಯ ಕುರಿತು ಮಾತನಾಡಿ, "ಭಾರತದ ಪ್ರೇಕ್ಷಕರಿಗೆ ಕ್ರಿಸ್ಟೋಫರ್ ನೋಲನ್ ಅವರ ಸಿನಿಮಾಗಳೆಂದರೆ ಸದಾ ವಿಶೇಷ ಒಲವು ಮತ್ತು ಕ್ರೇಜ್ ಇರುತ್ತದೆ. 'ದಿ ಒಡಿಸ್ಸಿ' ಸಿನಿಮಾದ ಜಾಗತಿಕ ಪ್ರಚಾರಕ್ಕಾಗಿ ಮುಂಬೈಗೆ ಬಂದಿರುವುದು ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರಮಂದಿರದ ಅನುಭವವನ್ನು ನೀಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಭಾರತವು ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ" ಎಂದು ತಿಳಿಸಿದರು.

ಸದ್ಯ ಭಾರತದಾದ್ಯಂತ 'ದಿ ಒಡಿಸ್ಸಿ' ಚಿತ್ರದ ಐಮ್ಯಾಕ್ಸ್‌ ಟಿಕೆಟ್‌ಗಳ ಮುಂಗಡ ಬುಕಿಂಗ್ ಭರದಿಂದ ಆರಂಭವಾಗಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.