Coolie v/s War 2: ಕೂಲಿ v/s ವಾರ್ 2- ಯಾವುದು ಹೆಚ್ಚು ಕಲೆಕ್ಷನ್ ಮಾಡಿದೆ? ಇಲ್ಲಿದೆ ಡಿಟೇಲ್ಸ್
ರಜನೀಕಾಂತ್ ನಟನೆಯ 'ಕೂಲಿ ಮತ್ತು ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್ ಅಭಿನಯದ ವಾರ್ 2 ಒಂದೇ ದಿನ ರಿಲೀಸ್ ಆಗಿದ್ದು, ಯಾವ ಸಿನಿಮಾ ಹಿಟ್ ಆಗುತ್ತೆ, ಯಾವುದು ಬಾಕ್ಸ್ ಆಫೀಸ್ ಲೂಟಿ ಮಾಡುತ್ತೆ ಎಂಬ ಕಾತುರ ಕೂಡ ಜನರಿಗಿತ್ತು. ಇದೀಗ ಕೂಲಿ ಮತ್ತು ವಾರ್ 2 ಸಿನಿಮಾದಲ್ಲಿ ವೀಕೆಂಡ್ ನಲ್ಲಿ ಯಾವ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಮುಂಚೂಣಿಯಲ್ಲಿದೆ ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ನಡೆಯುತ್ತಿದೆ.


ನವದೆಹಲಿ: ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಮೇಲೆ ಜನರಿಗೆ ಬಹಳ ನಿರೀಕ್ಷೆ ಇದ್ದೇ ಇರುತ್ತದೆ. ಇವರ ಅಭಿನಯದ 'ರೋಬೋಟ್', 'ಜೈಲರ್' , 'ವೆಟೈಯನ್' ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಬಳಿಕ ಲೋಕೇಶ್ ಕನಗರಾಜ್ ನಿರ್ದೆಶನದ 'ಕೂಲಿ (Coolie) ಸಿನಿಮಾವು ಆಗಸ್ಟ್ 14ರಂದು ಬಿಡುಗಡೆಯಾಗುವ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಬಿಡುಗಡೆ ಯಾಗುವ ಮೊದಲೇ ಟಿಕೆಟ್ ಬುಕ್ಕಿಂಗ್ ನಿಂದ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಮಾಡಿತ್ತು. ಈ ಮೂಲಕ ರಜನೀಕಾಂತ್ ಅಭಿಮಾನಿಗಳು ಈ ಸಿನಿಮಾಗೆ ಫಿದಾ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗಳನ್ನು ದಾಟುವ ನಿರೀಕ್ಷೆಯಿದೆ. ಅಂತೆಯೇ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿ ಆರ್ ಅಭಿನಯದ ವಾರ್ 2 ಚಿತ್ರವು(Coolie v/s War 2) ಕೂಡ ಅದೇ ದಿನ ಬಿಡುಗಡೆಯಾಗಿದ್ದು ಯಾವ ಸಿನಿಮಾ ಹಿಟ್ ಆಗುತ್ತೆ, ಯಾವುದು ಬಾಕ್ಸ್ ಆಫೀಸ್ ಲೂಟಿ ಮಾಡುತ್ತೆ ಎಂಬ ಕಾತುರ ಕೂಡ ಜನರಿಗಿತ್ತು. ಇದೀಗ ಕೂಲಿ ಮತ್ತು ವಾರ್ 2 ಸಿನಿಮಾದಲ್ಲಿ ವೀಕೆಂಡ್ ನಲ್ಲಿ ಯಾವ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮುಂಚೂಣಿ ಯಲ್ಲಿದೆ ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆ ಏರ್ಪಡುತ್ತಿದೆ.
ಬಹು ನಿರೀಕ್ಷೆ ಹುಟ್ಟಿಸಿದ ಸಿನಿಮಾ!
ನಾಗಾರ್ಜುನ ಅಕ್ಕಿನೇನಿ, ಸೌಬಿನ್ ಶಾಹಿರ್, ಉಪೇಂದ್ರ, ಶ್ರುತಿ ಹಾಸನ್, ಸತ್ಯರಾಜ್ ಮತ್ತು ರಚಿತಾ ರಾಮ್ , ಆಮೀರ್ ಖಾನ್ ಮತ್ತು ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ತಮಿಳಿನಲ್ಲಿ ಮೂಲ ಆವೃತ್ತಿ ಎಂದು ಬಿಡುಗಡೆ ಮಾಡಲಾಗಿತ್ತು. ಅಂತೆಯೇ ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳು ಕೂಡ ಆಗಸ್ಟ್ 14ರಂದು ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಎಲ್ಲಾ ಭಾಷೆಗಳಲ್ಲಿಯೂ ಉತ್ತಮ ಪ್ರಚಾರವನ್ನು ನೀಡಲಾಗಿದೆ. ಹೀಗಾಗಿ ಜನರಿಗೆ ಕೂಲಿ ಸಿನಿಮಾ ರಿಲೀಸ್ ಆಗುವ ಮೊದಲೇ ಬಹಳ ನಿರೀಕ್ಷೆ ಇತ್ತು ಎನ್ನಬಹುದು.
ಕೂಲಿ ಸಿನಿಮಾ ವೀಕೆಂಡ್ ಕಲೆಕ್ಷನ್ ಎಷ್ಟು?
ಕೂಲಿ ಬಿಡುಗಡೆಯಾಗುವ ಮೊದಲೇ ಟಿಕೆಟ್ ಬುಕ್ಕಿಂಗ್ ನಲ್ಲಿಯೇ ಭರ್ಜರಿ ಕಲೆಕ್ಷನ್ ಮಾಡಿತ್ತು. ಆಗಸ್ಟ್ 16 ರಂದು 39.5 ಕೋಟಿ ರೂ. ಗಳಿಸಿದ್ದ ಈ ಸಿನಿಮಾ ಆಗಸ್ಟ್ 17ರ ಭಾನುವಾರ ದಂದು 35 ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಶನಿವಾರಕ್ಕಿಂತ ಭಾನುವಾರದ ಕಲೆಕ್ಷನ್ 11.39% ರಷ್ಟು ಕುಸಿತವಾಗಿದೆ. ಒಟ್ಟಾರೆ ಈ ವೀಕೆಂಡ್ ನಲ್ಲಿ ಒಟ್ಟು ಗಳಿಕೆ ಈಗ 194.25 ಕೋಟಿ ರೂ.ಗಳಷ್ಟಿದೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ:Nodiddu Sullagabahudu Movie: ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಹಾಡು ರಿಲೀಸ್
ಎಷ್ಟು ಪ್ರದರ್ಶನವಿತ್ತು?
ಕೂಲಿ ಸಿನಿಮಾ ಚೆನ್ನೈನಲ್ಲಿ 1,053 ಪ್ರದರ್ಶನ ಕಂಡಿದ್ದು ತಮಿಳು ಆವೃತ್ತಿಗೆ ಹೆಚ್ಚು ಪ್ರಾತಿನಿಧ್ಯತೆ ಇತ್ತು. ಬೆಂಗಳೂರಿನಲ್ಲಿ 714, ಕೊಯಮತ್ತೂರು 355 ಪ್ರದರ್ಶನ ಕಂಡಿದೆ. ದೆಹಲಿ NCR 278 ಪ್ರದರ್ಶನಗಳನ್ನು ಹೊಂದಿದ್ದರೆ, ಮುಂಬೈ ಮತ್ತು ಅಹಮದಾಬಾದ್ ಕ್ರಮವಾಗಿ 211 ಮತ್ತು 217 ಪ್ರದರ್ಶನಗಳನ್ನು ಹೊಂದಿದ್ದವು. ಹೈದರಾಬಾದ್ ನಲ್ಲಿ ತೆಲುಗು ಆವೃತ್ತಿಗೆ ಅತೀ ಹೆಚ್ಚಿನ ಪ್ರೇಕ್ಷಕರಿದ್ದು 542 ಪ್ರದರ್ಶನಗಳನ್ನು ಕಂಡಿದೆ.
ಯಾವುದು ಹೆಚ್ಚು ಕಲೆಕ್ಷನ್ ಮಾಡಿದೆ?
ಸ್ವಾತಂತ್ರ್ಯ ದಿನಾಚರಣೆಯ ರಜಾ ದಿನ ಹಾಗೂ ವೀಕೆಂಡ್ ಎರಡು ಕೂಡ ಒಟ್ಟಿಗೆ ಸಿಕ್ಕ ಕಾರಣ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಿತ್ತು ಎನ್ನಬಹುದು. ವಾರ್ 2 ಹಾಗೂ ಕೂಲಿ ಸಿನಿಮಾ ಒಟ್ಟಿಗೆ ರಿಲೀಸ್ ಆದ ಕಾರಣ ಯಾವುದು ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಕುತೂಹಲ ಅಭಿಮಾನಿಗಳದ್ದಾಗಿದೆ. ವಾರ್ 2 ಸಿನಿಮಾ ಆಗಸ್ಟ್ 17ರಂದು 31 ಕೋಟಿ ರೂ. ಗಳಿಸಿದರೆ, ಕೂಲಿ ಸಿನಿಮಾ ಅದೇ ದಿನ 35 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ವಾರ್ 2 ಗಿಂತ ರಜನಿಕಾಂತ್ ಅವರ ಕೂಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಗಳಿಕೆ ಕೂಡ ಮಾಡುತ್ತಿದೆ ಎನ್ನಬಹುದು.