ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಜನಿಕಾಂತ್‌ ನಟನೆಯ ʻಜೈಲರ್‌ 2ʼ ನೋಡಲು ಒಂದಿಡೀ ಚಿತ್ರಮಂದಿರ ಬುಕ್‌ ಮಾಡಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್; ಸಿನಿಮಾ ವೀಕ್ಷಿಸಲು ಯಾರೆಲ್ಲಾ ಬರ್ತಾರೆ ಗೊತ್ತಾ?

Jailer 2 Movie: ರಜನಿಕಾಂತ್‌ ನಟನೆಯ ʻಜೈಲರ್‌ 2ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಬರೋಬ್ಬರಿ 400 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಈ ನಡುವೆ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿರುವ ಭಾರತ ತಂಡದ ತಾರೆ ಸಂಜು ಸ್ಯಾಮ್ಸನ್, ತಮ್ಮ ಆಪ್ತರ ಜೊತೆ ಒಟ್ಟಾಗಿ ಕುಳಿತು ಸಿನಿಮಾ ಕಣ್ತುಂಬಿಕೊಳ್ಳಲು ಒಂದಿಡೀ ಚಿತ್ರಮಂದಿರವನ್ನೇ ಕಾಯ್ದಿರಿಸಿದ್ದಾರೆ.

ʻಜೈಲರ್‌ 2ʼ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್‌ ಮಾಡಿದ ಸಂಜು ಸ್ಯಾಮ್ಸನ್!

-

Avinash GR
Avinash GR Oct 20, 2026 12:51 PM

ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ʻಸೂಪರ್‌ಸ್ಟಾರ್ʼ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದು ಎಂಥ ಅಭಿಮಾನವೆಂದರೆ, ಇತ್ತೀಚೆಗೆ ತೆರೆಕಂಡಿರುವ ಬಹುನಿರೀಕ್ಷಿತ 'ಜೈಲರ್ 2' ಚಿತ್ರಕ್ಕಾಗಿ ಒಂದಿಡೀ ಚಿತ್ರಮಂದಿರವನ್ನೇ ಸಂಜು ಬುಕ್ ಮಾಡಿದ್ದಾರೆ! ಈ ಮೂಲಕ ತಮ್ಮ ಅಭಿಮಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ಕುಟುಂಬ, ಸ್ನೇಹಿತರು ಮತ್ತು ಭಾರತ ತಂಡದ ಸಹ-ಆಟಗಾರರೊಂದಿಗೆ ಒಟ್ಟಾಗಿ ಕುಳಿತು ಸಿನಿಮಾ ವೀಕ್ಷಿಸಲು ಬಯಸಿರುವ ಸಂಜು, ಇಡೀ ಚಿತ್ರಮಂದಿರವನ್ನೇ ಕಾಯ್ದಿರಿಸಿದ್ದಾರೆ.

ತಲೈವಾ ಸಿನಿಮಾಗಳಿಗಾಗಿ ಸದಾ ಕಾಯುತ್ತಿರುತ್ತೇನೆ

ಈ ಕುರಿತು ಮಾತನಾಡಿರುವ ಸಂಜು ಸ್ಯಾಮ್ಸನ್, "ನನಗೆ ರಜನಿಕಾಂತ್‌ ಸರ್ ಚಿತ್ರಗಳನ್ನು ನೋಡುವುದೆಂದರೆ ಅಪಾರ ಪ್ರೀತಿ. ಅವರ ಹೊಸ ಚಿತ್ರಕ್ಕಾಗಿ ನಾನು ಸದಾ ಕಾತರದಿಂದ ಕಾಯುತ್ತಿರುತ್ತೇನೆ. ದೆಹಲಿಯಲ್ಲಿ ಒಂದು ಕಾರ್ಯಕ್ರಮವಿದ್ದ ಕಾರಣ ನನಗೆ ಮೊದಲ ದಿನವೇ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ, ಹೀಗಾಗಿ ಒಂದು ದಿನ ತಡವಾಯಿತು. ಅವರ ಚಿತ್ರಗಳನ್ನು ಆದಷ್ಟು ತಪ್ಪಿಸದೇ ನೋಡಲು ಪ್ರಯತ್ನಿಸುತ್ತೇನೆ" ಎಂದು ತಿಳಿಸಿದ್ದಾರೆ.

Jailer 2 Update: ಜೈಲರ್ 2 ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಜನಿಕಾಂತ್! ಕಮಲ್‌ ಜೊತೆಗಿನ ಮೂವಿ ಬಗ್ಗೆ ಹೇಳಿದ್ದನು?

ನಾನು ಅತ್ಯಂತ ಕಾತರನಾಗಿದ್ದೇನೆ

"ಅದೃಷ್ಟವಶಾತ್ ಒಂದಿಡೀ ಚಿತ್ರಮಂದಿರವನ್ನೇ ಬುಕ್ ಮಾಡಲು ಸಾಧ್ಯವಾಯಿತು. ನಾನು ನನ್ನ ಸ್ನೇಹಿತರನ್ನು ಆಹ್ವಾನಿಸಿದ್ದೇನೆ ಮತ್ತು ನನ್ನ ಪತ್ನಿಯೂ ಜೊತೆಗಿದ್ದಾರೆ. ತಲೈವಾ ಅವರನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ನಾನು ತುಂಬಾನೇ ಕಾತರನಾಗಿದ್ದೇನೆ" ಎಂದು ಸಂಜು ಸಂತಸ ಹಂಚಿಕೊಂಡಿದ್ದಾರೆ.

ತಮಿಳು ಬಲ್ಲ ಆಟಗಾರರೂ ಬರಲಿದ್ದಾರೆ

ಭಾರತ ಕ್ರಿಕೆಟ್ ತಂಡದಲ್ಲಿ ತಮಿಳು ಅರ್ಥವಾಗುವ ಹಲವು ಆಟಗಾರರು ಸಹ ತಮ್ಮೊಂದಿಗೆ ಸಿನಿಮಾ ವೀಕ್ಷಣೆಗೆ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿರುವ ಸಂಜು, "ತಂಡದಲ್ಲಿ ಮತ್ತು ಸಹಾಯಕ ಸಿಬ್ಬಂದಿ ವರ್ಗದಲ್ಲಿ ತಮಿಳು ಬಲ್ಲ ಪ್ರತಿಯೊಬ್ಬರೂ ಈ ಪ್ರದರ್ಶನಕ್ಕೆ ಬರುತ್ತಿದ್ದಾರೆ" ಎಂದು ಹೇಳಿದ್ದಾರೆ.

ಬಾಕ್ಸ್‌ ಆಫೀಸ್ ಧೂಳೀಪಟ ಮಾಡುತ್ತಿರುವ ರಜನಿಕಾಂತ್‌

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್ 2' ಸಿನಿಮಾವು 2023ರ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಮುಂದುವರಿದ ಭಾಗವಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ 'ಟೈಗರ್ ಮುತ್ತುವೇಲ್ ಪಾಂಡಿಯನ್' ಎಂಬ ಐಕಾನಿಕ್ ಪಾತ್ರದಲ್ಲಿ ರಜನಿಕಾಂತ್ ಮತ್ತೆ ಕಾಣಿಸಿಕೊಂಡಿದ್ದು, ಭರ್ಜರಿ ಆ್ಯಕ್ಷನ್, ತಮ್ಮ ವಿಶಿಷ್ಟ ಶೈಲಿ ಮತ್ತು ಅತ್ಯದ್ಭುತ ಹಿನ್ನೆಲೆ ಸಂಗೀತದೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.

ಚಿತ್ರದ ಬಿಡುಗಡೆಗೆ ಇದ್ದ ಭಾರಿ ನಿರೀಕ್ಷೆಗೆ ತಕ್ಕಂತೆ, ಈ ಚಿತ್ರವು ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿದೆ. ದೇಶಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ಗಳಿಸಿದೆ. ಆಗಲೇ ಈ ಚಿತ್ರದ ಗಳಿಕೆಯು 400 ಕೋಟಿ ರೂ. ದಾಟಿದೆ. ರಜನಿಕಾಂತ್ ಅವರ ಖಡಕ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಚಿತ್ರದ ರೋಚಕ ಕಥಾಹಂದರವು 'ಜೈಲರ್ 2' ಚಿತ್ರವನ್ನು ಸೂಪರ್‌ಹಿಟ್‌ ಆಗುವಂತೆ ಮಾಡಿದೆ.