ಶ್ರೀರಾಮ್ ಗಂಧರ್ವ ಸಾರಥ್ಯದ 'ಕನಸಲು..' ಆಲ್ಬಮ್ ಸಾಂಗ್ ರಿಲೀಸ್; ಹಾಡಾಗಿ ಬಂತು ಟೈಲರ್ ಲವ್ ಸ್ಟೋರಿ!
Kanasalu Album Song: ಗ್ರಾಮೀಣ ಹಿನ್ನೆಲೆಯ ಟೈಲರಿಂಗ್ ಅಂಗಡಿಯ ಹುಡುಗ ಹಾಗೂ ಗ್ರಾಹಕಿ ಮೀರಾ ನಡುವಿನ ಪರಿಶುದ್ಧ ಪ್ರೇಮಕಥೆಯನ್ನು ʻಕನಸಲುʼ ಆಲ್ಬಂ ಸಾಂಗ್ ಅನಾವರಣಗೊಳಿಸಿದೆ. ಶ್ರೀರಾಮ್ ಗಂಧರ್ವ ಅವರ ಸರ್ವತೋಮುಖ ಸಾರಥ್ಯದಲ್ಲಿ ಮೂಡಿಬಂದಿರುವ ಈ ವಿಡಿಯೋ ಆಲ್ಬಮ್ ಅನ್ನು ಆನಂದ್ ಆಡಿಯೋ ಬಿಡುಗಡೆ ಮಾಡಿದೆ.
-
ನವಿರಾದ ಮುಗ್ಧ ಪ್ರೇಮಕಥೆಯನ್ನು ಒಳಗೊಂಡಿರುವ ‘ಕನಸಲು..’ ಎಂಬ ವಿನೂತನ ಆಲ್ಬಮ್ ಹಾಡು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಬಹುಮುಖ ಪ್ರತಿಭೆ ಶ್ರೀರಾಮ್ ಗಂಧರ್ವ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಂದನವನದ ಹಲವು ಯುವ ಪ್ರತಿಭೆಗಳು ಹಾಗೂ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ‘ಕಂಗ್ರಾಜುಲೇಶನ್ಸ್ ಬ್ರದರ್ಸ್’ ಚಿತ್ರದ ನಾಯಕ ರಕ್ಷಿತ್ ನಾಗ್ ಮಾತನಾಡಿ, "ಶ್ರೀರಾಮ್ ತಮ್ಮ ಸೃಜನಶೀಲ ಕೆಲಸವನ್ನು ಇಷ್ಟಕ್ಕೇ ನಿಲ್ಲಿಸಬಾರದು. ಪ್ರೇಕ್ಷಕರು ಬೇಗ ಮರೆಯುವ ಈ ಕಾಲಘಟ್ಟದಲ್ಲಿ ನಿರಂತರವಾಗಿ ಇಂತಹ ಉತ್ತಮ ಹಾಡುಗಳನ್ನು ನೀಡುತ್ತಿದ್ದರೆ ಮಾತ್ರ ಸದಾ ನೆನಪಿನಲ್ಲಿ ಉಳಿಯಲು ಸಾಧ್ಯ" ಎಂದು ಕಿವಿಮಾತು ಹೇಳಿದರು.
ಬಳಿಕ ಮಾತನಾಡಿದ ಜಾನಪದ ಗಾಯಕ ಜೋಗಿಲಾ ಸಿದ್ಧರಾಜು, "ಕನ್ನಡದಲ್ಲಿ ಹೆಚ್ಚಾಗಿ ಪರಭಾಷಾ ಆಮದು ಗಾಯಕ-ಗಾಯಕಿಯರಿಗೆ ಮಣೆ ಹಾಕುತ್ತಿರುವ ಈ ಸಂದರ್ಭದಲ್ಲಿ, ಸ್ಥಳೀಯವಾಗಿ ಶ್ರೀರಾಮ್ ಅವರಂತಹ ರಾಗ ಸಂಯೋಜಿಸಿ ಹಾಡುವ ಬಹುಮುಖ ಪ್ರತಿಭೆಗಳನ್ನು ಗುರುತಿಸಲು ಹಾಗೂ ಅವರ ಪ್ರತಿಭೆ ಅನಾವರಣಗೊಳ್ಳಲು ಇಂತಹ ಆಲ್ಬಮ್‌ಗಳು ಅನಿವಾರ್ಯ ಮತ್ತು ಅತ್ಯಗತ್ಯ" ಎಂದು ಪ್ರಶಂಸಿಸಿದರು.
ಟೈಲರ್ ಲವ್ ಸ್ಟೋರಿ
‘ಕನಸಲು..’ ಆಲ್ಬಮ್ ಹಾಡಿನಲ್ಲಿ ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ಸಹಾಯಕ ಹುಡುಗ ಹಾಗೂ ಅಲ್ಲಿಗೆ ಬರುವ ಗ್ರಾಹಕಿ ‘ಮೀರಾ’ ಎಂಬ ಯುವತಿಯ ನಡುವೆ ಚಿಗುರುವ ಮುಗ್ಧ ಪ್ರೇಮಕಥೆಯನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಡಲಾಗಿದೆ. ನಾಯಕನಾಗಿ ನಟಿಸಿರುವ ಯುವನಟ ದರ್ಶನ್ ಇದೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು, ತಮ್ಮ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ನಾಯಕಿ ಮೀರಾ ಪಾತ್ರದಲ್ಲಿ ನಟಿಸಿರುವ ಗಗನಾ ಅವರಿಗೆ ಈಗಾಗಲೇ ಸಿನಿಮಾ ಮತ್ತು ವೆಬ್ ಸಿರೀಸ್‌ಗಳಲ್ಲಿ ನಟಿಸಿದ ಅನುಭವವಿದ್ದು, ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಸಹಜ ಪ್ರೇಮಕಥೆಯನ್ನು ನಿರ್ದೇಶಕರು ಅಷ್ಟೇ ಸುಂದರವಾಗಿ ಪರದೆಯ ಮೇಲೆ ತಂದಿದ್ದಾರೆ ಎಂದು ಸಂತಸ ಹಂಚಿಕೊಂಡರು.
ಸಿನಿಮಾ ಮಾಡಲು ರೆಡಿಯಾದ ಶ್ರೀರಾಮ್
ಹಾಡನ್ನು ಸ್ವತಃ ಬರೆದು, ರಾಗ ಸಂಯೋಜಿಸಿ, ಹಾಡಿ ನಿರ್ದೇಶಿಸಿರುವ ಶ್ರೀರಾಮ್ ಗಂಧರ್ವ ಮಾತನಾಡಿ, "ಪ್ರಾಮಾಣಿಕತೆಯನ್ನು ಇಷ್ಟಪಡುವ ಹುಡುಗಿಯ ಭಾವನೆ ಮತ್ತು ಪ್ರತಿಯೊಬ್ಬರ ಬದುಕಿಗೂ ಹತ್ತಿರವಾಗುವ ಲವ್ ಸ್ಟೋರಿಯನ್ನು ಆಯ್ಕೆ ಮಾಡಿಕೊಂಡೆವು. ಆನಂದ್ ಆಡಿಯೋ ಸಂಸ್ಥೆಯು ಹಾಡನ್ನು ಮೆಚ್ಚಿಕೊಂಡು ತಮ್ಮ ಪ್ರಮುಖ ವಾಹಿನಿಯಲ್ಲೇ ಬಿಡುಗಡೆ ಮಾಡಿರುವುದು ತಂಡದ ಉತ್ಸಾಹ ಹೆಚ್ಚಿಸಿದೆ" ಎಂದರು. ಇದೇ ಸಂದರ್ಭದಲ್ಲಿ ಜುನೈದ್ ಅಹಮದ್ ಕಬೀರ್ ಸಾಹಿತ್ಯ ರಚಿಸಿರುವ ಈ ಹಾಡಿನ ಹಿಂದಿ ಆವೃತ್ತಿಯನ್ನೂ ಪ್ರದರ್ಶಿಸಲಾಯಿತು. ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಶ್ರೀರಾಮ್, ಕಿಶೋರ್ ಹಾಗೂ ರವಿಶಂಕರ್ ಗೌಡ ಪ್ರಧಾನ ಪಾತ್ರಗಳಲ್ಲಿರುವ ಎರಡು ಚಿತ್ರಗಳು ಮತ್ತು ಒಂದು ಬಾಲಿವುಡ್ ಸಿನಿಮಾ ಸೇರಿದಂತೆ ಒಟ್ಟು ಮೂರು ಸಿನಿಮಾಗಳ ನಿರ್ದೇಶನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದರು.
9 ಭಕ್ತಿಗೀತೆಗಳುಳ್ಳ ‘ರಾಜರ ಭಾಗ್ಯವಿದು’ ಆಲ್ಬಂ ಬಿಡುಗಡೆ; ಸೋದೆ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಚನ
ತಂದೆ ಗಂಧರ್ವ ಹೇಳಿದ್ದೇನು?
ಶ್ರೀರಾಮ್ ಗಂಧರ್ವ ಅವರ ತಂದೆ, ಹಿರಿಯ ನಿರ್ದೇಶಕ ಗಂಧರ್ವ ಅವರು ಮಾತನಾಡಿ, "ಸಿನಿಮಾದಲ್ಲಿ ಎರಡೂವರೆ ಗಂಟೆಗಳಲ್ಲಿ ಹೇಳಲಾಗದ ಸೂಕ್ಷ್ಮ ಭಾವನೆಗಳನ್ನು ತಂಡವು ಕೆಲವೇ ನಿಮಿಷಗಳ ಆಲ್ಬಮ್ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದೆ. ನನ್ನ ಮಗ ಮೊದಲ ಹೆಜ್ಜೆಯಲ್ಲೇ ಎಲ್ಲ ಜವಾಬ್ದಾರಿಗಳನ್ನು ಹೊತ್ತು ಯಶಸ್ವಿಯಾಗಿರುವುದು ಹೆಮ್ಮೆ ತಂದಿದೆ" ಎಂದರು.
ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಿಚರ್ಡ್ ಈ ಆಲ್ಬಮ್ ಅನ್ನು ನಿರ್ಮಿಸಿದ್ದು, ರವಿಕುಮಾರ್ ಬಿ.ಎಂ. ಅವರು ಛಾಯಾಗ್ರಹಣ ಹಾಗೂ ಸಂಕಲನದ ಹೊಣೆ ನಿಭಾಯಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದ್ದು, ಕಾರ್ಯಕ್ರಮದಲ್ಲಿ ‘ಮತ್ತೆ ಬಂತು ಮಾನ್ಸೂನ್’ ಚಿತ್ರದ ನಿರ್ಮಾಪಕ ಹಾಗೂ ನಟ ಡಾ. ಮಂಜುನಾಥ್, ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ನಿಹಾಲ್, ಬರಹಗಾರ ಹರೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ತಂಡಕ್ಕೆ ಹಾರೈಸಿದರು.