ʻಧುರಂಧರ್ 2ʼ ಸಿನಿಮಾ ಮೇಲೆ ಕಾಪಿರೈಟ್ ಕೇಸ್; 'ಓಯೆ ಓಯೆ' ಹಾಡು ಬಳಸಿದ್ದಕ್ಕೆ 'ತ್ರಿದೇವ್' ನಿರ್ಮಾಪಕರು ಗರಂ!
Dhurandhar 2 Copyright Case: ಬಾಕ್ಸ್ ಆಫೀಸ್‌ನಲ್ಲಿ 1650 ಕೋಟಿ ರೂ. ಗಳಿಸಿ ದಾಖಲೆ ಬರೆಯುತ್ತಿರುವ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರಕ್ಕೆ ಈಗ ಕಾಪಿರೈಟ್ ಸಂಕಷ್ಟ ಎದುರಾಗಿದೆ. 1989ರ 'ತ್ರಿದೇವ್' ಚಿತ್ರದ ಜನಪ್ರಿಯ 'ಓಯೆ ಓಯೆ' ಹಾಡನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ತ್ರಿಮೂರ್ತಿ ಫಿಲ್ಮ್ಸ್ ಆರೋಪಿಸಿ, ನಿರ್ದೇಶಕ ಆದಿತ್ಯ ಧರ್ ವಿರುದ್ಧ ಕೇಸ್ ದಾಖಲಿಸಿದೆ.
-
ರಣವೀರ್ ಸಿಂಗ್ ನಟನೆಯ ʻಧುರಂಧರ್ 2ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವುದು ಗೊತ್ತೇ ಇದೆ. ಬಾಲಿವುಡ್‌ನ ಹಲವು ದಾಖಲೆಗಳನ್ನು ʻಧುರಂಧರ್ 2ʼ ಸಿನಿಮಾವು ಕುಟ್ಟಿ ಪುಡಿ ಮಾಡಿದೆ. ಈ ಮಧ್ಯೆ ಈ ಚಿತ್ರಕ್ಕೆ ಕಾಪಿರೈಟ್ ಉಲ್ಲಂಘನೆ ಕುರಿತ ಆರೋಪ ಕೇಳಿಬಂದಿದೆ. ಹಾಡೊಂದನ್ನ ಯಾವುದೇ ಅನುಮತಿ ಪಡೆಯದೇ ʻಧುರಂಧರ್ 2ʼ ಸಿನಿಮಾದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ, ಕೇಸ್ ದಾಖಲಿಸಲಾಗಿದೆ.
ʻತ್ರಿದೇವ್ʼ ಚಿತ್ರದ ಹಾಡು ಬಳಕೆ
1989ರಲ್ಲಿ ತೆರೆಕಂಡಿದ್ದ ಸನ್ನಿ ಡಿಯೋಲ್, ನಾಸಿರುದ್ದೀನ್ ಶಾ, ಜಾಕಿ ಶ್ರಾಫ್ ಅಭಿನಯದ, ರಾಜೀವ್ ರೈ ನಿರ್ದೇಶನದ ʻತ್ರಿದೇವ್ʼ ಸಿನಿಮಾದ ʻಓಯೆ ಓಯೆʼ ಹಾಡನ್ನು 'ಧುರಂಧರ್: ದಿ ರಿವೆಂಜ್' ಚಿತ್ರದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ತ್ರಿದೇವ್ ಚಿತ್ರದ ನಿರ್ಮಾಪಕರಾದ ತ್ರಿಮೂರ್ತಿ ಫಿಲ್ಮ್ಸ್ ಈಗ ನಿರ್ದೇಶಕ ಆದಿತ್ಯ ಧರ್ ಅವರ B62 ಸ್ಟುಡಿಯೋಸ್ ವಿರುದ್ಧ ಮೊಕದ್ದಮೆ ಹೂಡಿದೆ. ಅಂದಹಾಗೆ, ತ್ರಿದೇವ್ ಚಿತ್ರಕ್ಕಾಗಿ ಈ ಹಾಡನ್ನು ಕಲ್ಯಾಣ್ ಜಿ-ಆನಂದ್ ಜಿ ಮತ್ತು ವಿಜು ಶಾ ಸಂಯೋಜಿಸಿದ್ದರು. ಆನಂದ್ ಬಕ್ಷಿ ಸಾಹಿತ್ಯ ಬರೆದಿದ್ದರು. ಇದು ಅಮಿತ್ ಕುಮಾರ್ ಮತ್ತು ಸಪ್ನಾ ಮುಖರ್ಜಿ ಹಾಡಿದ್ದರು.
ತ್ರಿಮೂರ್ತಿ ಫಿಲ್ಮ್ಸ್ ವಾದವೇನು?
'ಬಾರ್ ಅಂಡ್ ಬೆಂಚ್' ವರದಿಯ ಪ್ರಕಾರ, ಧುರಂಧರ್ 2 ಚಿತ್ರತಂಡ ಅಗತ್ಯ ಪರವಾನಗಿ ಅಥವಾ ಅನುಮತಿ ಪಡೆಯದೆ ಈ ಹಾಡನ್ನು ಅಥವಾ ಅದರಂತೆಯೇ ಇರುವ ಆವೃತ್ತಿಯನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ತ್ರಿಮೂರ್ತಿ ಫಿಲ್ಮ್ಸ್ ನ್ಯಾಯಾಲಯಕ್ಕೆ ಹೇಳಿದೆ. ಹಾಡಿನ ಸಂಗೀತ ಮತ್ತು ಧ್ವನಿಮುದ್ರಣದ ಸಂಪೂರ್ಣ ಹಕ್ಕುಗಳು ತಮ್ಮ ಬಳಿಯೇ ಇವೆ ಎಂದು ಹೇಳಿರುವ ತ್ರಿಮೂರ್ತಿ ಫಿಲ್ಮ್ಸ್, ಇದು ಕಾಪಿರೈಟ್ (ಹಕ್ಕುಸ್ವಾಮ್ಯ) ಉಲ್ಲಂಘನೆ ಎಂದು ಆರೋಪಿಸಿದೆ. ಚಿತ್ರಮಂದಿರ, ಒಟಿಟಿ ಪ್ಲಾಟ್‌ಫಾರ್ಮ್ ಮತ್ತು ಪ್ರಚಾರದ ಸಂದರ್ಭದಲ್ಲಿ ಈ ಹಾಡನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಓಯೆ ಓಯೆ ಹಾಡನ್ನು ಮುಂದಿನ ದಿನಗಳಲ್ಲಿ ಬಳಸದಂತೆ ತಡೆಯಾಜ್ಞೆ ನೀಡಬೇಕು ಮತ್ತು ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ತ್ರಿಮೂರ್ತಿ ಫಿಲ್ಮ್ಸ್ ಮೊಕದ್ದಮೆಯಲ್ಲಿ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ ಈ ಅರ್ಜಿಯನ್ನ ವಿಚಾರಣೆ ಮಾಡಲಿದ್ದು, ಧುರಂಧರ್ 2 ಸಿನಿಮಾ ತಂಡ ಏನು ಹೇಳಲಿದೆ ಎಂಬುದನ್ನು ಕಾದುನೋಡಬೇಕು.
ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ
ಇನ್ನು, ಮಾರ್ಚ್ 19ರಂದು ತೆರೆಕಂಡಿದ್ದ ಆದಿತ್ಯ ಧರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಧುರಂಧರ್ 2 ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ. ಈವರೆಗೂ ಈ ಚಿತ್ರವು ವಿಶ್ವಾದ್ಯಂತ 1650+ ಕೋಟಿ ರೂ. ಕಮಾಯಿ ಮಾಡಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್ ಜೊತೆಗೆ ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.