ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷ ಪೂರೈಸಿದ ನಟ ಗಣೇಶ್; ʻಇದು ಕೇವಲ ಆರಂಭವಷ್ಟೇ..ʼ ಎಂದು ʻಗೋಲ್ಡನ್ ಸ್ಟಾರ್ʼ ಹೇಳಿದ್ಯಾಕೆ?
ʻಗೋಲ್ಡನ್ ಸ್ಟಾರ್ʼ ಗಣೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ 20 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. 2006ರ ಏಪ್ರಿಲ್ 21ರಂದು 'ಚೆಲ್ಲಾಟ' ಚಿತ್ರದ ಮೂಲಕ ಹೀರೋ ಆಗಿ ಪದಾರ್ಪಣೆ ಮಾಡಿದ್ದ ಗಣೇಶ್, ನಂತರ 'ಮುಂಗಾರು ಮಳೆ'ಯಂತಹ ಐತಿಹಾಸಿಕ ಹಿಟ್ ನೀಡಿ ಮನೆಮಾತಾಗಿದ್ದರು.
-
ಕನ್ನಡ ಚಿತ್ರರಂಗದಲ್ಲಿ ʻಗೋಲ್ಡನ್ ಸ್ಟಾರ್ʼ ಎಂದೇ ಕರೆಸಿಕೊಳ್ಳುವ ನಟ ಗಣೇಶ್ ಅವರು ಬೆಳ್ಳಿತೆರೆಯ ಮೇಲೆ ನಾಯಕ ನಟನಾಗಿ ಮಿಂಚಲು ಆರಂಭಿಸಿ ಇಂದಿಗೆ (ಏಪ್ರಿಲ್ 21, 2026) ಸರಿಯಾಗಿ 20 ವರ್ಷಗಳು ಸಂದಿವೆ. ಹೌದು, 2006ರಲ್ಲಿ ಎಂ. ಡಿ. ಶ್ರೀಧರ್ ನಿರ್ದೇಶನದ 'ಚೆಲ್ಲಾಟ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪದಾರ್ಪಣೆ ಮಾಡಿದ ನಟ ಗಣೇಶ್, ಅಂದಿನಿಂದ ಇಂದಿನವರೆಗೂ ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಅಭಿನಯದ ಮೂಲಕ ಕೋಟ್ಯಂತರ ಕನ್ನಡಿಗರ ಮನಗೆದ್ದಿದ್ದಾರೆ.
ಎರಡನೇ ಚಿತ್ರವೇ ಬ್ಲಾಕ್ ಬಸ್ಟರ್
2006ರಲ್ಲಿ ಹೀರೋ ಆಗಿ ಚೆಲ್ಲಾಟ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಗಣೇಶ್, ಅದೇ ವರ್ಷದ ಡಿಸೆಂಬರ್‌ನಲ್ಲಿ ನಟಿಸಿದ 'ಮುಂಗಾರು ಮಳೆ' ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು. ಈ ಚಿತ್ರ ಗಣೇಶ್ ಅವರಿಗೆ 'ಗೋಲ್ಡನ್ ಸ್ಟಾರ್' ಎಂಬ ಪಟ್ಟ ತಂದುಕೊಟ್ಟಿತು. ನಂತರದ ದಿನಗಳಲ್ಲಿ 'ಚೆಲುವಿನ ಚಿತ್ತಾರ', 'ಗಾಳಿಪಟ', 'ಕೃಷ್ಣ', 'ರೋಮಿಯೋ', ʻಚಮಕ್ʼನಿಂದ ಹಿಡಿದು ಇತ್ತೀಚಿನ ಬ್ಲಾಕ್‌ಬಸ್ಟರ್ ಹಿಟ್ 'ಕೃಷ್ಣಂ ಪ್ರಣಯ ಸಖಿ' ವರೆಗೂ ಅವರು ಸಾಲು ಸಾಲು ಯಶಸ್ವಿ ಚಿತ್ರಗಳನ್ನು ನಟಿಸಿದ್ದಾರೆ.
ಕಿರುತೆರೆಯ 'ಕಾಮಿಡಿ ಟೈಮ್' ಮೂಲಕ ಮನೆಮಾತಾಗಿದ್ದ ಗಣೇಶ್, ಇಂದು ಸ್ಯಾಂಡಲ್‌ವುಡ್‌ನ ಪ್ರಮುಖ ನಟರಾಗಿ 20 ವರ್ಷಗಳ ಈ ಮೈಲಿಗಲ್ಲನ್ನು ಸಂಭ್ರಮದಿಂದ ಪೂರೈಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗಣೇಶ್‌ಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಧನ್ಯವಾದ ಹೇಳಿದ ನಟ ಗಣೇಶ್
"ಇಂದು ನನ್ನ ಜೀವನದ ಅತ್ಯಂತ ವಿಶೇಷವಾದ ಮೈಲಿಗಲ್ಲು. ಚಿತ್ರರಂಗದಲ್ಲಿ 20 ಸುಂದರ ವರ್ಷಗಳು.. ಏಪ್ರಿಲ್ 21... 'ಚೆಲ್ಲಾಟ' ಬಿಡುಗಡೆಯಾದ ದಿನ.. ನನ್ನ ಕನಸುಗಳಿಗೆ ರೆಕ್ಕೆ ಸಿಕ್ಕ ದಿನ.. ಒಂದು ಸಾಧಾರಣ ಆರಂಭದಿಂದ ಇಂದು ನಿಮ್ಮ ಪ್ರೀತಿಯ "ಗೋಲ್ಡನ್ ಸ್ಟಾರ್" ಆಗುವವರೆಗೆ... ಈ ಪಯಣ ನಿಮ್ಮಿಂದಾದ ಒಂದು ಅದ್ಭುತ" ಎಂದು ಗಣೇಶ್ ಹೇಳಿದ್ದಾರೆ.
"ನನ್ನ ಅಭಿಮಾನಿ ದೇವದೂತರಿಗೆ.. ನನ್ನ ಶಕ್ತಿ, ನನ್ನ ಎದೆಬಡಿತ ನೀವು... ನನ್ನ ಪ್ರೀತಿಯ ವೀಕ್ಷಕರಿಗೆ... ಪ್ರತಿ ಫ್ರೇಮ್ ಅನ್ನು ಸಂಭ್ರಮವಾಗಿಸಿದವರು ನೀವು... ಚಿತ್ರರಂಗಕ್ಕೆ, ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ರೂಪಿಸಿದ್ದಕ್ಕಾಗಿ... ಮಾಧ್ಯಮ ಮಿತ್ರರಿಗೆ ಸದಾ ನನ್ನ ಪರವಾಗಿ ನಿಂತು ನನ್ನ ಧ್ವನಿಯನ್ನು ಜನರಿಗೆ ತಲುಪಿಸಿದ್ದಕ್ಕಾಗಿ... ನನ್ನ ಹೃದಯಾಂತರಾಳದಿಂದ ನಿಮಗೆ ಧನ್ಯವಾದಗಳು" ಎಂದು ಗಣೇಶ್ ಹೇಳಿದ್ದಾರೆ.
ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ನಟ ಗಣೇಶ್
Today marks a very special milestone in my life — 20 beautiful years in cinema ❤️
— Ganesh (@Official_Ganesh) April 21, 2026
April 21… the day Chellata released — the day my dream found its wings ❤️
From a humble beginning to being called your “Golden Star”… this journey is nothing short of a miracle powered by YOU!… pic.twitter.com/KzltKGUFRd
"ನೀವು ಹಾಕಿದ ಪ್ರತಿ ಶಿಳ್ಳೆ, ಪ್ರತಿ ಚಪ್ಪಾಳೆ, ಹರಿಸಿದ ಪ್ರತಿ ಹನಿ ಕಣ್ಣೀರು... ಅದನ್ನು ನಾನು ಅನುಭವಿಸಿದ್ದೇನೆ, ಬದುಕಿದ್ದೇನೆ ಮತ್ತು ಹೆಮ್ಮೆಯಿಂದ ಹೊತ್ತು ಸಾಗುತ್ತಿದ್ದೇನೆ. ಮತ್ತೊಂದು ಮಾತು ನೆನಪಿರಲಿ... ಇದು ಕೇವಲ ಆರಂಭವಷ್ಟೇ.. ನಾನು ನಿಮಗೆ ಮಾತು ಕೊಡುತ್ತೇನೆ. ಇನ್ನು ಹೆಚ್ಚಿನ ಉತ್ಸಾಹ, ಹೆಚ್ಚಿನ ಶ್ರದ್ಧೆ ಮತ್ತು ನೇರವಾಗಿ ಹೃದಯಕ್ಕೆ ಮುಟ್ಟುವ ಎಮೋಷನ್ಸ್ ಮೂಲಕ ನಿಮ್ಮನ್ನು ರಂಜಿಸುತ್ತಲೇ ಇರುತ್ತೇನೆ! ಈ ಪಯಣ ಕೇವಲ ನನ್ನೊಬ್ಬನದಲ್ಲ, ಇದು ನಿಮ್ಮೆಲ್ಲರದು" ಎಂದು ನಟ ಗಣೇಶ್ ಅವರು ಬರೆದುಕೊಂಡಿದ್ದಾರೆ.