ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಯ್ಯಯ್ಯೋ, ತೆಲುಗು ಹೀರೋಗಳ ಮೇಲೆ ಯಾರ ಕಣ್ಣು ಬಿತ್ತೋ? ಒಬ್ಬರಾದ ಮೇಲೊಬ್ಬರಿಗೆ ಶಸ್ತ್ರಚಿಕಿತ್ಸೆ, ಟಾಲಿವುಡ್ ನಟರ ಅಭಿಮಾನಿಗಳಲ್ಲಿ ಆತಂಕ!

ತೆಲುಗು ಚಿತ್ರರಂಗದ ಪ್ರಮುಖ ನಟರು ಸಾಲಾಗಿ ಗಾಯಗೊಳ್ಳುತ್ತಿರುವುದು ಅಭಿಮಾನಿಗಳನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಇತ್ತೀಚೆಗೆ ನಂದಮೂರಿ ಬಾಲಕೃಷ್ಣ, ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಸೇರಿದಂತೆ ಮುಂತಾದವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಇಲ್ಲಿದೆ ಒಂದು ಸ್ಪೆಷಲ್‌ ಸ್ಟೋರಿ.

ಟಾಲಿವುಡ್ ನಟರ ಮೇಲೆ ಯಾರ ಕಣ್ಣು ಬಿತ್ತೋ?  ಒಬ್ಬರಾದ ಮೇಲೊಬ್ಬರಿಗೆ ಸರ್ಜರಿ!

-

Avinash GR
Avinash GR Jul 28, 2026 12:49 PM

ಸಿನಿಮಾ ಸ್ಟಾರ್‌ಗಳು ಎಂದಕೂಡಲೇ ಬಹುತೇಕರಿಗೆ ನೆನಪಾಗುವುದು ಅವರ ಐಷಾರಾಮಿ ಲೈಫ್‌ಸ್ಟೈಲ್‌ ಹಾಗೂ ಅವರ ಬಣ್ಣದ ಪ್ರಪಂಚ ಮಾತ್ರ. ಇಡೀ ದಿನ ಎಸಿ ರೂಮ್‌ಗಳಲ್ಲಿ ವಾಸ ಮಾಡುತ್ತಾ, ದುಬಾರಿ ಕಾರುಗಳಲ್ಲಿ ಓಡಾಡುವ ಸೆಲೆಬ್ರಿಟಿಗಳಿಗೆ ಏನ್‌ ಮಹಾ ಕಷ್ಟ ಇರುತ್ತದೆ ಬಿಡಿ ಅಂತಲೇ ಬಹುತೇಕರು ಭಾವಿಸುತ್ತಾರೆ. ಆದರೆ, ಸಿನಿಮಾಗಳಲ್ಲಿ ಅಭಿಮಾನಿಗಳನ್ನು ರಂಜಿಸಲು ಸ್ಟಾರ್‌ಗಳು ಕೂಡ ಅಪಾರ ಶ್ರಮ ಹಾಕಬೇಕಾಗುತ್ತದೆ. ಎರಡುವರೆ ಗಂಟೆಯ ಸಿನಿಮಾದ ಹಿಂದೆ ಅವರ ಕಠಿಣ ಪರಿಶ್ರಮ ಅಡಗಿರುತ್ತದೆ.

ಅದರಲ್ಲೂ ಕೆಲ ಹೀರೋಗಳಂತೂ ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ತಮ್ಮ ಜೀವವನ್ನೇ ರಿಸ್ಕ್‌ನಲ್ಲಿಟ್ಟು ಭಾಗಿಯಾಗುತ್ತಾರೆ. ದೇಹಕ್ಕೆ ಏಟು ಮಾಡಿಕೊಳ್ಳುತ್ತಾರೆ, ಕೈ-ಕಾಲುಗಳನ್ನು ಮುರಿದುಕೊಳ್ಳುತ್ತಾರೆ! ಸದ್ಯ ಇಂತಹದ್ದೊಂದು ಸ್ಥಿತಿ ಟಾಲಿವುಡ್‌ನ ಹಲವು ಹೀರೋಗಳಿಗೆ ಏಕಕಾಲದಲ್ಲಿ ಬಂದೊದಗಿದೆ. ತೆಲುಗಿನ ಪ್ರಮುಖ ನಟರು ಶೂಟಿಂಗ್ ಅಪಘಾತಗಳಲ್ಲಿ ಗಾಯಗೊಂಡು, ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದು ಈಗ ಚಿತ್ರರಂಗವನ್ನು ಮತ್ತು ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ!

ಬಾಲಯ್ಯ ಕಾಲಿಗೆ ಏಟು

ಹಿರಿಯ ನಟ ನಂದಮೂರಿ ಬಾಲಕೃಷ್ಣ 'NBK 111' ಶೂಟಿಂಗ್ ಸಮಯದಲ್ಲಿ ಆಕಸ್ಮಿಕವಾಗಿ ಗಾಯಗೊಂಡಿದ್ದಾರೆ. ಕಾಕಿನಾಡ ಪೋರ್ಟ್‌ನಲ್ಲಿ ಮಂಚು ಮನೋಜ್ ಜೊತೆ ಬೃಹತ್ ಆಕ್ಷನ್ ಸೀಕ್ವೆನ್ಸ್ ಶೂಟ್ ಮಾಡುತ್ತಿದ್ದಾಗ ಬಾಲಯ್ಯ ಅವರ ಮಂಡಿಗೆ ಏಟಾಗಿದೆ. ಹೀಗಾಗಿ ಅವರ ಮಂಡಿಗೆ ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಸ್ತುತ ಬಾಲಯ್ಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪತ್ನಿಯ ಅಪೋಲೋ ಆಸ್ಪತ್ರೆ ಇದ್ದರೂ ಶಸ್ತ್ರ ಚಿಕಿತ್ಸೆಗಾಗಿ ನಟ ರಾಮ್‌ ಚರಣ್ ಕೊಯಮತ್ತೂರಿಗೆ ಹೋಗಿದ್ದೇಕೆ? ಚಿರು ಪುತ್ರನಿಗೆ ಏನು ಸಮಸ್ಯೆ?

ಪೆದ್ದಿ ಶೂಟಿಂಗ್‌ ವೇಳೆ ಗಾಯಗೊಂಡ ಚರಣ್

'ಪೆದ್ದಿ' ಸಿನಿಮಾ ಶೂಟಿಂಗ್ ವೇಳೆ ನಟ ರಾಮ್ ಚರಣ್ ಅವರಿಗೆ ಹಲವು ಬಾರಿ ಗಾಯಗಳಾಗಿದ್ದವು. ಅವರ ಕಣ್ಣಿಗೆ ಏಟಾದ್ದರಿಂದ ಹೊಲಿಗೆಗಳನ್ನು ಹಾಕಲಾಗಿತ್ತು. ಹಾಗೆಯೇ ಕುಸ್ತಿ ದೃಶ್ಯಗಳನ್ನು ಚಿತ್ರೀಕರಿಸುವಾಗ ಚರಣ್ ಅವರ ಮಣಿಕಟ್ಟಿಗೂ ಗಾಯವಾಗಿತ್ತು. ಸಿನಿಮಾಗೆ ತೊಂದರೆಯಾಗಬಾರದೆಂದು ಹಾಗೆಯೇ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಚರಣ್, ಸೋಮವಾರ (ಜುಲೈ 27) ಕೊಯಮತ್ತೂರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಇದೀಗ ತಾರಕ್‌ಗೂ ಏಟು

ಈ ಮಧ್ಯೆ ನಟ ಜೂನಿಯರ್ ಎನ್‌ಟಿಆರ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ತಾರಕ್ ಅವರ ಭುಜಕ್ಕೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಕಡೆಯಿಂದ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. 6 ರಿಂದ 8 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿಸಲಾಗಿದೆ.

ತೆಲುಗು ಹೀರೋಗಳಿಗೆ ಕಂಟಕ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರ ಬಲಗೈ ಭುಜಕ್ಕೆ ಮುಂಬೈನಲ್ಲಿ ಸರ್ಜರಿ ನಡೆದಿದೆ. ಅದಕ್ಕೂ ಮುನ್ನ ಹೈದರಾಬಾದ್‌ನಲ್ಲೂ ಶಸ್ತ್ರಚಿಕಿತ್ಸೆಯಾಗಿತ್ತು. ಇತ್ತೀಚೆಗೆ ಚಿರಂಜೀವಿ ಅವರ ಭುಜಕ್ಕೂ ಶಸ್ತ್ರಚಿಕಿತ್ಸೆಯಾಗಿತ್ತು. ಶೂಟಿಂಗ್‌ನಲ್ಲಿ ವರುಣ್ ತೇಜ್ ಅವರ ಕಾಲಿಗೆ ಗಾಯವಾಗಿತ್ತು. ಪ್ರಭಾಸ್ ಬಹುಕಾಲದಿಂದ ಮಂಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ; ಶೂಟಿಂಗ್‌ನಲ್ಲಿ ಆದ ಗಾಯಗಳಿಗೆ ಈಗಾಗಲೇ ಹಲವು ಬಾರಿ ಸರ್ಜರಿ ಮಾಡಿಸಿಕೊಂಡಿದ್ದಾರೆ.‌

ರಾಮ್‌ ಚರಣ್‌ ಹೊಸ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ? ಮದುವೆ ಬಳಿಕ ಹೆಚ್ಚಾಯ್ತು ʻನ್ಯಾಶನಲ್‌ ಕ್ರಶ್‌ʼ ಬೇಡಿಕೆ

'ಏಜೆಂಟ್' ಸಿನಿಮಾದ ಶೂಟಿಂಗ್‌ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದ ಅಖಿಲ್ ಅಕ್ಕಿನೇನಿ ಅವರ ಕೈಗೆ ಬರೋಬ್ಬರಿ 44 ಹೊಲಿಗೆಗಳು ಬಿದ್ದಿದ್ದವು. ಅವರ ಕೈ ಬೆರಳುಗಳಿಗೆ ಸರ್ಜರಿ ಮಾಡಿದ್ದರಿಂದ, ಪೂರ್ತಿಯಾಗಿ ಚೇತರಿಸಿಕೊಳ್ಳಲು ಸುಮಾರು 16 ತಿಂಗಳ ಸಮಯ ಹಿಡಿಯಿತು.

ಹೀಗೆ ಟಾಲಿವುಡ್ ಹೀರೊಗಳೆಲ್ಲರೂ ಸಾಲಾಗಿ ಗಾಯಗೊಳ್ಳುತ್ತಿದ್ದಾರೆ, ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇವೆಲ್ಲವೂ ಬಹುತೇಕ ಶೂಟಿಂಗ್‌ ವೇಳೆ ನಡೆದ ಅಪಘಾತಗಳಾಗಿವೆ. ನೆಚ್ಚಿನ ಹೀರೊಗಳು ಗಾಯಗೊಳ್ಳುವುದು, ಸರ್ಜರಿ ಮಾಡಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅಭಿಮಾನಿಗಳನ್ನು ಕಳವಳಕ್ಕೀಡು ಮಾಡಿದೆ. ಅವರ ಆರೋಗ್ಯದ ಬಗ್ಗೆ ಫ್ಯಾನ್ಸ್ ಆತಂಕ ವ್ಯಕ್ತಪಡಿಸುತ್ತಿದ್ದು, ಶೂಟಿಂಗ್ ಮಾಡುವಾಗ ಜಾಗರೂಕರಾಗಿರಿ ಎಂದು ಮನವಿ ಮಾಡುತ್ತಿದ್ದಾರೆ.