ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಮಗನಿಗೆ ನನ್ನ ಸಿನಿಮಾಗಳಿಂದ ಮುಜುಗರ ಆಗಬಾರದುʼ; ಬೋಲ್ಡ್‌ ಇಂಟಿಮೇಟ್ ದೃಶ್ಯಗಳಿಗೆ 'ನೋ' ಎಂದ ಕಾಜಲ್ ಅಗರ್ವಾಲ್

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಅವಕಾಶ ಬಂದರೂ ಪರದೆಯ ಮೇಲೆ ಬೋಲ್ಡ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ನಾಲ್ಕು ವರ್ಷದ ಮಗ ನೀಲ್ ಬೆಳೆದು ದೊಡ್ಡವನಾದ ಮೇಲೆ ತಮ್ಮ ಸಿನಿಮಾಗಳನ್ನು ನೋಡಿ ಮುಜುಗರ ಪಟ್ಟುಕೊಳ್ಳಬಾರದು ಎಂಬ ಕಾರಣಕ್ಕೆ ಈ ವೈಯಕ್ತಿಕ ಗಡಿಗಳನ್ನು ವಿಧಿಸಿಕೊಂಡಿರುವುದಾಗಿ ತಿಳಿಸಿದ್ಧಾರೆ.

ʻಮಗನಿಗೆ ನನ್ನ ಸಿನಿಮಾ ನೋಡಿ ಮುಜುಗರ ಆಗಬಾರದುʼ ಎಂದ ನಟಿ ಕಾಜಲ್ ಅಗರ್ವಾಲ್

-

Avinash GR
Avinash GR Jul 20, 2026 8:19 PM

ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪಯಣ ಹಾಗೂ ವೈಯಕ್ತಿಕ ಗಡಿಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಅವಕಾಶ ಬಂದರೂ ಪರದೆಯ ಮೇಲೆ ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯಿಸಲು ಅಥವಾ ಮುಜುಗರ ತರುವಂತಹ ಉಡುಪುಗಳನ್ನು ಧರಿಸಲು ತಾವು ಎಂದಿಗೂ ಸಿದ್ಧರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ಈ ನಿರ್ಧಾರದಿಂದಾಗಿ ಅನೇಕ ಪ್ರಮುಖ ಹಾಗೂ ದೊಡ್ಡ ಬಜೆಟ್ ಸಿನಿಮಾಗಳನ್ನು ತಿರಸ್ಕರಿಸಿರುವುದಾಗಿ ಕಾಜಲ್ ಬಹಿರಂಗಪಡಿಸಿದ್ದಾರೆ. ಪತ್ರಕರ್ತ ಶುಭಂಕರ್ ಮಿಶ್ರಾ ಅವರ ಪಾಡ್​​ಕಾಸ್ಟ್​ನಲ್ಲಿ ಇಂಟಿಮೇಟ್ ದೃಶ್ಯಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಕಾಜಲ್, "ನನ್ನ ವೈಯಕ್ತಿಕ ಗಡಿಯನ್ನು ದಾಟಲು ನಾನು ಎಂದಿಗೂ ಬಯಸುವುದಿಲ್ಲ. ಅಂತಹ ದೃಶ್ಯಗಳು ತೀರಾ ವೈಯಕ್ತಿಕವಾದವು. ನನಗೆ ಕಂಫರ್ಟಬಲ್ ಎನಿಸದ ಪಾತ್ರಗಳನ್ನು ನೇರವಾಗಿ ಬೇಡ ಎನ್ನುತ್ತೇನೆ. ದೊಡ್ಡ ಸಿನಿಮಾಗಳ ಅವಕಾಶ ಕೈತಪ್ಪಿದರೂ ನನಗೆ ಬೇಸರವಿಲ್ಲ, ಅದಕ್ಕಿಂತ ನನ್ನ ಆಂತರಿಕ ಕಂಫರ್ಟ್ ಮುಖ್ಯ" ಎಂದು ಹೇಳಿದ್ದಾರೆ.

ಪುರುಷ ಮತ್ತು ಮಹಿಳಾ ಕಲಾವಿದರ ಮೇಲಿನ ವೀಕ್ಷಕರ ದೃಷ್ಟಿಕೋನದ ಬಗ್ಗೆ ಕೇಳಿದಾಗ, "ಅದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ. ಆದರೆ ಇಂತಹ ದೃಶ್ಯಗಳನ್ನು ಮಾಡಬಾರದು ಎಂಬ ಎಚ್ಚರಿಕೆ ಪ್ರತಿಯೊಬ್ಬರ ಒಳಗಿನಿಂದಲೇ ಬರಬೇಕು" ಎಂದಿದ್ದಾರೆ ಕಾಜಲ್.

ಮಗನಿಗೆ ಮುಜುಗರವಾಗಬಾರದು

ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿರುವ ಕಾಜಲ್ ಅವರಿಗೆ ನಾಲ್ಕು ವರ್ಷದ ಮಗ (ನೀಲ್ ಕಿಚ್ಲು) ಇದ್ದಾನೆ. ತಾಯಿಯಾದ ನಂತರ ಪಾತ್ರಗಳ ಆಯ್ಕೆಯಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸುತ್ತಿರುವುದಾಗಿ ತಿಳಿಸಿದ ಅವರು, "ನನ್ನ ಮಗ ಬೆಳೆದು ದೊಡ್ಡವನಾದ ಮೇಲೆ ನನ್ನ ಸಿನಿಮಾಗಳನ್ನು ನೋಡಿ ಮುಜುಗರಪಟ್ಟುಕೊಳ್ಳಬಾರದು. 'ಅಮ್ಮ ಇದನ್ನು ಏಕೆ ಮಾಡಿದರು?' ಎಂದು ಆತ ಕೇಳುವ ಪರಿಸ್ಥಿತಿ ಬರಬಾರದು. ಆತ ನನ್ನ ಸಿನಿಮಾಗಳನ್ನು ಹೆಮ್ಮೆಯಿಂದ ನೋಡುವಂತಿರಬೇಕು. ಅದಕ್ಕಾಗಿಯೇ ನಾನು ಪಾತ್ರಗಳನ್ನು ಜಾಗರೂಕತೆಯಿಂದ ಆಯ್ಕೆ ಮಾಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

Tabaahi Song: ʻಟಾಕ್ಸಿಕ್‌ʼ ಸಿನಿಮಾದ ಮೊದಲ ಸಾಂಗ್‌ ರಿಲೀಸ್‌; ʻತಬಾಹಿʼ ಹಾಡಿನಲ್ಲಿ ಬಯಲಾಯ್ತು ನಟ ಯಶ್ ಚಾಣಕ್ಷತನ!

'ಟಾಕ್ಸಿಕ್' ಹಾಡಿನ ಚರ್ಚೆಯ ನಡುವೆ ಕಾಜಲ್ ಹೇಳಿಕೆ ವೈರಲ್

ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ 'ತಬಾಹಿ' ರೊಮ್ಯಾಂಟಿಕ್ ಹಾಡು ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿತ್ತು. ಈ ಚರ್ಚೆಯ ಬೆನ್ನಲ್ಲೇ ಕಾಜಲ್ ಅವರ ಈ ಹೇಳಿಕೆಗಳು ಎಲ್ಲರ ಗಮನ ಸೆಳೆದಿವೆ. ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ 'ಟಾಕ್ಸಿಕ್' ಚಿತ್ರದ ಟ್ರೇಲರ್‌ ಆಗಸ್ಟ್ 8 ರಂದು ಬೆಂಗಳೂರಿನಲ್ಲಿ ಲಾಂಚ್ ಆಗಲಿದೆ.