ಸಂಸದೆಯಾದ ಮೇಲೂ ಚಿತ್ರರಂಗದಲ್ಲಿ ಕಂಗನಾ ರಣಾವತ್ ಸಕ್ರಿಯ; 'ಭಾರತ್ ಭಾಗ್ಯ ವಿಧಾತಾ' ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್
ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅಭಿನಯದ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಮೋಷನ್ ಪೋಸ್ಟರ್ ಮೇ 28 ರಂದು ಬಿಡುಗಡೆಯಾಗಿದೆ. 26/11 ರ ಮುಂಬೈ ಉಗ್ರರ ದಾಳಿಯ ವೇಳೆ ಕಾಮಾ ಆಸ್ಪತ್ರೆಯಲ್ಲಿ 400 ಕ್ಕೂ ಹೆಚ್ಚು ಜೀವಗಳನ್ನು ರಕ್ಷಿಸಿದ ನರ್ಸ್‌ಗಳು ಹಾಗೂ ಭದ್ರತಾ ಸಿಬ್ಬಂದಿಯ ನೈಜ ಶೌರ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.
-
ನಟಿ ಕಂಗನಾ ರಣಾವತ್ ಈಗ ಬಿಜೆಪಿಯ ಸಂಸದೆಯಾಗಿದ್ದಾರೆ. ಇನ್ನೇನು ಅವರು ಸಿನಿಮಾರಂಗದಿಂದ ದೂರ ಉಳಿಯಲಿದ್ದಾರೆ ಎಂಬ ಮಾತು ಕೇಳಿಬಂದ ಹೊತ್ತಿನಲ್ಲಿಯೇ, ಸದ್ದಿಲ್ಲದೇ ಒಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಕಂಗನಾ ಅವರು ಹೊಸದೊಂದು ಸಿನಿಮಾದಲ್ಲಿ ನಾಯಕಿಯಾಗಿದ್ದು, ಅದರ ಮೋಷನ್ ಪೋಸ್ಟರ್ ಇಂದು (ಮೇ 28) ರಿಲೀಸ್ ಆಗಿದೆ. ಈ ಸಿನಿಮಾಕ್ಕೆ 'ಭಾರತ್ ಭಾಗ್ಯ ವಿಧಾತಾ' ಎಂದು ಟೈಟಲ್ ಇಡಲಾಗಿದೆ.
ಮುಂಬೈ ಮೇಲೆ ಉಗ್ರರು ಮಾಡಿದ ಕಥೆ
26/11 ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ ಆಸ್ಪತ್ರೆಯ ಸಿಬ್ಬಂದಿಗೆ ಈ ಮೂಲಕ ಗೌರವ ಸಲ್ಲಿಸುವುದು ಈ ಸಿನಿಮಾದ ಉದ್ದೇಶವಾಗಿದೆ. ಮನೋಜ್ ತಪಾಡಿಯಾ ಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾವು 2008 ರ ಮುಂಬೈ ಉಗ್ರರ ದಾಳಿಯ ರಾತ್ರಿ ಕಾಮಾ ಆಸ್ಪತ್ರೆಯ (Cama Hospital) ಒಳಗೆ ನಡೆದ ನೈಜ ಘಟನೆಗಳನ್ನು ಆಧರಿಸಿದೆಯಂತೆ!
ಹೊರಗೆ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾಗ ಆಸ್ಪತ್ರೆಯ ನರ್ಸ್‌ಗಳು, ವಾರ್ಡ್ ಬಾಯ್‌ಗಳು, ಕ್ಲೀನರ್‌ಗಳು, ಲಿಫ್ಟ್ ಆಪರೇಟರ್‌ಗಳು, ಭದ್ರತಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ನೌಕರರು ಹೇಗೆ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ, ಬರೋಬ್ಬರಿ 400 ಜನರ ಜೀವವನ್ನು ಉಳಿಸಿದರು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
Deepika Padukone: 8 ಗಂಟೆ ಕೆಲಸದ ಶಿಫ್ಟ್ ವಿಚಾರ; ದೀಪಿಕಾಗೆ ಸಾಥ್ ಕೊಟ್ಟ ಕಂಗನಾ ರಣಾವತ್
"ದ ಅನ್‌ಸೀನ್ ಹೀರೋಸ್" ಎಂದು ಹೆಸರಿಸಲಾದ ಈ ಮೋಷನ್ ಪೋಸ್ಟರ್‌ನಲ್ಲಿ ಕಂಗನಾ ಮತ್ತು ಮತ್ತೊಬ್ಬ ಮಹಿಳೆ ಆಸ್ಪತ್ರೆಯ ಯೂನಿಫಾರ್ಮ್ ಧರಿಸಿದ್ದಾರೆ. ಬೆಂಕಿ ಮತ್ತು ಹೊಗೆಯ ಹಿನ್ನೆಲೆಯಲ್ಲಿ ಅವರ ಮುಖ ಹಾಗೂ ಬಟ್ಟೆಗಳ ಮೇಲೆ ಗಾಯದ ಮತ್ತು ಬೂದಿಯ ಗುರುತುಗಳಿರುವುದು ಎದ್ದುಕಾಣುತ್ತಿದೆ.
ಜೂನ್ 12ರಂದು ಈ ಸಿನಿಮಾ ರಿಲೀಸ್
'ಭಾರತ್ ಭಾಗ್ಯ ವಿಧಾತಾ' ಸಿನಿಮಾವು ಜೂನ್ 12 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಪೆನ್ ಸ್ಟುಡಿಯೋಸ್‌ನ ಡಾ. ಜಯಂತಿಲಾಲ್ ಗಡ ಪ್ರೆಸೆಂಟ್ ಮಾಡುತ್ತಿದ್ದಾರೆ. ಪೆನ್ ಸ್ಟುಡಿಯೋಸ್, ಕಂಗನಾ ಅವರ ಮಣಿಕರ್ಣಿಕಾ ಫಿಲ್ಮ್ಸ್ ಮತ್ತು ಪರಮಹಂಸ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಯುನೋಯಾ ಫಿಲ್ಮ್ಸ್ ಹಾಗೂ ಫ್ಲೋಟಿಂಗ್ ರಾಕ್ಸ್ ಎಂಟರ್‌ಟೈನ್‌ಮೆಂಟ್ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಿವೆ. ಪೆನ್ ಮರುಧರ್ ಚಿತ್ರವನ್ನು ವಿತರಣೆ ಮಾಡಲಿದೆ.
ನಟಿ, ಸಂಸದೆ ಕಂಗನಾ ರಣಾವತ್ ಏನಂದ್ರು?
"ಯಾವುದೇ ಪ್ರಚಾರ ಅಥವಾ ಪ್ರಶಂಸೆಯ ನಿರೀಕ್ಷೆಯಿಲ್ಲದೆ ದೇಶಕ್ಕಾಗಿ ಶ್ರಮಿಸಿದ ಜನರಿಗೆ ಈ ಸಿನಿಮಾ ಒಂದು ಗೌರವ ಸಮರ್ಪಣೆ. ಆಪತ್ತು ಎದುರಾದಾಗ ನಮ್ಮ ಗಮನ ಸಾಮಾನ್ಯವಾಗಿ ಸಶಸ್ತ್ರ ಪಡೆಗಳು ಅಥವಾ ಸರ್ಕಾರಿ ಅಧಿಕಾರಿಗಳ ಕಡೆಗೆ ಹೋಗುತ್ತದೆ. ಆದರೆ ಜಗತ್ತೇ ಹೊತ್ತಿ ಉರಿಯುವಾಗ ಯಾರ ಕಣ್ಣಿಗೂ ಬೀಳದ ರಕ್ತಸಿಕ್ತ ಏಪ್ರನ್ ಮತ್ತು ಆಸ್ಪತ್ರೆಯ ಬಟ್ಟೆಗಳನ್ನು ಧರಿಸಿದ ಸಾಮಾನ್ಯ ನಾಗರಿಕರ ಶೌರ್ಯವನ್ನು ಈ ಸಿನಿಮಾ ಕೊಂಡಾಡುತ್ತದೆ. ನಿಜವಾದ ಧೈರ್ಯಕ್ಕೆ ಯಾವುದೇ ಬ್ಯಾಡ್ಜ್ ಅಥವಾ ಪದಕದ ಭರವಸೆ ಬೇಕಾಗಿಲ್ಲ. ಈ ಚಿತ್ರದ ಭಾಗವಾಗಿರುವುದು ನನಗೆ ಹೆಮ್ಮೆಯ ವಿಷಯ" ಎಂದು ನಟಿ, ಸಂಸದೆ ಕಂಗನಾ ರಣಾವತ್ ತಿಳಿಸಿದ್ದಾರೆ.
ರಾಹುಲ್ ಗಾಂಧಿಯನ್ನು ಟಪೋರಿ ಎಂದು ಕರೆದ ಬಿಜೆಪಿ ಸಂಸದೆ ಕಂಗನಾ ರಣಾವತ್
"ಪೆನ್ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಾಣ ಮಾಡಿರುವುದು ಕೇವಲ ವಾಣಿಜ್ಯ ಉದ್ದೇಶದಿಂದ ಅಲ್ಲ. ಇದು ನಾವು ಎಂದಿಗೂ ಮರೆಯಬಾರದ ಸತ್ಯವನ್ನು ಉಳಿಸುವ ಪ್ರಯತ್ನವಾಗಿದೆ" ಎಂದು ನಿರ್ಮಾಪಕ ಜಯಂತಿಲಾಲ್ ಗಡ ಹೇಳಿದ್ದಾರೆ.
ನಟಿ ಕಂಗನಾ ರಣಾವತ್ ಅವರ ಹೊಸ ಸಿನಿಮಾ
KANGANA RANAUT'S NEXT FILM IS 'BHARAT BHHAGYA VIDDHAATA': MOTION POSTER UNVEILED – 12 JUNE 2026 RELEASE... A story of courage, humanity, sacrifice, and unity, where the common man stood between life and death.
— taran adarsh (@taran_adarsh) May 28, 2026
The motion poster of #BharatBhhagyaViddhaata is out now... The film… pic.twitter.com/XDriixfJ3k
ಚಿತ್ರದಲ್ಲಿ ಕಂಗನಾ ರಣಾವತ್ ಜೊತೆಗೆ ಗಿರಿಜಾ ಓಕ್, ಸ್ಮಿತಾ ತಾಂಬೆ, ಅಮೃತಾ ನಾಮದೇವ್, ಈಶಾ ಡೇ, ಪ್ರಿಯಾ ಬೆರ್ಡೆ, ಆಶಾ ಶೆಲಾರ್, ಸುಹಿತಾ ಥಟ್ಟೆ, ರಸಿಕಾ ಅಘಾಸೆ, ಆದಿತ್ಯ ಮಿಶ್ರಾ ಮತ್ತು ಜಾಹಿದ್ ಖಾನ್ ಸೇರಿದಂತೆ ದೊಡ್ಡ ತಾರಾಗಣವಿದೆ.