'ನಾನು ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದೇನೆ': ಚಿತ್ರರಂಗದ ಆರಂಭದ ದಿನಗಳನ್ನು ನೆನೆದ ನಟಿ ಜ್ಯೋತಿಕಾ!
ದಕ್ಷಿಣ ಭಾರತದ ಖ್ಯಾತ ನಟಿ ಜ್ಯೋತಿಕಾ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪತಿ ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾಗಿ ಬಹಿರಂಗಪಡಿಸಿದ್ದಾರೆ. 'ಕಾಖ ಕಾಖ' ಚಿತ್ರಕ್ಕೆ ಸೂರ್ಯ ಅವರನ್ನು ಶಿಫಾರಸು ಮಾಡಿದ್ದನ್ನು ನೆನೆದ ಅವರು, ಪತಿಯನ್ನು ನಿಜವಾದ 'ಗ್ರೀನ್ ಫ್ಲ್ಯಾಗ್' ಎಂದು ಬಣ್ಣಿಸಿದ್ದಾರೆ.
-
ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಆದರ್ಶ ಹಾಗೂ ಮಾದರಿ ದಂಪತಿಗಳಾದ ನಟ ಸೂರ್ಯ ಮತ್ತು ನಟಿ ಜ್ಯೋತಿಕಾ, ಮದುವೆಯಾಗಿ ಎರಡು ದಶಕಗಳು ಕಳೆದರೂ ಪರಸ್ಪರ ಗೌರವ ಹಾಗೂ ಬೆಂಬಲದೊಂದಿಗೆ ಸಾಗುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳು ಹಾಗೂ ದಾಂಪತ್ಯ ಜೀವನದ ಸಮಾನತೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಅವರಿಗಿಂತ 3 ಪಟ್ಟು ಹೆಚ್ಚು ಸಂಭಾವನೆ ಇತ್ತು!
ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ನಟಿ ಜ್ಯೋತಿಕಾ, "ಆ ಸಮಯದಲ್ಲಿ ನನಗೆ ಸೂರ್ಯ ಅವರಿಗಿಂತ 3 ಪಟ್ಟು ಹೆಚ್ಚು ಸಂಭಾವನೆ ನೀಡಲಾಗುತ್ತಿತ್ತು" ಎಂದು ಹೇಳಿ, ನಂತರ "ಆದರೆ ಈಗ ಅದು 30 ಪಟ್ಟು ಕಡಿಮೆಯಾಗಿದೆ" ಎಂದು ತಮಾಷೆ ಮಾಡಿದ್ದಾರೆ. ವಾಸ್ತವವಾಗಿ, 2003ರಲ್ಲಿ ತೆರೆಕಂಡ ಗೌತಮ್ ವಾಸುದೇವ್ ಮೆನನ್ ಅವರ ಸೂಪರ್ ಹಿಟ್ 'ಕಾಖ ಕಾಖ' ಸಿನಿಮಾದಲ್ಲಿ ನಟಿಸಲು ಸೂರ್ಯ ಅವರ ಹೆಸರನ್ನು ಶಿಫಾರಸು ಮಾಡಿದ್ದೇ ಜ್ಯೋತಿಕಾ. ಆ ವೇಳೆಗಾಗಲೇ ಸ್ಟಾರ್ ನಟಿಯಾಗಿದ್ದ ಜ್ಯೋತಿಕಾ ಅವರ ಈ ನಿರ್ಧಾರ, ಸೂರ್ಯ ಅವರ ವೃತ್ತಿಜೀವನದಲ್ಲಿ ಸೋಲೋ ಹೀರೋ ಆಗಿ ದೊಡ್ಡ ಬ್ಲಾಕ್‌ಬಸ್ಟರ್ ನೀಡಲು ಪ್ರಮುಖ ಕಾರಣವಾಯಿತು.
ಸೂರ್ಯ ನಿಜವಾದ 'ಗ್ರೀನ್ ಫ್ಲ್ಯಾಗ್'
ತಮ್ಮ ಪತಿಯ ಗುಣಗಳನ್ನು ಶ್ಲಾಘಿಸಿದ ಜ್ಯೋತಿಕಾ, ಸೂರ್ಯ ಅವರನ್ನು ನಿಜವಾದ 'ಗ್ರೀನ್ ಫ್ಲ್ಯಾಗ್' ಎಂದು ಬಣ್ಣಿಸಿದ್ದಾರೆ. "ನಮ್ಮ ಮನೆಯಲ್ಲಿ ನಾವಿಬ್ಬರೂ ಸಮಾನರು. ಪುರುಷನಲ್ಲಿ ಸಮಾನತೆಯ ಭಾವನೆ ಎಂಬುದು ಒಳಗಿನಿಂದ ಬರಬೇಕು, ಅದು ಸೂರ್ಯನಲ್ಲಿ ಹುಟ್ಟಿನಿಂದಲೇ ಬಂದಿದೆ. ನಾನು ಅಡುಗೆ ಮಾಡುತ್ತಿದ್ದರೆ ಅವರು ಕಿಚನ್‌ಗೆ ಬಂದು ಜೊತೆಯಾಗುತ್ತಾರೆ. ಸಿನಿಮಾ ನಿರ್ಮಾಣ, ಮಕ್ಕಳ ಪಾಲನೆ-ಪೋಷಣೆಯಿಂದ ಹಿಡಿದು ಪ್ರವಾಸದವರೆಗೆ ಎಲ್ಲವನ್ನೂ ನಾವಿಬ್ಬರೂ ಜೊತೆಯಾಗಿಯೇ ನಿರ್ವಹಿಸುತ್ತೇವೆ" ಎಂದು ಜ್ಯೋತಿಕಾ ಹೇಳಿದ್ದಾರೆ.
ರಿಯಲ್ - ರೀಲ್ ಜೋಡಿಯ ಪಯಣ
ಸೂರ್ಯ ಮತ್ತು ಜ್ಯೋತಿಕಾ ಮೊದಲ ಬಾರಿಗೆ 1999ರಲ್ಲಿ ವಸಂತ್ ನಿರ್ದೇಶನದ 'ಪೂವೆಲ್ಲಾಮ್ ಕೇಟ್ಟುಪ್ಪಾರ್' ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸಿದರು. ನಂತರ 'ಉಯಿರಿಲೇ ಕಲಂಧದು' (2000), 'ಕಾಖ ಕಾಖ' (2003), 'ಪೇರಳಗನ್' (2004), 'ಮಾಯಾವಿ' (2005) ಮತ್ತು 'ಸಿಲ್ಲುನು ಒರು ಕಾದಲ್' (2006) ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.
Suriya: ಜ್ಯೋತಿಕಾ-ಸೂರ್ಯ ಜೋಡಿಯ ಪ್ರೀತಿಯ ರಹಸ್ಯ ಇದು!
ಕೆಲವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ 2006ರಲ್ಲಿ ವಿವಾಹಬಂಧನಕ್ಕೆ ಕಾಲಿಟ್ಟರು. ಮದುವೆಯ ನಂತರ ಜ್ಯೋತಿಕಾ ಕುಟುಂಬಕ್ಕಾಗಿ ನಟನೆಯಿಂದ ತಾತ್ಕಾಲಿಕ ವಿರಾಮ ತೆಗೆದುಕೊಂಡಿದ್ದರು. ಇಬ್ಬರು ಮಕ್ಕಳಿರುವ ಈ ದಂಪತಿ, ಪ್ರಸ್ತುತ '2D ಎಂಟರ್‌ಟೇನ್‌ಮೆಂಟ್' ಎಂಬ ನಿರ್ಮಾಣ ಸಂಸ್ಥೆಯನ್ನು ಜಂಟಿಯಾಗಿ ನಡೆಸುತ್ತಿದ್ದಾರೆ.