ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಆ ಕಿಡಿಗೇಡಿಗಳನ್ನು ಸುಮ್ನೆ ಬಿಡಲ್ಲʼ; ಸಾವಿನ ವದಂತಿ ಹಬ್ಬಿಸಿದವರಿಗೆ ಹಿರಿಯ ನಟ ದೊಡ್ಡಣ್ಣ ಖಡಕ್‌ ವಾರ್ನಿಂಗ್!‌

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಆಘಾತಕಾರಿ ಸುಳ್ಳು ಸುದ್ದಿ ಮತ್ತು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆತಂಕ ಮೂಡಿಸಿತ್ತು. ಈ ಕುರಿತು ಸ್ವತಃ ದೊಡ್ಡಣ್ಣ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ತಾವು ಸಂಪೂರ್ಣ ಆರೋಗ್ಯವಾಗಿ ಮತ್ತು ನೆಮ್ಮದಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸಾವಿನ ವದಂತಿ ಹಬ್ಬಿಸಿದವರಿಗೆ ಹಿರಿಯ ನಟ ದೊಡ್ಡಣ್ಣ ಖಡಕ್‌ ವಾರ್ನಿಂಗ್!‌

-

Avinash GR
Avinash GR Jun 12, 2026 12:11 PM

ಶುಕ್ರವಾರ (ಜೂನ್‌ 12) ಬೆಳ್ಳಂಬೆಳಗ್ಗೆಯೇ ಹಿರಿಯ ನಟ ದೊಡ್ಡಣ್ಣ ಅವರ ಬಗ್ಗೆ ಒಂದು ಆಘಾತಕಾರಿ ಸುಳ್ಳು ಸುದ್ದಿ ವೈರಲ್‌ ಆಗಿತ್ತು. ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯವಾಗಿರುವ ನಟ ದೊಡ್ಡಣ್ಣ ಅವರು ಸಾವನ್ನಪ್ಪಿದ್ದಾರೆ ಎಂಬ ಪೋಸ್ಟರ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರಿಂದ ಒಂದಷ್ಟು ಸಮಯ ಆತಂಕ ಮನೆ ಮಾಡಿತ್ತು. ಇದೀಗ ಆ ಬಗ್ಗೆ ಸ್ವತಃ ದೊಡ್ಡಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ. ""ನಾನು ಆರೋಗ್ಯವಾಗಿದ್ದೀನಿ, ನೆಮ್ಮದಿಯಾಗಿದ್ದೀನಿ" ಎಂದು ಅವರು ಹೇಳಿದ್ದಾರೆ.

ಯಾರೋ ಅವಿವೇಕಿಗಳು ಫೇಕ್‌ ನ್ಯೂಸ್‌ ಹಾಕಿದ್ದಾರೆ

ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ದೊಡ್ಡಣ್ಣ, "ಅನ್ನದಾತರು, ಆಶ್ರಯದಾತರು ಆದ ಕನ್ನಡ ನಾಡಿನ ಎಲ್ಲ ನನ್ನ ತಂದೆ ತಾಯಿಗಳಿಗೆ ನಿಮ್ಮ ದೊಡ್ಡಣ್ಣನ ಭಕ್ತಿಪೂರ್ವಕವಾದಂತಹ ನಮಸ್ಕಾರಗಳು. ನಿಮಗೆ ಒಂದು ವಿಷಯವನ್ನು ನಾನು ತಿಳಿಸಲೇಬೇಕು. ಏನಪ್ಪಾ ಅಂದ್ರೆ, ಇವತ್ತು ಬೆಳಬೆಳಗ್ಗೆನೇ ನಾನು ಏಳೋದಕ್ಕಿಂತ ಮುಂಚೆನೇ ಯಾರೋ ಅವಿವೇಕಿಗಳು ನಾನು ನಿಧನನಾಗಿದ್ದೀನಿ ಅನ್ನುವಂತಹದ್ದನ್ನು ಫೇಕ್ ನ್ಯೂಸ್‌ಗಳಲ್ಲಿ ಹಾಕಿದ್ದಾರೆ. ಅದು ಶುದ್ಧ ಸುಳ್ಳು, ಶುದ್ಧ ಸುಳ್ಳು, ಶುದ್ಧ ಸುಳ್ಳು" ಎಂದು ಹೇಳಿದ್ದಾರೆ.

ವದಂತಿ ಹಬ್ಬಿಸಿದವರಿಗೆ ಶಿಕ್ಷೆ ಗ್ಯಾರಂಟಿ!



ನಾನು ನೂರು ಕಾಲ ಚೆನ್ನಾಗಿರ್ತೀನಿ

"ನಾನು ಆರೋಗ್ಯವಾಗಿದ್ದೀನಿ, ನೆಮ್ಮದಿಯಾಗಿದ್ದೀನಿ. ಹೆಂಗಾಗಿ, ಈ ವಿಷಯನ ತಮಗೆಲ್ಲ ತಿಳಿಸಬೇಕು. ನನಗೆ ಬೆಳಗ್ಗೆಯಿಂದ ಮುಖ ತೊಳ್ಕೊಳ್ಳೋದಕ್ಕೂನು ಬಿಡ್ತಾ ಇಲ್ಲ. ಎಲ್ಲ ನನ್ನ ಪ್ರೀತಿಪಾತ್ರರು, ನನ್ನ ಅಭಿಮಾನಿಗಳು, ನನ್ನ ಬಂಧುಬಳಗದವರು, ನನ್ನ ಮಕ್ಕಳು, ಮೊಮ್ಮಕ್ಕಳು ಎಲ್ಲಾ ಫೋನ್ ಮಾಡ್ತಾ ಇದ್ರು. ಅದಕ್ಕೋಸ್ಕರನೇ ಈ ವಿಡಿಯೋ ಮಾಡಿ ನಿಮಗೆ ಹಾಕ್ತಾ ಇದ್ದೀನಿ. ನಾನು ಆರೋಗ್ಯವಾಗಿದ್ದೀನಿ. ಎಲ್ಲಿಯವರೆಗೂ ನಿಮ್ಮ ಆಶೀರ್ವಾದ ಚೆನ್ನಾಗಿರುತ್ತೋ, ಅಲ್ಲಿಯವರೆಗೂ ನಾನು ನೂರು ಕಾಲ ಚೆನ್ನಾಗಿರ್ತೀನಿ ಅನ್ನೋದೇ ನನ್ನ ನಂಬಿಕೆ. ನನ್ನ ಮೇಲೆ ಈ ರೀತಿ ಪ್ರೀತಿ, ವಿಶ್ವಾಸ ಇಟ್ಟಿದ್ದಕ್ಕೆ ಎಲ್ಲರಿಗೂ ವಂದನೆ" ಎಂದು ದೊಡ್ಡಣ್ಣ ಅವರು ಹೇಳಿದ್ದಾರೆ.

Actor Doddanna: ಸಿನಿಮಾ ಯಶಸ್ವಿಗೆ ಹಾಸ್ಯ ಲೇಪನ ಅತ್ಯಗತ್ಯ: ಹಿರಿಯ ನಟ ದೊಡ್ಡಣ್ಣ

ಕಿಡಿಗೇಡಿಗಳಿಗೆ ಶಿಕ್ಷೆ ಕೊಡಿಸುತ್ತೇನೆ

ಇನ್ನು, ಈ ರೀತಿ ಸುಖಾಸುಮ್ಮನೆ ಫೇಕ್‌ ಹಬ್ಬಿಸಿದವರ ಮೇಲೆ ದೊಡ್ಡಣ್ಣ ಗರಂ ಆಗಿದ್ದಾರೆ. ತಮ್ಮ ಸಾವಿನ ವದಂತಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಿದವರ ವಿರುದ್ಧ ಕಾನೂನುಸಮರ ನಡೆಸುವುದಾಗಿ ಹೇಳಿದ್ದಾರೆ. "ಆ ಕಿಡಿಗೇಡಿಗಳನ್ನು ಸುಮ್ಮನೆ ಬಿಡಲ್ಲ. ಬೆನ್ನತ್ತಿ ಅವರಿಗೆ ಸರಿಯಾದ ಶಿಕ್ಷೆ ಕೊಡಿಸುತ್ತೇನೆ" ಎಂದು ದೊಡ್ಡಣ್ಣ ಅವರು ಹೇಳಿದ್ದಾರೆ.