ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಉತ್ತರ-ದಕ್ಷಿಣ ಅಂತ ಯಾಕ್‌ ಡಿವೈಡ್‌ ಮಾಡ್ತೀರಾ..?ʼ; ಅಂದು ಕಡೆಗಣಿಸಿದ್ದ ಕರಣ್‌ ಜೋಹರ್‌ಗೆ ನಟಿ ರೆಜಿನಾ ಕ್ಯಾಸಂಡ್ರಾ ಖಡಕ್‌ ಪ್ರಶ್ನೆ!

ಬಾಲಿವುಡ್‌ ನಟಿಯರಾದ ಜಾನ್ವಿ ಕಪೂರ್ ಹಾಗೂ ರಾಧಿಕಾ ಆಪ್ಟೆ ನೀಡಿದ ಹೇಳಿಕೆಗಳಿಗೆ ನಟಿ ರೆಜಿನಾ ಕ್ಯಾಸಂಡ್ರಾ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ರಗಳಲ್ಲಿನ ತಮ್ಮ ಪಾತ್ರಗಳ ಚಿತ್ರಣ ಅಸಹನೀಯ ಎನಿಸಿದರೆ ನಟಿಯರು ನಿರ್ಭಯವಾಗಿ ಹೊರಬರಬೇಕೇ ಹೊರತು, ಉತ್ತರ ಭಾರತ - ದಕ್ಷಿಣ ಭಾರತದ ನಡುವೆ ಕಂದಕ ನಿರ್ಮಿಸಬಾರದು ಎಂದಿದ್ದಾರೆ.

‘ಅಸಹನೀಯ ಅನ್ಸಿದ್ರೆ ಸಿನಿಮಾ ಬಿಡಿ’: ಜಾನ್ವಿ-ರಾಧಿಕಾಗೆ ರೆಜಿನಾ ಸಖತ್ ಟಾಂಗ್

-

Avinash GR
Avinash GR Nov 5, 2026 5:54 PM

'ಪೆದ್ದಿ' ಚಿತ್ರದಲ್ಲಿ ತನ್ನ ಪಾತ್ರವನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ಎಂಬ ಜಾನ್ವಿ ಕಪೂರ್ ಹೇಳಿಕೆ ಹಾಗೂ ತೆಲುಗು ಚಿತ್ರರಂಗದಲ್ಲಿನ ತಮ್ಮ ಅನುಭವದ ಕುರಿತಾದ ರಾಧಿಕಾ ಆಪ್ಟೆ ಅವರ ಮಾತುಗಳ ಬಗ್ಗೆ ನಟಿ ರೆಜಿನಾ ಕ್ಯಾಸಂಡ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿನ ಪಾತ್ರ ಚಿತ್ರಣ ಅಸಹನೀಯ ಎನಿಸಿದರೆ, ನಟಿಯರು ಅಂತಹ ಪ್ರಾಜೆಕ್ಟ್‌ಗಳಿಂದ ಹೊರಬರಬೇಕು ಎಂದು ರೆಜಿನಾ ಹೇಳಿದ್ದಾರೆ. ಜೊತೆಗೆ ಇಂತಹ ಮಾತುಗಳು ಉತ್ತರ ಮತ್ತು ದಕ್ಷಿಣ ಭಾರತೀಯ ಚಿತ್ರರಂಗಗಳ ನಡುವೆ ಕಂದಕವನ್ನು ಸೃಷ್ಟಿಸುತ್ತವೆ ಎಂದಿದ್ದಾರೆ.

ಮಹಿಳೆಯ ಪರ ನಿಲ್ಲುವುದು ಸುಲಭ

"ನನ್ನ ಪ್ರಕಾರ, ದಿನದ ಕೊನೆಯಲ್ಲಿ ಯಾರಿಗಾದರೂ ಅಸಹನೀಯ ಅಥವಾ ಮುಜುಗರ ಎನಿಸಿದರೆ ದಯವಿಟ್ಟು ಚಿತ್ರದಿಂದ ಹೊರಬನ್ನಿ. ನಮಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿರಬಾರದು. ಇದು ಕೇವಲ ಪುರುಷ ಅಥವಾ ಮಹಿಳೆಯ ವಿರುದ್ಧದ ವಿಷಯವಲ್ಲ. ಮಹಿಳೆಯಾಗಿ ನಾನೊಬ್ಬ ಮಹಿಳೆಯ ಪರ ನಿಲ್ಲುವುದು ಸುಲಭ, ನಿಸ್ಸಂಶಯವಾಗಿ ನಾನು ಮಹಿಳೆಯ ಪರವೇ ಇರುತ್ತೇನೆ. ಆದರೆ ಇಂದು, ವಿಶೇಷವಾಗಿ ನೀವು ನೀಡಿದ ಉದಾಹರಣೆಗಳನ್ನು (ಜಾನ್ವಿ ಕಪೂರ್‌, ರಾಧಿಕಾ ಆಪ್ಟೆ) ನೋಡಿದರೆ, ಅವರ ಸ್ಥಾನಮಾನಕ್ಕೆ ಆ ಚಿತ್ರಗಳಿಂದ ಹೊರಬರಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ ಇಬ್ಬರೂ ಇದ್ದಾರೆ ಎಂದು ನನಗನಿಸುವುದಿಲ್ಲ," ಎಂದು ಹೇಳಿದ್ದಾರೆ.

ಕರಣ್‌ ಜೋಹರ್‌ ಮೇಲೆ ರೆಜಿನಾ ಗರಂ

ಇನ್ನು, ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ 'ಕೇಸರಿ 2' ಚಿತ್ರದ ಪ್ರಚಾರದ ವೇಳೆ ತಮಗಾದ ಕಹಿ ಅನುಭವವನ್ನೂ ರೆಜಿನಾ ಹಂಚಿಕೊಂಡಿದ್ದಾರೆ. "ಉತ್ತರ ಭಾರತದ ನಟ-ನಟಿಯರು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಈ ರೀತಿ ಮಾತನಾಡುವುದು ನನಗೆ ನಿಜಕ್ಕೂ ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಏಕೆಂದರೆ ಅರಿವಿಲ್ಲದೆಯೇ ನೀವು ಉತ್ತರ-ದಕ್ಷಿಣದ ನಡುವೆ ಕಂದಕವನ್ನು ಸೃಷ್ಟಿಸುತ್ತಿದ್ದೀರಿ, ಇದು ಸಂಪೂರ್ಣ ತಪ್ಪು. ಇದನ್ನು ನಿಭಾಯಿಸಲು ಬೇರೆ ದಾರಿಗಳಿವೆ. ಇನ್ನು, ಕರಣ್ ಜೋಹರ್ ಶೋನಲ್ಲಿ ಜಾನ್ವಿ ತನ್ನ ಪಾತ್ರವನ್ನು ʻಪೆದ್ದಿʼ ಚಿತ್ರದಲ್ಲಿ ಆಕ್ಷೇಪಾರ್ಹವಾಗಿ ಬಿಂಬಿಸಿದ ಬಗ್ಗೆ ಮಾತನಾಡಿದ್ದಾರೆ. ಆದರೆ ಅದೇ ಕರಣ್ ಅವರ ಧರ್ಮ ಪ್ರೊಡಕ್ಷನ್ಸ್, ತಮ್ಮದೇ 'ಕೇಸರಿ 2' ಚಿತ್ರದಲ್ಲಿ ನನ್ನನ್ನು ಪ್ರಚಾರ ಮಾಡಲು ನಿರಾಕರಿಸಿತು. ಈಗ ಇದಕ್ಕೆ ನಾನೇನು ಹೇಳಬೇಕು? ನಾನು ದಕ್ಷಿಣ ಭಾರತದವಳು ಎಂಬ ಕಾರಣಕ್ಕಾ? ಇಂದಿಗೂ ಅವರು ಹಾಗೇಕೆ ಮಾಡಿದರು ಎಂಬುದು ನನಗೆ ತಿಳಿದಿಲ್ಲ. ಇದು ತುಂಬಾ ವಿಚಿತ್ರ. ಅವರು 'ಕೇಸರಿ 2' ಚಿತ್ರದ ಹಾಡನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು, ಆ ಹಾಡಿನಲ್ಲಿ ಮೊದಲಿನಿಂದ ಕೊನೆಯವರೆಗೂ ನಾನಿದ್ದೇನೆ, ಆದರೂ ನನ್ನನ್ನು ಟ್ಯಾಗ್ ಕೂಡ ಮಾಡಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ʻರಾಮಾಯಣʼ ಸಿನಿಮಾ ನಿರ್ಮಾಪಕರ ಜೊತೆ ಭರ್ಜರಿ ಡೀಲ್‌ ಕುದುರಿಸಿದ ಕರಣ್‌ ಜೋಹರ್;‌ ಎಷ್ಟಕ್ಕೇ ಸೇಲ್‌ ಆಯ್ತು ವಿತರಣೆ ಹಕ್ಕುಗಳು?

ಬಾಲಯ್ಯ ಬಗ್ಗೆ ರಾಧಿಕಾ ಮಾತು!

ದಕ್ಷಿಣ ಭಾರತೀಯ ಚಿತ್ರರಂಗದ ಅನುಭವದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ರಾಧಿಕಾ ಆಪ್ಟೆ, ತೆಲುಗು ಚಿತ್ರವೊಂದರಲ್ಲಿ ಮಾವನನ್ನು ಮದುವೆಯಾಗುವ ಪಾತ್ರ ಮಾಡಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದರು. ಚಿತ್ರದ ಹೆಸರನ್ನು ಪ್ರಸ್ತಾಪಿಸದೆ ಮಾತನಾಡಿದ್ದ ಅವರು, "ನಾನು ನಟಿಸಿದ ತೆಲುಗು ಚಿತ್ರವೊಂದರಲ್ಲಿ ನನ್ನ ಮಾವನನ್ನೇ ಮದುವೆಯಾಗಬೇಕಿತ್ತು. ಅದು ನನಗೆ ಅತ್ಯಂತ ಸವಾಲಿನ ಚಿತ್ರವಾಗಿತ್ತು. ಆ ಚಿತ್ರದ ಪ್ರತಿಯೊಂದು ಅಂಶವೂ ನನಗೆ ಅಸಹ್ಯ ಎನಿಸುತಿತ್ತು" ಎಂದು ಹೇಳಿದ್ದರು. ಅಂದಹಾಗೆ, ಅವರು ನಟಿಸಿದ್ದು ನಂದಮೂರಿ ಬಾಲಕೃಷ್ಣ ಅವರ ಸಿನಿಮಾವಾಗಿತ್ತು.

'ಪೆದ್ದಿ' ಚಿತ್ರದ ಬಗ್ಗೆ ಜಾನ್ವಿ ಕಪೂರ್ ಹೇಳಿದ್ದೇನು?

ಬುಚ್ಚಿಬಾಬು ಸನಾ ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್, ರಾಮ್ ಚರಣ್ ಎದುರು ನಟಿಸಿದ್ದರು. ಆದರೆ ಕ್ಯಾಮೆರಾ ಆಂಗಲ್‌ಗಳು ಮತ್ತು ಆಕೆಯ ಪಾತ್ರವನ್ನು ಅತಿಯಾಗಿ ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂದು ಚಿತ್ರತಂಡದ ವಿರುದ್ಧ ಹಲವರು ತೀವ್ರ ಟೀಕೆ ವ್ಯಕ್ತಪಡಿಸಿದ್ದರು. 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದ ಜಾನ್ವಿ, ಶೂಟಿಂಗ್ ವೇಳೆ ತಾನು ಇನ್ನಷ್ಟು ಜಾಗರೂಕರಾಗಿರಬೇಕಿತ್ತು ಎಂದು ಒಪ್ಪಿಕೊಂಡಿದ್ದರಲ್ಲದೆ, ಆ ಪಾತ್ರ ಚಿತ್ರಣ ಸರಿ ಇರಲಿಲ್ಲ ಎಂದಿದ್ದರು.

ಒಂದು ರೀತಿಯಲ್ಲಿ ಅದೊಂದು ಅಸಹನೀಯ

"ನಾನು ಬೇರೆಯವರ ಮೇಲೆ ತಪ್ಪು ಹೊರಿಸುತ್ತಿದ್ದೇನೆ ಎಂದು ಕರೆಸಿಕೊಳ್ಳುವುದು ನನಗಿಷ್ಟವಿಲ್ಲ, ಆದರೆ ನಿರ್ದೇಶಕರು ಹೇಳಿದಂತೆ ನಾವು ಕೇಳಬೇಕಾಗುತ್ತದೆ. ನನಗೆ ಮಾಹಿತಿ ಸಿಕ್ಕಷ್ಟೂ ನಾನು ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೆ. ದಕ್ಷಿಣದಲ್ಲಿ ಪೂರ್ಣ ಪ್ರಮಾಣದ ಬೌಂಡ್ ಸ್ಕ್ರಿಪ್ಟ್ ಇರುವುದು ತೀರಾ ಅಪರೂಪ. ಕ್ಯಾಮೆರಾ ಆಂಗಲ್‌ಗಳು ಹೇಗಿರುತ್ತವೆ ಎಂಬುದು ಮುಂಚಿತವಾಗಿ ತಿಳಿಯುವುದು ವಿರಳ. ನನಗೆ ಇದ್ದ ಅಧಿಕಾರವನ್ನು ನಾನು ಸರಿಯಾಗಿ ಬಳಸಿಕೊಳ್ಳಬೇಕಿತ್ತು. ಒಂದು ರೀತಿಯಲ್ಲಿ ಅದೊಂದು ಅಸಹನೀಯ ಮತ್ತು ಮನಸ್ಸಿಗೆ ಘಾಸಿ ತಂದ ಅನುಭವವಾಗಿತ್ತು" ಎಂದು ಜಾನ್ವಿ ಹೇಳಿದ್ದರು.