ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಮೌನವಾಗಿದ್ದರೆ ಅದು ದೌರ್ಬಲ್ಯವಲ್ಲ’: ನೋವು ನೀಡುವವರ ವಿರುದ್ಧ ಸಿಡಿದೆದ್ದ ನಟಿ ಕೃಷಿ ತಾಪಂಡ

ವೈಯಕ್ತಿಕ ಬದುಕಿನ ಏಳುಬೀಳುಗಳಿಂದ ನೋವಿನಲ್ಲಿರುವ ನಟಿ ಕೃಷಿ ತಾಪಂಡ ಅವರನ್ನೇ ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಆ ಬಗ್ಗೆ ನಟಿ ಕೃಷಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಮೌನ ಎಂದರೆ ದೌರ್ಬಲ್ಯವಲ್ಲ, ಒಳ್ಳೆಯತನ ನನ್ನ ವ್ಯಕ್ತಿತ್ವ ಎಂದಿದ್ದಾರೆ ಕೃಷಿ.

‌ʻಬೇರೆಯವರ ನೋವು ನಿಮಗೆ ಮನರಂಜನೆಯೇʼ; ನಟಿ ಕೃಷಿ ತಾಪಂಡ ಖಡಕ್‌ ಪ್ರಶ್ನೆ!

-

Avinash GR
Avinash GR Jul 27, 2026 12:16 PM

ನಟಿ ಕೃಷಿ ತಾಪಂಡ ಅವರ ಜೀವನದಲ್ಲಿ ಇತ್ತೀಚೆಗೆ ಸಾಕಷ್ಟು ಏಳುಬೀಳುಗಳು ಸಂಭವಿಸಿವೆ. ಸದ್ಯ ದುಃಖದಲ್ಲಿರುವ ಕೃಷಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮತ್ತಷ್ಟು ನೋವು ನೀಡುತ್ತಿದ್ದಾರೆ. ಈ ಬಗ್ಗೆ ಈ ಹಿಂದೆಯೂ ಪ್ರತಿಕ್ರಿಯಿಸಿದ್ದ ಕೃಷಿ ತಾಪಂಡ, ಇದೀಗ ಪುನಃ ಸಿಡಿದೆದ್ದಿದ್ದಾರೆ. "ನನ್ನನ್ನು ಎಷ್ಟೇ ಕೆಳಗೆ ತಳ್ಳಿದರೂ, ನಾನು ಪ್ರತಿ ಬಾರಿಯೂ ಮತ್ತೆ ಎದ್ದು ನಿಂತಿದ್ದೇನೆ; ಇನ್ಮುಂದೆಯೂ ಎದ್ದು ನಿಲ್ಲುತ್ತೇನೆ" ಎಂದು ಅವರು ಹೇಳಿದ್ದಾರೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೃಷಿ ತಾಪಂಡ, "ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮತ್ತೆ ಮತ್ತೆ ಮೂಡುತ್ತಿದೆ... ಯಾರದ್ದೋ ನೋವನ್ನು ನೋಡಿ ಅದನ್ನೇ ಮನರಂಜನೆ ಮಾಡಿಕೊಳ್ಳುವಷ್ಟು ನಾವು ಯಾವಾಗ ಬದಲಾಗಿಬಿಟ್ಟೆವು? ಯಾರಾದರೂ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅವರನ್ನು ಹಾಗೆಯೇ ಬಿಡುವುದು ಏಕೆ ಇಷ್ಟು ಕಷ್ಟ? ನನ್ನ ವೈಯಕ್ತಿಕ ಜೀವನದ ಬಗ್ಗೆ ಪ್ರತಿಯೊಬ್ಬರಿಗೂ ಉತ್ತರ ನೀಡಬೇಕಾದ ಅಗತ್ಯ ಎಲ್ಲಿದೆ? ಮೌನವಾಗಿದ್ದರೆ ಅದು ದೌರ್ಬಲ್ಯವಲ್ಲ. ಒಳ್ಳೆಯತನ ಎಂಬುದು ವೀಕ್‌ನೆಸ್‌ ಅಲ್ಲ. ನಾನು ಮೌನವನ್ನು ಆಯ್ಕೆ ಮಾಡಿಕೊಂಡದ್ದು ಗೌರವಕ್ಕಾಗಿ, ಒಳ್ಳೆಯತನವನ್ನು ಆಯ್ಕೆ ಮಾಡಿಕೊಂಡದ್ದು ನನ್ನ ವ್ಯಕ್ತಿತ್ವಕ್ಕಾಗಿ" ಎಂದು ಬರೆದುಕೊಂಡಿದ್ದಾರೆ.

ʻನನ್ನ ಹೃದಯ ಒಡೆದುಹೋಗಿದ್ರೂ, ನನ್ನನ್ನ ನಾನೇ ನೋಡ್ಕೋಬೇಕುʼ; ಮನದಾಳದ ದುಃಖವನ್ನು ಹಂಚಿಕೊಂಡ ನಟಿ ಕೃಷಿ ತಾಪಂಡ

'ನನ್ನನ್ನು ಇನ್ನೂ ತಳ್ಳಬೇಕು ಎನಿಸಿದರೆ ತಳ್ಳಿ'

"ನನ್ನನ್ನು ಎಷ್ಟೇ ಕೆಳಗೆ ತಳ್ಳಿದರೂ... ಎಷ್ಟೇ ಪ್ರಶ್ನಿಸಿದರೂ... ಎಷ್ಟೇ ಜಡ್ಜ್ ಮಾಡಿದರೂ... ಎಷ್ಟೇ ಕಥೆಗಳನ್ನು ಕಟಿದರೂ... ನಾನು ಪ್ರತಿ ಬಾರಿಯೂ ಮತ್ತೆ ಎದ್ದು ನಿಂತಿದ್ದೇನೆ, ಇನ್ಮುಂದೆಯೂ ಎದ್ದು ನಿಲ್ಲುತ್ತೇನೆ. ನನ್ನನ್ನು ಇನ್ನೂ ತಳ್ಳಬೇಕು ಎನಿಸಿದರೆ ತಳ್ಳಿ. ನೆಲದೊಳಗೆ ಇನ್ನೂ ಆಳಕ್ಕೆ ಹೂಳಬೇಕು ಎನಿಸಿದರೆ ಹೂಳಿ. ಬೇರುಗಳು ಎಷ್ಟು ಆಳವಾಗುತ್ತವೆಯೋ, ಮರ ಅಷ್ಟು ಗಟ್ಟಿಯಾಗಿ ಬೆಳೆಯುತ್ತದೆ. ನಾನು ಈಗ ನಿಂತಿರುವುದು ದ್ವೇಷದ ಮೇಲಲ್ಲ, ನನ್ನ ಅಪ್ಪ-ಅಮ್ಮನ ಪ್ರೀತಿಯ ಮೇಲೆ; ನನ್ನ ಕುಟುಂಬದ ಆಶೀರ್ವಾದ, ಸ್ನೇಹಿತರ ಬೆಂಬಲ ಹಾಗೂ ನನ್ನನ್ನು ನಿಜವಾಗಿ ಅರಿತಿರುವ ಜನರ ವಿಶ್ವಾಸದ ಮೇಲೆ. ಪ್ರೀತಿ, ಕರುಣೆ ಮತ್ತು ಸಹಾನುಭೂತಿಯಿಂದ ಕಟ್ಟಿಕೊಂಡ ನನ್ನ ಬಳಗವೇ ನನ್ನ ಶಕ್ತಿ. ನಾನು ಯಾರಿಗಾದರೂ ಉತ್ತರ ನೀಡಬೇಕಿದ್ದರೆ ಅದು ಇವರಿಗೆ ಮಾತ್ರ, ಬೇರೆ ಯಾರಿಗೂ ಅಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ನಿಮ್ಮ ಮೇಲೆ ನನಗೆ ಕೋಪವಿಲ್ಲ'

"ನಿಮ್ಮ ವದಂತಿಗಳು ನನ್ನನ್ನು ನಿರ್ಧರಿಸಲಾರವು. ನಿಮ್ಮ ಕಥೆಗಳು ನನ್ನನ್ನು ಬದಲಾಯಿಸಲಾರವು. ನಿಮ್ಮ ಪ್ರಯತ್ನಗಳು ನನ್ನ ಆತ್ಮಸ್ಥೈರ್ಯವನ್ನು ಮುರಿಯಲಾರವು. ಏಕೆಂದರೆ ನನ್ನನ್ನು ದೇವರು ಮತ್ತು ನನ್ನ ಜನ ಕಾಪಾಡುತ್ತಿದ್ದಾರೆ. ನಿಮ್ಮ ಮೇಲೆ ನನಗೆ ಕೋಪವಿಲ್ಲ; ಬದಲಿಗೆ ನಿಮಗಾಗಿ ಪ್ರಾರ್ಥಿಸುತ್ತೇನೆ. ಒಂದು ದಿನ ನಿಮ್ಮ ಹೃದಯ, ನಿಮ್ಮ ಅಭಿಪ್ರಾಯಗಳಿಗಿಂತ ದೊಡ್ಡದಾಗಲಿ. ಬೇರೆಯವರ ನೋವು ನಿಮಗೆ ಮನರಂಜನೆಯಾಗದೆ ನಿಜವಾದ ನೋವಾಗಿ ಕಾಣಲಿ. ನಿಮ್ಮ ಜೀವನದಲ್ಲೂ ಅಷ್ಟೊಂದು ಪ್ರೀತಿ ತುಂಬಿರಲಿ, ಬೇರೆಯವರ ಗಾಯಗಳಲ್ಲಿ ಸಂತೋಷ ಹುಡುಕುವ ಅಗತ್ಯವೇ ಬಾರದಿರಲಿ ಎಂದು ಆಶಿಸುತ್ತೇನೆ" ಎಂದಿದ್ದಾರೆ ಕೃಷಿ.

ಕೃಷಿ ತಾಪಂಡ ಅವರ ಪೋಸ್ಟ್‌

'ದಯೆ ಯಾವಾಗಲೂ ದ್ವೇಷಕ್ಕಿಂತ ದೊಡ್ಡದು'

"ನನ್ನ ಜೊತೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವೇ ನನ್ನ ಶಕ್ತಿ, ನೀವೇ ನನ್ನ ಧೈರ್ಯ. ನೀವು ಇರುವವರೆಗೂ ಮತ್ತು ದೇವರ ಆಶೀರ್ವಾದ ನನ್ನ ಮೇಲಿರುವವರೆಗೂ ಯಾವ ವದಂತಿಯೂ ನನ್ನನ್ನು ಕುಸಿಯುವಂತೆ ಮಾಡಲು ಸಾಧ್ಯವಿಲ್ಲ. ನಾನು ಮತ್ತೆ ಮತ್ತೆ ಏಳುತ್ತೇನೆ... ಯಾರನ್ನೂ ತಪ್ಪು ಎಂದು ಸಾಬೀತುಪಡಿಸಲು ಅಲ್ಲ, ನಾನು ಯಾರು ಎಂಬುದನ್ನು ಮರೆಯದಿರಲು. ಏಕೆಂದರೆ ದಯೆ ಎಂಬುದು ಯಾವಾಗಲೂ ದ್ವೇಷಕ್ಕಿಂತ ದೊಡ್ಡದು, ಪ್ರೀತಿ ಯಾವಾಗಲೂ ಗದ್ದಲಕ್ಕಿಂತ ದೊಡ್ಡದು ಮತ್ತು ಗೌರವದಿಂದ ಬದುಕುವುದು ಯಾವಾಗಲೂ ನಿಜವಾದ ಗೆಲುವು" ಎಂದು ಕೃಷಿ ತಾಪಂಡ ಹೇಳಿಕೊಂಡಿದ್ದಾರೆ.