ಹಸೆಮಣೆ ಏರಲು ಶರ್ಮಿಳಾ ಮಾಂಡ್ರೆ ಸಜ್ಜು; ತಮಿಳು ನಿರ್ಮಾಪಕನ ಜತೆ ʼನವಗ್ರಹʼ ನಟಿ ಕಲ್ಯಾಣ?
Sharmiela Mandre: ʼಕಣ್ ಕಣ್ಣ ಸಲಿಗೆʼ ಎಂದಿದ್ದ ಕನ್ನಡದ ಸ್ಟಾರ್ ನಟಿ ಶರ್ಮಿಳಾ ಮಾಂಡ್ರೆ ಇದೀಗ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನುವ ಮಾತು ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ತಮಿಳು ನಿರ್ಮಾಪಕ ಸುಧನ್ ಸುದರ್ಶನ್ ಅವರೊಂದಿಗೆ ಶರ್ಮಿಳಾ ಸಪ್ತಪದಿ ತಿಳಿಯಲಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಅಧಿಕೃತ ಮಾಹಿತಿ ಇನ್ನಷ್ಟೆ ಹೊರ ಬೀಳಬೇಕಿದೆ.
ಶರ್ಮಿಳಾ ಮಾಂಡ್ರೆ (ಸಂಗ್ರಹ ಚಿತ್ರ) -
ಬೆಂಗಳೂರು, ಜೂ. 16: ಸ್ಯಾಂಡಲ್‌ವುಡ್‌ನಲ್ಲಿ ಸದ್ಯದಲ್ಲೇ ಮಂಗಳ ವಾದ್ಯ ಮೊಳಗಲಿದೆ. ಹೌದು, ಕನ್ನಡದ ಸ್ಟಾರ್ ನಟಿಯೊಬ್ಬರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್ ಜತೆಗೆ ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚಿದ ಶರ್ಮಿಳಾ ಮಾಂಡ್ರೆ (Sharmiela Mandre) ಮದುವೆಯ ಸುದ್ದಿ ಜೋರಾಗಿ ಕೇಳಿ ಬರುತ್ತಿದ್ದು, ಜೂನ್ 25ರಂದು ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗಿದೆ. ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುದರ್ಶನ್ ಅವರೊಂದಿಗೆ ಶರ್ಮಿಳಾ ಸಪ್ತಪದಿ ತಿಳಿಯಲಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಅಧಿಕೃತ ಮಾಹಿತಿ ಇನ್ನಷ್ಟೆ ಹೊರ ಬೀಳಬೇಕಿದೆ.
2024ರಲ್ಲಿ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿರುವ ತಮಿಳಿನ ʼಮಹಾರಾಜʼ ಚಿತ್ರವನ್ನು ಸುಧನ್ ನಿರ್ಮಿಸಿದ್ದರು. ವಿಜಯ್ ಸೇತುಪತಿ, ಅನುರಾಗ್ ಕಶ್ಯಪ್, ಮಮತಾ ಮೋಹನ್‌ದಾಸ್, ಮಣಿಕಂಠನ್, ಅಭಿರಾಮಿ ಮತ್ತಿತರರು ನಟಿಸಿದ್ದ ಈ ಚಿತ್ರ ಬಾಕ್ಸ್ ಅಫೀಸ್ ಕೊಳ್ಳೆ ಹೊಡೆದಿತ್ತು.
ಸರಳ ನಿಶ್ಚಿತಾರ್ಥ
ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಅವರ ನಿಶ್ಚಿತಾರ್ಥ ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ನೆವೇರಲಿದೆ ಎನ್ನಲಾಗಿದೆ. ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲು ಈ ಜೋಡಿ ತೀರ್ಮಾನಿಸಿದೆಯಂತೆ. ಅದಾಗ್ಯೂ ನಿಶ್ಚಿತಾರ್ಥ ಎಲ್ಲಿ ನಡೆಯಲಿದೆ ಎನ್ನುವ ವಿವರ ಬಹಿರಂಗಗೊಂಡಿಲ್ಲ.
ಜೆನ್ ಜಿ ಯುವತಿಯರನ್ನು ಪ್ರತಿಬಿಂಬಿಸಿದ ಶರ್ಮಿಳಾ ಮಾಂಡ್ರೆ ಫ್ಯಾಷನ್
ಶರ್ಮಿಳಾ ಮಾಂಡ್ರೆ ಸಿನಿ ಜರ್ನಿ
2007ರಲ್ಲಿ ತೆರೆಕಂಡ ಧ್ಯಾನ್ ನಟನೆಯ ʼಸಜನಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಶರ್ಮಿಳಾ ಸುಮಾರು ಒಂದೂವರೆ ದಶಕದಿಂದ ಬಣ್ಣದ ಲೋಕದಲ್ಲಿ ಸಕ್ರೀಯವಾಗಿದ್ದಾರೆ. ಈಗಲೂ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʼಡೆವಿಲ್ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಶರ್ಮಿಳಾ ಕಾಣಿಸಿಕೊಂಡಿದ್ದರು. ಚಿಕ್ಕದಾಗಿದ್ದರೂ ಅವರ ಪಾತ್ರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಹಾಗೆ ನೋಡಿದರೆ ದರ್ಶನ್ ಜತೆ ಶರ್ಮಿಳಾ ತೆರೆ ಹಂಚಿಕೊಂಡಿದ್ದು ಇದು ಮೊದಲ ಸಲವೇನಲ್ಲ. 2008ರಲ್ಲಿ ತೆರೆಕಂಡ ದರ್ಶನ್ ಅವರ ʼನವಗ್ರಹʼ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆಯೂ ನಟಿಸಿದ್ದರು. ದಿನಕರ್ ತೂಗುದೀಪ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್, ಶರ್ಮಿಳಾ ಜತೆಗೆ ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ತರುಣ್ ಕಿಶೋರ್, ವರ್ಷಾ, ಗಿರಿ ದಿನೇಶ್ ಮತ್ತಿತರರು ಅಭಿನಯಿಸಿದ್ದರು. ಅದರಲ್ಲಿಯೂ ಧರ್ಮ ಕೀರ್ತಿರಾಜ್-ಶರ್ಮಿಳಾ ಜೋಡಿಯ ʼಕಣ್ ಕಣ್ ಸಲಿಗೆʼ ಹಾಡು ಇಂದಿಗೂ ಜನಪ್ರಿಯ.
ಪರಭಾಷೆಯಲ್ಲೂ ಮೋಡಿ
ಸ್ನಿಗ್ಧ ಸೌಂದರ್ಯದಿಂದಲೇ ಗಮನ ಸೆಳೆಯುವ ಶರ್ಮಿಳಾ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2012ರಲ್ಲಿ ʼಮಿರಟ್ಟಲ್ʼ ಸಿನಿಮಾ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ಅವರು ಮುಂದಿನ ವರ್ಷ ʼಕೆವ್ವು ಕೆಕಾʼದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಸದ್ಯ ತಮಿಳಿನ ʼಅದೃಷ್ಟಶಾಲಿʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಕನ್ನಡ ʼದಸರಾʼ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ನಟಿಯಾಗಿ ಮಾತ್ರವಲ್ಲ ನಿರ್ಮಾಪಕಿಯಾಗಿಯೂ ಶರ್ಮಿಳಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮಿಳು-ಕನ್ನಡ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ. ಮದುವೆ ಬಳಿಕ ಚಿತ್ರರಂಗದಲ್ಲಿ ಮುಂದುವರಿಯುತ್ತಾರಾ ಅಥವಾ ಗುಡ್‌ಬೈ ಹೇಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಅದಾಗ್ಯೂ ನಿಶ್ಚಿತಾರ್ಥದ ಬಗ್ಗೆ ಇಬ್ಬರೂ ಬಹಿರಂಗವಾಗಿ ಎಲ್ಲವೂ ಹೇಳಿಕೆ ನೀಡಿಲ್ಲ.