ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rebel Song Out: ʼʼಕಾಡ ಬೆಂಕಿಯು ಊರ ನೋಡ ಬಂದಿದೆ...ʼʼ: ʼಕಾಂತಾರ: ಚಾಪ್ಟರ್‌ 1' ಚಿತ್ರದ ರೆಬೆಲ್‌ ಸಾಂಗ್‌ ಔಟ್‌

ಘೋಷಣೆಯಾದಾಗಿನಿಂದಲೇ ಭಾರಿ ಕುತೂಹಲ ಮೂಡಿಸಿದ ʼಕಾಂತಾರ: ಚಾಪ್ಟರ್‌ 1' ಸಿನಿಮಾದ ಹೊಸ ಹಾಡು ಇದೀಗ ರಿಲೀಸ್‌ ಆಗಿದೆ. ʼರೆಬೆಲ್‌ʼ ಹೆಸರಿನ ಈ ಹಾಡು ಬುಡಕಟ್ಟು ಜನಾಂಗದ ಧ್ವನಿಯಾಗಿ ಮೂಡಿಬಂದಿದೆ. ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯ ಈ ಹಾಡು 5 ಭಾಷೆಗಳಲ್ಲಿ ಹೊರ ಬಂದಿದೆ.

ʼಕಾಂತಾರ: ಚಾಪ್ಟರ್‌ 1' ಚಿತ್ರದ ರೆಬೆಲ್‌ ಸಾಂಗ್‌ ಔಟ್‌

-

Ramesh B Ramesh B Oct 1, 2025 3:09 PM

ಬೆಂಗಳೂರು: ತೆರೆಮೇಲೆ ಸ್ಯಾಂಡಲ್‌ವುಡ್‌ ಮತ್ತೊಮ್ಮೆ ವಿಜೃಂಭಿಸಲು ಕ್ಷಣಗಣನೆ ಆರಂಭವಾಗಿದೆ. ಗುರುವಾರ (ಅಕ್ಟೋಬರ್‌ 2) ವಿಶ್ವಾದ್ಯಂತ ವಿವಿಧ ಭಾಷೆಗಳಲ್ಲಿ ಕನ್ನಡದ ಹೆಮ್ಮೆಯ ʼಕಾಂತಾರ: ಚಾಪ್ಟರ್‌ 1' (Kantara Chapter 1) ಚಿತ್ರ ಬಿಡುಗಡೆಯಾಗಲಿದೆ. ಘೋಷಣೆಯಾದಾಗಿನಿಂದಲೇ ಭಾರಿ ಕುತೂಹಲ ಮೂಡಿಸಿದ ಈ ಸಿನಿಮಾದ ಹೊಸ ಹಾಡು ಇದೀಗ ರಿಲೀಸ್‌ ಆಗಿದೆ. ʼರೆಬೆಲ್‌ʼ ಹೆಸರಿನ ಈ ಹಾಡು ಬುಡಕಟ್ಟು ಜನಾಂಗದ ಧ್ವನಿಯಾಗಿ ಮೂಡಿಬಂದಿದೆ (Rebel Song Out). ಈಗಾಗಲೇ ಹೊರಬಂದಿರುವ ʼಬ್ರಹ್ಮಕಲಶʼ ಹಾಡು ಸಂಚಲನ ಸೃಷ್ಟಿಸಿದ್ದು, ಈ ಮಧ್ಯೆ 2ನೇ ಹಾಡು ಕೂಡ ಧೂಳೆಬ್ಬಿಸುತ್ತಿದೆ. ಜಾನಪದ ಸಂಗೀತೋಪಕರಣವನ್ನು ಬಳಸಿ, ಪಾಡ್ದಾನ ರೂಪದಲ್ಲಿ ಹಾಡನ್ನು ಕಟ್ಟಿಕೊಡಲಾಗಿದೆ.

ಶೋಷಣೆಯಿಂದ ಬೇಸತ್ತ ಬುಡಕಟ್ಟು ಸಮುದಾಯ ಕ್ರಾಂತಿಯ ಕಿಡಿಯನ್ನು ಹೊತ್ತಿಸುವ ವೇಳೆ ಈ ಹಾಡು ಮೂಡಿ ಬಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ʼʼಕಾಡು ಹೇಳಿದೆ ಎಚ್ಚರ...ಕಾಡ ಬೆಂಕಿಯು ಊರ ನೋಡ ಬಂದಿದೆ, ತಡೆ ಯಾರದ್ದುʼʼ ಎಂಬ ಸಾಲು ಇದಕ್ಕೆ ಸಾಕ್ಷಿ ಒದಗಿಸಿದೆ. ವಿವಿಧ ಭಾಷೆಗಳಲ್ಲಿ ಹಾಡು ರಿಲೀಸ್‌ ಆಗಿದ್ದು, ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಬೇರೊಂದು ಲೋಕಕ್ಕೆ ನಿಮ್ಮನ್ನು ಕೊಂಡೊಯ್ಯಲಿದೆ. ಕನ್ನಡದಲ್ಲಿ ಈ ಹಾಡಿಗೆ ಮೈಮ್‌ ರಾಮ್‌ದಾಸ್‌ ಧ್ವನಿ ನೀಡಿದ್ದು, ತ್ರಿಲೋಕ್‌ ತ್ರಿವಿಕ್ರಮ್‌ ಸಾಹಿತ್ಯ ರಚಿಸಿದ್ದಾರೆ. ಕೇಳುಗರನ್ನು ರೋಮಾಂಚನಗೊಳಿಸುವ ಈ ಹಾಡು ಇದೀಗ ಟ್ರೆಂಡಿಂಗ್‌ನಲ್ಲಿದೆ. ಹಿಂದಿಯಲ್ಲಿ ಈ ಹಾಡಿಗೆ ದಿಲ್ಜಿತ್​ ದೋಸಾಂಜ್ ಧ್ವನಿ ನೀಡಿರುವುದು ವಿಶೇಷ. ಜಾನಪದ ಹಿನ್ನೆಲೆಯ ಈ ಹಾಡಿಗೆ ಅವರ ಧ್ವನಿ ಪರ್‌ಫೆಕ್ಟ್‌ ಮ್ಯಾಚ್‌ ಆಗಿದೆ.

ರೆಬೆಲ್‌ ಹಾಡು ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Singer Abby V: ಭಾರಿ ಸದ್ದು ಮಾಡುತ್ತಿದೆ ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ʼಬ್ರಹ್ಮಕಲಶʼ ಹಾಡು; ಶಿವ ಸ್ತುತಿಗೆ ಜೀವ ತುಂಬಿದ ಸಿಂಗರ್‌ ಅಭಿ ಯಾರು?

ಗಮನ ಸೆಳೆದ ಟ್ರೈಲರ್‌

ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಆಗಿ ಇದು ಮೂಡಿಬಂದಿದೆ. 2022ರಲ್ಲಿ ʼಕಾಂತಾರʼ ಸಿನಿಮಾ ತೆರೆಕಂಡ ವೇಳೆ ರಿಷಬ್‌ ಶೆಟ್ಟಿ ಪ್ರೀಕ್ವೆಲ್‌ ಘೋಷಿಸಿದ್ದರು. ಅದಾಗಿ ಬರೋಬ್ಬರಿ 3 ವರ್ಷಗಳ ಬಳಿಕ ಚಿತ್ರ ತೆರೆಕಾಣುತ್ತಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಯಾವುದೇ ಗುಟ್ಟು ಬಿಟ್ಟು ಕೊಡದೆ ರಹಸ್ಯವಾಗಿ ಶೂಟಿಂಗ್‌ ನಡೆಸಿದ್ದ ಚಿತ್ರತಂಡ ಕೆಲವು ದಿನಗಳಿಂದ ಒಂದೊಂದೇ ಮಾಹಿತಿ ಬಹಿರಂಗಪಡಿಸುತ್ತಿದೆ. ಕೆಲವು ದಿನಗಳ ಹಿಂದೆ ರಿಲೀಸ್‌ ಆದ ಟ್ರೈಲರ್‌ ಚಿತ್ರದ ಮೇಲಿನ ಕುತೂಹಲವನ್ನು, ನಿರೀಕ್ಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದು, ರಿಲೀಸ್‌ಗೆ ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ.

ಚಿತ್ರವನ್ನು ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದು, ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿರುವುದು ಮೇಕಿಂಗ್‌ ವಿಡಿಯೊದಲ್ಲಿ ಕಂಡುಬಂದಿದೆ. ನೈಜ ಕಾಡಿನಲ್ಲೇ ಶೂಟಿಂಗ್‌ ನಡೆಸಲಾಗಿದ್ದು, ಇದಕ್ಕಾಗಿ ಕುದುರೆ ಸವಾರಿ, ಕಳರಿಪಯಟ್ಟು ಕಲಿತಿದ್ದಾರೆ. ಅಲ್ಲದೆ ಸಾಹಸ ದೃಶ್ಯಗಳಲ್ಲಿ ಡ್ಯೂಪ್‌ ಇಲ್ಲದೆ ಪಾಲ್ಗೊಂಡಿದ್ದಾರೆ. ಚಿತ್ರದಲ್ಲಿ ಯುದ್ಧದ ದೃಶ್ಯ ಹೈಲೈಟ್‌ ಆಗಿರಲಿದ್ದು, ಇದನ್ನು ಸುಮಾರು 28 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ʼಕಾಂತಾರʼ ಚಿತ್ರದ ಯಶಸ್ಸಿನಲ್ಲಿ ಸಂಗೀತ ಪ್ರಧಾನ ಪಾತ್ರವಹಿಸಿತ್ತು. ಬಿ. ಅಜನೀಶ್‌ ಲೋಕನಾಥ್‌ ಅವರ ಹಾಡು ಮತ್ತು ಹಿನ್ನೆಲೆ ಸಂಗೀತ ಗಮನ ಸೆಳೆದಿತ್ತು. ಹೀಗಾಗಿ ಅವರು ಪ್ರೀಕ್ವೆಲ್‌ನಲ್ಲೂ ಮುಂದುವರಿದಿದ್ದು, ಮತ್ತೊಮ್ಮೆ ಸಂಗೀತದ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಈಗಾಗಲೇ 2 ಹೊರಬಿದ್ದಿದೆ.