ʻಕರಾವಳಿʼ ಚಿತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಪಡೆದ ಸಂಭಾವನೆ ಎಷ್ಟು? ಫ್ಯಾನ್ಸ್ ಗಲಾಟೆ ಬಗ್ಗೆ ರಾಜ್ ಬಿ. ಶೆಟ್ಟಿ ಹೇಳಿದ್ದೇನು?
'ಕರಾವಳಿ' ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಡೆದ ಅಭಿಮಾನಿಗಳ ಆಕ್ರೋಶದ ಕುರಿತು ನಟ ರಾಜ್ ಬಿ. ಶೆಟ್ಟಿ ಹಾಗೂ ನಿರ್ದೇಶಕ ಗುರುದತ್ ಗಾಣಿಗ ತೀವ್ರ ಬೇಸರ ಹೊರಹಾಕಿದ್ದಾರೆ. ಚಿತ್ರಕ್ಕೆ ಈ ಮಧ್ಯೆ ಚಿತ್ರದ ನಟ ಪ್ರಜ್ವಲ್ ದೇವರಾಜ್ ಕಳೆದ ಎರಡು ತಿಂಗಳಿಂದ ಚಿತ್ರತಂಡದ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.
-
'ಕರಾವಳಿ' ಸಿನಿಮಾದ ಟ್ರೇಲರ್ ಲಾಂಚ್ ವೇಳೆ ನಡೆದ ಅಭಿಮಾನಿಗಳ ಗಲಾಟೆ ಹಾಗೂ ನಟ ಪ್ರಜ್ವಲ್ ದೇವರಾಜ್ ಅಸಮಾಧಾನದ ಕುರಿತು ನಿರ್ದೇಶಕ ಗುರುದತ್ ಗಾಣಿಗ ಹಾಗೂ ನಟ ರಾಜ್ ಬಿ. ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಉದ್ದೇಶಪೂರ್ವಕವಾಗಿ ನಡೆದ ಗಲಾಟೆ ಎಂದು ಅನ್ನಿಸುತ್ತಿದೆ" ಎಂದು ಗುರುದತ್ ಗಾಣಿಗ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜ್ವಲ್ ಫೋನ್, ಮೆಸೇಜ್‌ಗೆ ಸಿಗುತ್ತಿಲ್ಲ
"ನಿನ್ನೆ ರಾತ್ರಿಯವರೆಗೂ ಪ್ರಜ್ವಲ್ ದೇವರಾಜ್ ಅವರು ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದರು. ಅವರ ಅಭಿಮಾನಿಗಳಿಗೂ ಪಾಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಇಂದು ಇಲ್ಲಿಗೆ ಬಂದು ಗಲಾಟೆ ಮಾಡಿರುವ ಹುಡುಗರು ಪ್ರಜ್ವಲ್ ಅವರ ಅಭಿಮಾನಿಗಳೇ ಆಗಿದ್ದಾರೆ" ಎಂದು ನಿರ್ದೇಶಕ ಗುರುದತ್ ಗಾಣಿಗ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಪ್ರಜ್ವಲ್ ಅವರೇ ಹೀರೋ
"ಕರಾವಳಿ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಹೆಸರೇ ಪ್ರಮುಖವಾಗಿದೆ. ರಾಜ್ ಬಿ. ಶೆಟ್ಟಿ ಅಥವಾ ಮಿತ್ರ ಅವರ ಹೆಸರುಗಳಿಲ್ಲ. ಪ್ರಜ್ವಲ್ ಅವರ ಧ್ವನಿ ಈ ಪಾತ್ರಕ್ಕೆ ಸೂಟ್ ಆಗುತ್ತಾ ಇಲ್ಲವಾ ಎಂಬ ಅನುಮಾನ ನಮಗಿತ್ತು. ಆದರೂ ಈಗಾಗಲೇ ಡಬ್ಬಿಂಗ್ ಸ್ಟುಡಿಯೋ ಬ್ಲಾಕ್ ಮಾಡಿದ್ದೇವೆ. ಟ್ರೇಲರ್ ಆದಮೇಲೆ ಡಬ್ ಮಾಡಿ ಎಂದು ಅವರಿಗೆ ಹೇಳಿದ್ದೆವು. ಆದರೆ ಅವರ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ" ಎಂದು ಗುರುದತ್ ಗಾಣಿಗ ತಿಳಿಸಿದ್ದಾರೆ.
'ಕರಾವಳಿ' ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್; ʻಮುದ್ದು ಗುಮ್ಮʼ ಹಾಡನ್ನು ಮುದ್ದಾಗಿ ಹಾಡಿದ ಸಿದ್ ಶ್ರೀರಾಮ್
ಪ್ರಜ್ವಲ್‌ಗೆ ಕೊಟ್ಟ ಸಂಭಾವನೆ ಎಷ್ಟು?
"ಕಳೆದ ಒಂದೂವರೆ-ಎರಡು ತಿಂಗಳಿಂದ ಪ್ರಜ್ವಲ್ ನಮ್ಮ ಸಂಪರ್ಕದಲ್ಲಿ ಇಲ್ಲ. ಅವರು ಬ್ಯುಸಿ ಇದ್ದಾರೆ ಎಂದು ಅವರ ಮ್ಯಾನೇಜರ್ ಹೇಳುತ್ತಿದ್ದಾರೆ. ನನ್ನ ಫೋನ್ ಹಾಗೂ ಮೆಸೇಜ್‌ಗಳಿಗೆ ಪ್ರಜ್ವಲ್ ಪ್ರತಿಕ್ರಿಯಿಸುತ್ತಿಲ್ಲ. ಈ ಚಿತ್ರಕ್ಕೆ ಪ್ರಜ್ವಲ್ ಅವರಿಗೆ 1.25 ಕೋಟಿ ರೂ. ಸಂಭಾವನೆ ಕೊಡುವ ಮಾತುಕತೆಯಾಗಿದ್ದು, ಈಗಾಗಲೇ 1 ಕೋಟಿ ರೂ. ನೀಡಲಾಗಿದೆ. ಇನ್ನು 25 ಲಕ್ಷ ರೂ. ಕೊಡುವುದು ಬಾಕಿ ಇದೆ. ಆರಂಭದಲ್ಲಿ ಈ ಸಿನಿಮಾವನ್ನು ಪೂರ್ತಿ ನೋಡಿ ಪ್ರಜ್ವಲ್ ಅವರು, ಇದು ನನ್ನ ಕೆರಿಯರ್‌ನ ಲ್ಯಾಂಡ್‌ಮಾರ್ಕ್ ಸಿನಿಮಾ ಎಂದಿದ್ದರು" ಎಂದು ಗುರುದತ್ ಗಾಣಿಗ ಹೇಳಿದ್ದಾರೆ.
"ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ನಟಿಸಿರುವುದರಿಂದ ಪ್ರಜ್ವಲ್ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಈ ಪಾತ್ರಕ್ಕೆ ದೊಡ್ಡ ಸ್ಟಾರ್ ಒಬ್ಬರು ಬರಬಹುದು ಎಂದು ನಾವು ಮೊದಲೇ ಹೇಳಿದ್ದೆವು ಮತ್ತು ಅದಕ್ಕೆ ಪ್ರಜ್ವಲ್ ಒಪ್ಪಿಕೊಂಡಿದ್ದರು" ಎಂದು ಗುರುದತ್ ಸ್ಪಷ್ಟಪಡಿಸಿದ್ದಾರೆ.
ಮನುಷ್ಯತ್ವ ಮುಖ್ಯ, ಸಿನಿಮಾಗಿಂತ ಯಾರೂ ದೊಡ್ಡವರಲ್ಲ
ಪ್ರಜ್ವಲ್ ಅಭಿಮಾನಿಗಳ ಆಕ್ರೋಶ, ಟ್ರೇಲರ್ ವಿವಾದದ ಕುರಿತು ಮಾತನಾಡಿದ ರಾಜ್ ಬಿ. ಶೆಟ್ಟಿ, ತಮಗೂ ಕಾಂಪಿಟಿಷನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ನೇರವಾಗಿ ನುಡಿದಿದ್ದಾರೆ. "ಈ ಸಿನಿಮಾಗೆ ನಾನೇನೂ ಮೊದಲ ಆಯ್ಕೆಯಾಗಿರಲಿಲ್ಲ. ಇದರಲ್ಲಿ ನಾನೊಂದು ಅತಿಥಿ ಪಾತ್ರ ಮಾಡಿದ್ದೇನಷ್ಟೇ. ನಾನು ಯಾರ ಜೊತೆಗೂ ಕಾಂಪಿಟಿಷನ್ ಮಾಡೋಕೆ ಬಂದಿಲ್ಲ. ನನ್ನ ಹೆಸರು ಪೋಸ್ಟರ್‌ನಲ್ಲಿ ಹಾಕಿಲ್ಲ ಅಂದರೂ ನನಗೆ ಬೇಜಾರಿಲ್ಲ. ನನಗಿಂತ ಸಿನಿಮಾ ದೊಡ್ಡದು" ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
MGR: ಸಹೋದರ ಪ್ರಣಾಮ್ ಚಿತ್ರದ ಮೂಲಕ ನಿರ್ಮಾಪಕನ ಪಟ್ಟ ಅಲಂಕರಿಸಿದ ಪ್ರಜ್ವಲ್; ತಂದೆ ದೇವರಾಜ್ ಖುಷಿಗೆ ಪಾರವೇ ಇಲ್ಲ!
ಕಟೌಟ್‌ಗಾಗಿ ಜಗಳ ಆಡುವ ಪರಿಸ್ಥಿತಿ ಬಂದಿಲ್ಲ
"ಇದು ಇಡೀ ಇಂಡಿಯಾ ನೋಡುವಂತಹ ಸಿನಿಮಾ ಕಥೆ. ನಾನು ಪ್ರಜ್ವಲ್ ಜೊತೆ ಒಂದು ಸಲ ಕೂತು ಮಾತಾಡಬೇಕು. ಏಕೆಂದರೆ ಎಲ್ಲದಕ್ಕಿಂತ ಮನುಷ್ಯತ್ವ ಮುಖ್ಯ. ನಮ್ಮ ಕನ್ನಡ ಇಂಡಸ್ಟ್ರಿ ಯಾಕೆ ಉದ್ದಾರ ಆಗ್ತಿಲ್ಲ ಅಂದ್ರೆ ಇಂತಹ ಸಣ್ಣತನದ ವಿಷಯಗಳೂ ಕೂಡ ಒಂದು ಕಾರಣ. ಈ ಸಿನಿಮಾದಿಂದ ಪ್ರಜ್ವಲ್ ಅವರಿಗೆ ದೊಡ್ಡ ಹೆಸರು ಬಂದರೆ ನನಗೇ ಹೆಮ್ಮೆ ಅನಿಸುತ್ತದೆ. ನನಗೆ ಕಟೌಟ್ ಹಾಕಿ ಎಂದು ನಾನು ಯಾರಿಗೂ ಹೇಳಿಲ್ಲ. ಹಾಗೇನಾದರೂ ಕಟೌಟ್‌ಗಾಗಿ ಜಗಳ ಆಡುವ ಪರಿಸ್ಥಿತಿ ಬಂದರೆ, ಅವತ್ತೇ ನಾನು ಚಿತ್ರರಂಗ ಬಿಡಬೇಕು ಅನ್ಕೋತೀನಿ" ಎಂದು ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.