ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾವೇರಿ ಜಲ ವಿವಾದ; ರೈತರ ಹೋರಾಟಕ್ಕೆ ಸಾಥ್ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ

Cauvery Water Dispute: ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಮಂಡ್ಯ ಭಾಗದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ಪ್ರಕಟಿಸಿದೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ತೊಂದರೆಯಾಗಿದೆ. ಇಡೀ ಚಿತ್ರರಂಗ ನಾಡು-ನುಡಿ, ನೆಲ-ಜಲದ ರಕ್ಷಣೆಗಾಗಿ ಪ್ರತಿಭಟನೆಗೆ ಇಳಿಯಲು ಸನ್ನದ್ಧವಾಗಿದೆ ಎಂದು ವಾಣಿಜ್ಯ ಮಂಡಳಿ ಎಚ್ಚರಿಸಿದೆ.

ಕಾವೇರಿ ನೀರಿಗಾಗಿ ರೈತರ ಹೋರಾಟ; ಫಿಲ್ಮ್‌ ಚೇಂಬರ್‌ ಹೇಳಿದ್ದೇನು?

Cauvery Water Dispute -

Avinash GR
Avinash GR Jul 30, 2026 8:55 PM

ನೆಲ, ಜಲ ಮತ್ತು ಭಾಷೆಯ ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ಕನ್ನಡ ಚಿತ್ರರಂಗವು ಸದಾ ಮುಂಚೂಣಿಯಲ್ಲಿರಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಷ್ಟಪಡಿಸಿದೆ. ಕಾವೇರಿ ನೀರಿಗಾಗಿ ಮೈಸೂರು-ಮಂಡ್ಯ ಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ಸೂಚಿಸಿದೆ.

ಅಣ್ಣಾವ್ರು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಪಯಣ

ಸಭೆಯಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ, "ನೆಲ, ಜಲ, ಭಾಷೆಗೆ ಧಕ್ಕೆಯಾಗುವ ಸನ್ನಿವೇಶ ಬಂದಾಗಲೆಲ್ಲಾ ವಾಣಿಜ್ಯ ಮಂಡಳಿಯು ರೈತರ ಪರವಾಗಿಯೇ ನಿಂತಿದೆ. ನಮಗೆ ಈ ಹಾದಿಯನ್ನು ವರನಟ ಡಾ. ರಾಜ್‌ಕುಮಾರ್ ಅವರು ಹಾಕಿಕೊಟ್ಟಿದ್ದಾರೆ. ಹಿಂದೆ ಮಹಾದಾಯಿ, ಕಳಸಾ-ಬಂಡೂರಿ ಹೋರಾಟದಲ್ಲಿ ಹುಬ್ಬಳ್ಳಿಗೆ ತೆರಳಿ ಇಡೀ ಚಿತ್ರರಂಗ ಭಾಗವಹಿಸಿತ್ತು. ಈಗ ಕಾವೇರಿ ವಿಚಾರದಲ್ಲೂ ನಾವು ಹೋರಾಟಕ್ಕೆ ಸದಾ ಸಿದ್ಧ" ಎಂದು ತಿಳಿಸಿದರು.

ಅಲ್ಲದೆ, "ಒಂದು ಕಡೆ ತೀವ್ರ ಬರಗಾಲವಿದ್ದರೆ, ಇನ್ನೊಂದು ಕಡೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಭಾಷೆ, ನೆಲ ಮತ್ತು ಜಲ ಇದ್ದರೆ ಮಾತ್ರ ನಾವೆಲ್ಲರೂ ಬದುಕಲು ಸಾಧ್ಯ" ಎಂದು ಅವರು ಹೇಳಿದರು.

ನೀರಿದ್ದಾಗ ಬಿಟ್ಟಿದ್ದೇವೆ, ಈಗ ನಮಗೇ ಕುಡಿಯಲು ನೀರಿಲ್ಲ

ಕಾವೇರಿ ನೀರಿನ ಅಭಾವದ ಕುರಿತು ಮಾತನಾಡಿದ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, "ಕಳೆದ ವರ್ಷ ಉತ್ತಮ ಮಳೆಯಾಗಿದ್ದಾಗ ನೂರಾರು ಟಿಎಂಸಿ ನೀರು ತಮಿಳುನಾಡಿಗೆ ಹರಿಯಿತು. ಪ್ರಾಧಿಕಾರ ಹೇಳಿದಂತೆ ನೀರಿದ್ದಾಗಲೆಲ್ಲಾ ಬಿಟ್ಟಿದ್ದೇವೆ. ಆದರೆ ಈ ಬಾರಿ ಮಳೆಯಾಗದೆ ರಾಜ್ಯದಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದೆ. ಇಂದು ಮೈಸೂರು-ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೂ, ಜಾನುವಾರುಗಳಿಗೂ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ರೈತರು ಹೋರಾಟ ಮಾಡುತ್ತಿದ್ದಾರೆ" ಎಂದರು.

"ರೈತ ಬಾಂಧವರು ಮತ್ತು ಕನ್ನಡಪರ ಸಂಘಟನೆಗಳು ಕೈಗೊಳ್ಳುವ ಪ್ರತಿಯೊಂದು ಹೋರಾಟದ ಹೆಜ್ಜೆಗೂ ಕನ್ನಡ ಚಿತ್ರರಂಗ ಬೆಂಬಲವಾಗಿ ನಿಲ್ಲಲಿದೆ" ಎಂದು ಭರವಸೆ ನೀಡಿದರು.

Cauvery Water Dispute: ರಾಜ್ಯಕ್ಕೆ ಮತ್ತೆ ಹಿನ್ನಡೆ; ಸಿಡಬ್ಲ್ಯೂಆರ್‌ಸಿ ಆದೇಶ ಎತ್ತಿ ಹಿಡಿದ CWMA, ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ!

ಚಿತ್ರರಂಗ ಎಂದೂ ಹಿಂದೆಟು ಹಾಕಲ್ಲ

ನಿರ್ಮಾಪಕ ಹಾಗೂ ನಟ ರಾಕ್‌ಲೈನ್ ವೆಂಕಟೇಶ್ ಮಾತನಾಡಿ, "ನಾಡು-ನುಡಿ, ನೆಲ-ಜಲದ ವಿಷಯ ಬಂದಾಗ ಚಿತ್ರರಂಗವನ್ನು ಬಂದ್ ಮಾಡಿ ಹೋರಾಟಕ್ಕೆ ಇಳಿದ ಇತಿಹಾಸ ನಮ್ಮದಾಗಿದೆ. ನಾಡು-ನುಡಿಗಾಗಿ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದ ಅಂಬರೀಶ್ ಅವರು ತಮ್ಮ ಕೇಂದ್ರ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದರು. ಅವರು ಹಾಕಿಕೊಟ್ಟ ನಾವೆಲ್ಲರೂ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ಅದರ ಎಲ್ಲಾ ಅಂಗಸಂಸ್ಥೆಗಳು ಕಟ್ಟುನಿಟ್ಟಾಗಿ ಬದ್ಧವಾಗಿರುತ್ತವೆ" ಎಂದು ಸ್ಪಷ್ಟಪಡಿಸಿದರು.