ʻಜೋಗಿʼ ಪ್ರೇಮ್ ವಿರುದ್ಧ ತಿರುಗಿಬಿದ್ದ ನೋರಾ ಫತೇಹಿ; ʻನನಗೆ ಹೇಳದೆಯೇ ಇದನ್ನೆಲ್ಲಾ ಮಾಡಿದ್ರುʼ ಎಂದ ಬಾಲಿವುಡ್ ನಟಿ
ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ..ʼ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿ ಅವರು ನಿರ್ದೇಶಕ ಪ್ರೇಮ್ ಮತ್ತು ಚಿತ್ರತಂಡದ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ. ಹಾಡಿನ ಹಿಂದಿ ವರ್ಷನ್‌ನ ಅಶ್ಲೀಲ ಸಾಹಿತ್ಯದ ಬಗ್ಗೆ ತಮಗೆ ಯಾವುದೇ ಅರಿವಿರಲಿಲ್ಲ ಮತ್ತು ತಮ್ಮ ಅನುಮತಿಯಿಲ್ಲದೆ ಈ ರೀತಿ ಚಿತ್ರೀಕರಿಸಲಾಗಿದೆ ಎಂದು ನೋರಾ ಆರೋಪಿಸಿದ್ದಾರೆ.
-
ʻಜೋಗಿʼ ಪ್ರೇಮ್ ಬರೆದಿರುವ ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ..ʼ ಹಾಡು ಈಗ ಎಂಥ ದೊಡ್ಡ ವಿವಾದಕ್ಕೆ ಕಾರಣವಾಗಿದೆ ಎಂಬುದು ಗೊತ್ತೇ ಇದೆ. ಇದೀಗ ಈ ಹಾಡಿನಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿರುವ ಬಾಲಿವುಡ್ ನಟಿ ನೋರಾ ಫತೇಹಿ ಅವರೇ ಚಿತ್ರತಂಡದ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಕುರಿತಂತೆ ಒಂದು ವಿಡಿಯೋವನ್ನು ಹಂಚಿಕೊಂಡಿರುವ ನೋರಾ ಫತೇಹಿ, "ಈ ಹಿಂದಿ ಹಾಡಿನ ಬಗ್ಗೆ ನನಗೆ ಯಾವುದೇ ಅರಿವಿರಲಿಲ್ಲ" ಎಂದು ಹೇಳಿದ್ದಾರೆ.
ನೋರಾ ಫತೇಹಿ ಹೇಳಿರುವುದೇನು?
"ಇದನ್ನು ನಾನು ಬೆಂಬಲಿಸುತ್ತೇನೆ ಎಂದು ಯಾರಾದರೂ ಭಾವಿಸದರೆ, ಅದನ್ನು ನಾನು ಇಷ್ಟಪಡುವುದಿಲ್ಲ.. ಈ ವಿಷಯದಲ್ಲಿ ನೀವು ನೀಡಿದ ಪ್ರತಿಕ್ರಿಯೆ ಮತ್ತು ಒತ್ತಡಕ್ಕೆ ಧನ್ಯವಾದಗಳು, ಇದರಿಂದಾಗಿ ಚಿತ್ರತಂಡವು ಅದೃಷ್ಟವಶಾತ್ ಆ ಹಾಡನ್ನು ಕೆಳಗಿಳಿಸಿದೆ. ಅಲ್ಲದೆ, ಈ ಹಾಡನ್ನು ಯಾರೂ ಹಂಚಿಕೊಳ್ಳಬೇಡಿ ಎಂದು ನಾನು ವಿನಂತಿಸುತ್ತೇನೆ, ಏಕೆಂದರೆ ನೀವು ಅನಗತ್ಯವಾಗಿ ಅದಕ್ಕೆ ಪ್ರಚಾರ ನೀಡಿದಂತಾಗುತ್ತದೆ" ಎಂದು ನೋರಾ ಫತೇಹಿ ಹೇಳಿದ್ದಾರೆ.
ನೋರಾ ಫತೇಹಿ ಹಂಚಿಕೊಂಡಿರುವ ವಿಡಿಯೋ
ಇದು ನಿಜಕ್ಕೂ ದುರದೃಷ್ಟಕರ ಎಂದಿದ್ದೇಕೆ ನೋರಾ?
"ಇನ್ನೊಂದು ವಿಷಯವೆಂದರೆ, ನಿಮ್ಮಲ್ಲಿ ಕೆಲವರು ಇದನ್ನು ನನ್ನ ಚಾರಿತ್ರ್ಯವನ್ನು ಹೀಯಾಳಿಸಲು ಬಳಸಿಕೊಳ್ಳುತ್ತಿರುವುದನ್ನು ನಾನು ಗಮನಿಸಿದ್ದೇನೆ.. ಇದು ನಿಜಕ್ಕೂ ದುರದೃಷ್ಟಕರ. ಇಂಥದ್ದರ ಬಗ್ಗೆ ಮುಂದಿನ ದಿನಗಳಲ್ಲಿ ನಾನು ಮತ್ತು ನನ್ನ ತಂಡ ಹೆಚ್ಚು ಜಾಗರೂಕರಾಗಿರುತ್ತೇವೆ. ಆದಾಗ್ಯೂ, ಈ ಹಿಂದಿ ಹಾಡಿನ ಬಗ್ಗೆ ನನಗೆ ಯಾವುದೇ ಅರಿವಿರಲಿಲ್ಲ, ನಾನು ಅದಕ್ಕೆ ನೃತ್ಯ ಮಾಡಿಲ್ಲ ಮತ್ತು ನನ್ನ ಚಿತ್ರಣವನ್ನು ಬಳಸಲು ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ನಾನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ" ಎಂದು ನೋರಾ ಫತೇಹಿ ತಿಳಿಸಿದ್ದಾರೆ.
"ನಾನು ಈ ಹಾಡಿನ ಚಿತ್ರೀಕರಣವನ್ನು ಮೂರು ವರ್ಷಗಳ ಹಿಂದೆ ಕನ್ನಡ ಭಾಷೆಯಲ್ಲಿ ಮಾಡಿದ್ದೆ. ಈ ಚಿತ್ರರಂಗವನ್ನು 'ಸ್ಯಾಂಡಲ್‌ವುಡ್' ಎಂದು ಕರೆಯಲಾಗುತ್ತದೆ. ಮೂರು ವರ್ಷಗಳ ಹಿಂದೆ ಈ ಹಾಡಿಗೆ ನಾನು ಒಪ್ಪಿಗೆ ನೀಡಲು ಕಾರಣ, ಇದೊಂದು ದೊಡ್ಡ ಸಿನಿಮಾ ಆಗಿತ್ತು ಮತ್ತು ಇದರಲ್ಲಿ ಸಂಜಯ್ ದತ್ ಅವರಂತಹ ದಿಗ್ಗಜ ನಟರಿದ್ದರು. ಅವರ ಜೊತೆ ಕೆಲಸ ಮಾಡಲು ಯಾರು ತಾನೇ ಬೇಡ ಎನ್ನುತ್ತಾರೆ? ಇದು 'ನಾಯಕ್ ನಹಿ ಖಲ್ ನಾಯಕ್ ಹೂ ಮೈ' ಹಾಡಿನ ರಿಮೇಕ್ ಇರಬಹುದು ಎಂದು ನಾನು ಭಾವಿಸಿದ್ದೆ" ಎಂದು ನೋರಾ ಹೇಳಿಕೊಂಡಿದ್ದಾರೆ.
Kangana Ranaut: ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!
ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ
"ಸೆಟ್‌ನಲ್ಲಿದ್ದಾಗ ಹಾಡಿನ ಅರ್ಥ ತಿಳಿಯಲು ನಾನು ನಿರ್ದೇಶಕರಿಗೆ ಕೇಳಿದ್ದೆ. ಅವರು ಹೇಳಿದ್ದನ್ನೇ ನಾನು ಪಾಲಿಸಿದ್ದೇನೆ. ಅವರು ಹಾಡನ್ನು ಅನುವಾದಿಸಿ ಹೇಳಿದಾಗ ಅದರಲ್ಲಿ ಅಸಭ್ಯ ಅಥವಾ ಅಶ್ಲೀಲ ಅನಿಸುವಂತಹದ್ದು ಯಾವುದೂ ಇರಲಿಲ್ಲ. ಆದರೆ ನನಗೆ ಕನ್ನಡ ತಿಳಿಯದ ಕಾರಣ, ಅವರು ನನಗೆ ಹೇಳಿದ್ದನ್ನೇ ನಾನು ಸಂಪೂರ್ಣವಾಗಿ ನಂಬಿದ್ದೆ. ಈಗ ಅವರು ಹಿಂದಿ ಆವೃತ್ತಿಯಲ್ಲಿ ಸೃಷ್ಟಿಸಿರುವ ಡಬ್ಬಿಂಗ್, ಹಿಂದಿ ಧ್ವನಿ ಮತ್ತು ಆ ಆಕ್ಷೇಪಾರ್ಹ ಸಾಹಿತ್ಯದ ಬಗ್ಗೆ ನನಗೆ ಅರಿವೇ ಇರಲಿಲ್ಲ. ಅವರು ನನ್ನಿಂದ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ" ಎಂದು ನೋರಾ ತಿಳಿಸಿದ್ದಾರೆ.
ನನಗೆ ತುಂಬಾ ಸಂಕಟವಾಗುತ್ತಿತ್ತು
"ಈ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದಾಗ, ನಾನು ಕನ್ನಡ ಹಾಡನ್ನು ಕೇಳಿದೆ. ನನ್ನ ಅನುಮತಿಯಿಲ್ಲದೆಯೇ ಅವರು ಆ ಸಾಹಿತ್ಯವನ್ನು ಬಳಸಿದ್ದರು. ಅಷ್ಟೇ ಅಲ್ಲದೆ, ಅಲ್ಲಿ ಎಐ (AI) ಮೂಲಕ ಸೃಷ್ಟಿಸಿದ ಚಿತ್ರವನ್ನೂ ಹಾಕಿದ್ದರು. ನಾನು ಮೊದಲೇ ಎಐ ತಂತ್ರಜ್ಞಾನದ ವಿರೋಧಿ. ಹಾಗಾಗಿ ನನಗೆ ಕಿರಿಕಿರಿ ಉಂಟಾಯಿತು. ಆದರೆ ಮಾಧ್ಯಮದವರು ಮತ್ತು ನನಗೆ ಅವಕಾಶ ನೀಡಿದ ನಿರ್ದೇಶಕರು ಎದುರಿಗಿದ್ದ ಕಾರಣ ನಾನು ಸುಮ್ಮನಿದ್ದೆ. ಒಳಗೊಳಗೆ ಇದೆಲ್ಲವನ್ನೂ ನೋಡಿ ನನಗೆ ತುಂಬಾ ಸಂಕಟವಾಗುತ್ತಿತ್ತು" ಎಂದು ನೋರಾ ಫತೇಹಿ ಬೇಸರ ವ್ಯಕ್ತಪಡಿಸಿದ್ದಾರೆ.
KD The Devil: ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್ ರಿಲೀಸ್! ನೋರಾ ಫತೇಹಿ ಭರ್ಜರಿ ಡ್ಯಾನ್ಸ್
ನಿರ್ದೇಶಕರಿಗೆ ನಾನು ಎಚ್ಚರಿಕೆ ನೀಡಿದ್ದೆ
"ನಂತರ ಅವರು ಹಿಂದಿ ಆವೃತ್ತಿಯನ್ನು ಪ್ಲೇ ಮಾಡಿದರು. ಅದನ್ನು ನೋಡಿದಾಗಲೇ, ಇದು ಗ್ಯಾರಂಟಿ ಸಮಸ್ಯೆ ತರುತ್ತದೆ ಎಂಬುದು ನನಗೆ ಅರ್ಥವಾಗಿತ್ತು. ನನಗೆ ಹಿಂದಿ ಅರ್ಥವಾಗುತ್ತದೆ, ಆದ್ದರಿಂದ ನಾನು ನಿರ್ದೇಶಕರಿಗೆ ಈ ಬಗ್ಗೆ ತಿಳಿಸಿದೆ. ಇದು ವಿರೋಧಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದೆ. ನಾನು ಈ ಪ್ರಾಜೆಕ್ಟ್‌ನಿಂದ ದೂರ ಸರಿದಿದ್ದೇನೆ. ಎಲ್ಲಿಯೂ ಇದರ ಬಗ್ಗೆ ನಾನು ಪ್ರಚಾರ ಮಾಡಲಿಲ್ಲ. ನನ್ನ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆ ಬರುತ್ತಿದೆ ಎಂದು ನಿರ್ದೇಶಕರ ತಂಡಕ್ಕೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ" ಎಂದು ನೋರಾ ತಿಳಿಸಿದ್ದಾರೆ.
ನಮ್ಮ ಅಭಿಪ್ರಾಯಕ್ಕೆ ಬೆಲೆಯೇ ಇರುವುದಿಲ್ಲ
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮಗೆ ಯಾರ ಬೆಂಬಲವೂ ಇರುವುದಿಲ್ಲ. ನಮ್ಮ ಹಿಂದೆ ಇರುವುದು ನಾವು ಮತ್ತು ನಮ್ಮ ಪ್ರೇಕ್ಷಕರು ಮಾತ್ರ. ನಮ್ಮ ಬಳಿ ಅಧಿಕಾರ ತೀರಾ ಕಡಿಮೆ. ಅದೃಷ್ಟವಶಾತ್ ಬಾಲಿವುಡ್‌ನಲ್ಲಿ ನನ್ನಂತಹ ಕಲಾವಿದರು ಧ್ವನಿ ಎತ್ತಿದಾಗ ಅದಕ್ಕೆ ಗೌರವ ಸಿಗುತ್ತದೆ ಎಂಬುದು ನನ್ನ ಅಭಿಪ್ರಾಯ. ಆದರೆ ಕೆಲವು ಕಡೆಗಳಲ್ಲಿ ನಮ್ಮ ಅಭಿಪ್ರಾಯಕ್ಕೆ ಬೆಲೆಯೇ ಇರುವುದಿಲ್ಲ. ಸಾರ್ವಜನಿಕರ ಆಕ್ರೋಶದ ಕಾರಣದಿಂದ ಅವರು ಹಿಂದಿ ಆವೃತ್ತಿಯನ್ನು ಈಗ ತೆಗೆದುಹಾಕಿದ್ದಾರೆ. ಅದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಒಂದು ವೇಳೆ ಈ ವಿಷಯ ನಿಮಗೆ ಇಷ್ಟೊಂದು ನೋವುಂಟು ಮಾಡಿದ್ದರೆ, ದಯವಿಟ್ಟು ಚಿತ್ರದ ನಿರ್ಮಾಪಕರು ಮತ್ತು ಅದನ್ನು ಸೃಷ್ಟಿಸಿದವರನ್ನು ಹೊಣೆಗಾರರನ್ನಾಗಿ ಮಾಡಿ. ಅವರ ಹೆಸರು ಮತ್ತು ಚಿತ್ರಗಳನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿ. ಆಗ ಮಾತ್ರ ಅವರಿಗೆ ಸ್ವಲ್ಪ ಭಯ ಮತ್ತು ಜವಾಬ್ದಾರಿ ಬರುತ್ತದೆ. ಕೇವಲ ಕಲಾವಿದರ ಹೆಸರು ಅಥವಾ ಚಿತ್ರಗಳನ್ನು ಗುರಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಏಕೆಂದರೆ ಅದರ ಮೇಲೆ ನಮಗೆ ಯಾವುದೇ ನಿಯಂತ್ರಣ ಇರುವುದಿಲ್ಲ" ಎಂದು ನೋರಾ ಫತೇಹಿ ತಿಳಿಸಿದ್ದಾರೆ.