Jogi Prem: ಪಾರ್ಲಿಮೆಂಟ್ ತಲುಪಿದ ʻಕೆಡಿʼ ಸಿನಿಮಾ ಹಾಡಿನ ವಿವಾದ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಏನಂದ್ರು ನೋಡಿ!
ಕೆಡಿ ಹಾಡಿನ ವಿವಾದ ಈಗ ಸಂಸತ್ತಿನ ಮೆಟ್ಟಿಲೇರಿದೆ. 'ಕೆಡಿ' ಚಿತ್ರದ ಹಿಂದಿ ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಪ್ರಶ್ನೆ ಎದ್ದಿದ್ದು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜ ಮತ್ತು ಸಂಸ್ಕೃತಿಯ ಚೌಕಟ್ಟಿನೊಳಗಿರಬೇಕು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
-
ಜೋಗಿ ಪ್ರೇಮ್ ಅವರ ʻಕೆಡಿʼ ಚಿತ್ರದ ಐಟಂ ಸಾಂಗ್ ವಿವಾದ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂದು ಹಿಂದಿ ವರ್ಷನ್ ಅನ್ನು ತೆಗೆದು ಹಾಕಲಾಗಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಕುರಿತ ಚರ್ಚೆಗೆ ಬ್ರೇಕ್ ಬಿದ್ದಿಲ್ಲ. ಅತ್ತ ಹಾಡಿನಲ್ಲಿ ಡ್ಯಾನ್ಸ್ ಮಾಡಿರುವ ನೋರಾ ಫತೇಹಿ ಕೂಡ ಪ್ರೇಮ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದಿಷ್ಟೇ ಅಲ್ಲ, ಈ ʻಸರ್ಕೆ ಸರ್ಕೆ ಚುನಾರ್ ತೇರಿ ಸರ್ಕೆʼ ಹಾಡಿನ ವಿವಾದ ಪಾರ್ಲಿಮೆಂಟ್ ಅನ್ನು ಕೂಡ ತಲುಪಿದೆ.
ಬುಧವಾರ (ಮಾ.18) ಲೋಕಸಭೆಯಲ್ಲಿ ಸಂಸದರೊಬ್ಬರು ಈ ಹಾಡಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಂತರ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, "ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಸ್ಕೃತಿ ಮತ್ತು ಸಮಾಜದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣವಾದುದಲ್ಲ ಮತ್ತು ಅದು ತನ್ನದೇ ಆದ ಕೆಲವು ನಿಬಂಧನೆಗಳೊಂದಿಗೆ ಬರುತ್ತದೆ" ಎಂದು ಹೇಳಿದ್ದಾರೆ.
KD The Devil: ಕೆಡಿ ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಸಾಂಗ್ ರಿಲೀಸ್! ನೋರಾ ಫತೇಹಿ ಭರ್ಜರಿ ಡ್ಯಾನ್ಸ್
"ಸಂಸದರು ಉಲ್ಲೇಖಿಸಿದ ಹಾಡನ್ನು ಈಗಾಗಲೇ ನಿಷೇಧಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಿಮ್ಮ ಮೂಲಕ ನಾನು ಇಡೀ ಸದನಕ್ಕೆ ಸ್ಪಷ್ಟವಾಗಿ ತಿಳಿಸಲು ಬಯಸುತ್ತೇನೆ. ಭಾರತದ ಸಂವಿಧಾನ ಶಿಲ್ಪಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೇರಿರುವ ಸಮಂಜಸವಾದ ನಿರ್ಬಂಧಗಳನ್ನು ನಾವು ಪಾಲಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವು ಅನಿಯಮಿತವಾಗಿರಲು ಸಾಧ್ಯವಿಲ್ಲ. ಅದು ಸಮಾಜದ ಸಂದರ್ಭಕ್ಕೆ ಅನುಗುಣವಾಗಿರಬೇಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಿದೆ
"ಯಾವುದೇ ಕಲೆಯಾಗಲಿ, ಸಂಸ್ಕೃತಿಯ ಚೌಕಟ್ಟಿನಲ್ಲಿರಬೇಕು. ಇಂದು ಡಿಜಿಟಲ್ ಮಾಧ್ಯಮಗಳ ಮೂಲಕ ವಿಷಯಗಳು ವೇಗವಾಗಿ ಹರಡುತ್ತಿರುವ ಕಾಲದಲ್ಲಿ, ಸಮಾಜದ ರಕ್ಷಣೆಗಾಗಿ, ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ಸಮಾಜದ ವಂಚಿತ ವರ್ಗಗಳ ರಕ್ಷಣೆಗಾಗಿ ಸರ್ಕಾರವು ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಸಿದ್ಧವಾಗಿದೆ" ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ನೋರಾ ಫತೇಹಿಯಿಂದಲೂ ಆಕ್ರೋಶ
'ಕೆಡಿ: ದಿ ಡೆವಿಲ್' (KD: The Devil) ಚಿತ್ರದ ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ಹಿಂದಿ ವರ್ಷನ್ ʻಸರ್ಕೆ ಸರ್ಕೆ ಚುನಾರ್ ತೇರಿ ಸರ್ಕೆʼ ಹಾಡು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ನೋರಾ ಫತೇಹಿ ಹೆಜ್ಜೆ ಹಾಕಿರುವ ಈ ಹಾಡಿನ ಹಿಂದಿ ವರ್ಷನ್ ಅನ್ನು ಈಗಾಗಲೇ ತೆಗೆದು ಹಾಕಲಾಗಿದೆ. ಸಾಹಿತ್ಯವು ಅಶ್ಲೀಲತೆಯಿಂದ ಕೂಡಿದೆ ಮತ್ತು ನೃತ್ಯ ಸಂಯೋಜನೆಯು ಅಸಭ್ಯವಾಗಿದೆ ಎಂಬ ಕಾರಣಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕರು ಈ ಹಾಡಿನ ಬರವಣಿಗೆಯನ್ನು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಬಳಕೆದಾರರು ಈ ಹಾಡು ಸಮಾಜಕ್ಕೆ ಸೂಕ್ತವಲ್ಲ ಎಂದು ಆಕ್ರೋಶ ಕೂಡ ಹೊರಹಾಕಿದ್ದರು. ಸ್ವತಃ ನೋರಾ ಫತೇಹಿ ಅವರೇ ನಿರ್ದೇಶಕ ಪ್ರೇಮ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ನನಗೆ ಹೇಳಿದ್ದೇ ಒಂದು, ಚಿತ್ರತಂಡ ಮಾಡಿದ್ದ ಇನ್ನೊಂದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.