ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯೂಟ್ಯೂಬರ್‌ಗಳ ಕಾಟಕ್ಕೆ ತತ್ತರಿಸಿಹೋದ ಮಲಯಾಳಂ ನಟಿ ರೇಖಾ ರತೀಶ್; ಕೇರಳ ಸಿಎಂಗೆ ಮಾಡಿದ ಮನವಿ ಏನು?

Rekha Ratheesh News: ಮಲಯಾಳಂ ನಟಿ ರೇಖಾ ರತೀಶ್ ಅವರು ತಮ್ಮ ಬಗ್ಗೆ ಅವಹೇಳನಕಾರಿ ಥಂಬ್‌ನೇಲ್‌ಗಳನ್ನು ಬಳಸಿ ವಿಡಿಯೋ ಮಾಡುತ್ತಿರುವ ಯೂಟ್ಯೂಬರ್‌ಗಳ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ದೂರು ನೀಡಿದ್ದಾರೆ. ಸಿಂಗಲ್‌ ಪೇರೆಂಟ್‌ ಆಗಿ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿರುವ ನನಗೆ ಈ ಯೂಟ್ಯೂಬ್ ಚಾನೆಲ್‌ಗಳಿಂದ ತೀವ್ರ ಮಾನಸಿಕ ಹಿಂಸೆ ಅಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ʻನನ್ನನ್ನು ಬದುಕಲು ಬಿಡಿʼ; ಯೂಟ್ಯೂಬರ್‌ಗಳಿಗೆ ನಟಿ ರೇಖಾ ರತೀಶ್ ಟಾರ್ಗೆಟ್‌?

-

Avinash GR
Avinash GR Feb 16, 2026 10:24 PM

ಮಲಯಾಳಂ ಕಿರುತೆರೆ ನಟಿ ರೇಖಾ ರತೀಶ್ ಅವರು ತಾವು ಎದುರಿಸುತ್ತಿರುವ ಸೈಬರ್ ಬುಲ್ಲಿಂಗ್ (Cyberbullying) ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಆಘಾತಕಾರಿ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. ಸೆಲೆಬ್ರಿಟಿಗಳನ್ನೇ ಗುರಿಯಾಗಿಸಿಕೊಂಡು, ಅವರ ಬಗ್ಗೆ ಅವಹೇಳನಕಾರಿ ವಿಡಿಯೋ ಕಂಟೆಂಟ್‌ ಹಾಕುವ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ರೇಖಾ ರತೀಶ್ ಮನವಿ ಮಾಡಿದ್ದಾರೆ.

ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ?

"ಕೇರಳ ಸರ್ಕಾರ ಮತ್ತು ಸಿಎಂ ಪಿಣರಾಯಿ ವಿಜಯನ್ ಸರ್, ನಾನು ರೇಖಾ ರತೀಶ್ ಅಂತ.. ನಟಿಯಾಗಿ ಗುರುತಿಸಿಕೊಂಡಿದ್ದೇನೆ. ಕಳೆದ 7- 8 ತಿಂಗಳಿಂದ ನನಗೆ ಯಾವುದೇ ಕೆಲಸವಿಲ್ಲ. ಈ ಮಧ್ಯೆ ಕಳೆದ 2-3 ತಿಂಗಳಿಂದ ಕೆಲ ಯೂಟ್ಯೂಬ್ ಚಾನೆಲ್‌ಗಳು ನನ್ನ ಬಗ್ಗೆ ಅಸಭ್ಯ ಶೀರ್ಷಿಕೆಗಳು ಮತ್ತು ಥಂಬ್‌ನೇಲ್‌ಗಳನ್ನು ಕೊಟ್ಟುಕೊಂಡು ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿವೆ. ಯೂಟ್ಯೂಬರ್‌ಗಳು ನನ್ನನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ನಾನು ಸಿಂಗಲ್‌ ಪೇರೆಂಟ್‌ ಆಗಿದ್ದೇನೆ. ನನ್ನ ಕುಟುಂಬವನ್ನು ನಡೆಸಲು ಕಷ್ಟಪಡುತ್ತಿದ್ದೇನೆ. ಆದರೆ ಯೂಟ್ಯೂಬರ್‌ಗಳು ನನ್ನ ಮೇಲೆ ವಿಪರೀತ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ನನಗಂತೂ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ" ಎಂದು ಗೋಳು ತೋಡಿಕೊಂಡಿದ್ದಾರೆ.

ಪರೋಕ್ಷವಾಗಿ ಸಾವಿನ ಬಗ್ಗೆ ಮಾತನಾಡಿದ್ರಾ ಈ ನಟಿ?

"ಅನೇಕರು, ಅದರಲ್ಲೂ ವಿಶೇಷವಾಗಿ ಸಿನಿಮಾರಂಗದವರು, ಇಂತಹ ಯೂಟ್ಯೂಬರ್‌ಗಳಿಂದಾಗಿ ಜೀವ ಕಳೆದುಕೊಂಡಿದ್ದಾರೆ. ನಾನು ಈ ವಿಡಿಯೋ ಮಾಡುತ್ತಿರುವುದಕ್ಕೆ ಕಾರಣ ಏನೆಂದರೆ, ಮುಂದೆ ನನಗೆ ಏನಾದರೂ ಆದರೆ, ಅದಕ್ಕೆ ಕಾರಣವೇನೆಂದು ಈ ಮೂಲಕ ಎಲ್ಲರಿಗೂ ತಿಳಿಯಲಿ. ಇತರರ ಜೀವನವನ್ನು ಶೋಷಿಸುವ ಆ ಯೂಟ್ಯೂಬರ್‌ಗಳೇ ಇದಕ್ಕೆ ಕಾರಣ. ಇದು ನನ್ನೊಂದಿಗೆ ಕೊನೆಗೊಳ್ಳಲಿ. ದಯವಿಟ್ಟು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ" ಎಂದು ರೇಖಾ ಮನವಿ ಮಾಡಿದ್ದಾರೆ.

ರೇಖಾ ರತೀಶ್‌ ಅವರ ವಿಡಿಯೋ

ರೇಖಾ ರತೀಶ್‌ ಅವರ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಅನೇಕ ಕಿರುತೆರೆ ಕಲಾವಿದರು ಬೆಂಬಲಕ್ಕೆ ಬಂದಿದ್ದಾರೆ. ಮನೀಷಾ, ಸೌಪರ್ಣಿಕಾ, ಆರತಿ ಸೋಮನ್ ಸೇರಿದಂತೆ ರೇಖಾ ರತೀಶ್‌ ಅವರ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. "ರೇಖಾ ಅಕ್ಕ, ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಅಕ್ಕ, ನೀವು ಧೈರ್ಯವಾಗಿರಿ ಮತ್ತು ಯಾವಾಗಲೂ ಇರುವಂತೆ ಈಗಲೂ ಗಟ್ಟಿ ಹೆಣ್ಣಾಗಿ ಮುಂದುವರಿಯಿರಿ" ಎಂದು ನಟಿ ಆರತಿ ಸೋಮನ್ ಹೇಳಿದ್ದಾರೆ.

ಅಂದಹಾಗೆ, ರೇಖಾ ರತೀಶ್ ಅವರು ಮಲಯಾಳಂ ಕಿರುತೆರೆಯ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. 'ಪರಸ್ಪರಂ' ಧಾರಾವಾಹಿಯ ಮೂಲಕ ಹೆಚ್ಚು ಫೇಮಸ್‌ ಆದ ಅವರು, 'ಸಸ್ನೇಹಂ', 'ಪೂಕ್ಕಲಂ ವರವಾಯಿ' ಮುಂತಾದ ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.