ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊದಲ ಬಾರಿಗೆ ಸಿನಿಮಾವೊಂದನ್ನ ನಿರ್ಮಿಸಿ, ನಿರ್ದೇಶಿಸಿದ ಹಿರಿಯ ಹಾಸ್ಯ ನಟ ಮೂಗು ಸುರೇಶ್; ಇದು ತಂದೆ-ಮಗನ ಬಾಂಧವ್ಯದ ಕಥೆ

ಮೂರು ದಶಕಗಳ ಕಾಲ ಹಾಸ್ಯ ನಟನಾಗಿ ರಂಜಿಸಿದ ಎಂ.ಎನ್. ಸುರೇಶ್ (ಮೂಗು ಸುರೇಶ್), ಇದೀಗ ಚೊಚ್ಚಲ ಬಾರಿಗೆ 'ಕ್ಷಮೆಯಿರಲಿ ತಂದೆ' ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೇರೆಯವರ ಹಣವನ್ನು ರಿಸ್ಕ್‌ಗೆ ಒಡ್ಡದೆ, ತಮ್ಮ ಜೀವನದ ಇಡೀ ಗಳಿಕೆಯನ್ನೇ ಹೂಡಿಕೆ ಮಾಡಿ ಈ ಸಿನಿಮಾವನ್ನು ಅವರು ಮಾಡಿದ್ದಾರೆ.

ʻಕ್ಷಮೆಯಿರಲಿ ತಂದೆʼ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ ನಟ ಮೂಗು ಸುರೇಶ್

-

Avinash GR
Avinash GR May 27, 2026 8:24 PM

ಕನ್ನಡ ಚಿತ್ರರಂಗ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಕಳೆದ ಮೂರು ದಶಕಗಳಿಂದ ತಮ್ಮ ವಿಶಿಷ್ಟ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಹಿರಿಯ ಹಾಸ್ಯ ನಟ ಎಂ.ಎನ್. ಸುರೇಶ್ (ಮೂಗು ಸುರೇಶ್), ಈಗ ಚಿತ್ರರಂಗದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಪೂರ್ಣ ಪ್ರಮಾಣದ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ತಮ್ಮ ಚೊಚ್ಚಲ ಸಿನಿಮಾಗೆ ‘ಕ್ಷಮೆಯಿರಲಿ ತಂದೆ’ ಎಂದು ಹೆಸರಿಟ್ಟಿದ್ದಾರೆ.

ಮೋಷನ್ ಪೋಸ್ಟರ್, ಟ್ರೇಲರ್ ರಿಲೀಸ್

ಈಗಾಗಲೇ ಚಿತ್ರೀಕರಣದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಕೊಂಡಿರುವ ಈ ಚಿತ್ರದ ಆಕರ್ಷಕ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಇತ್ತೀಚೆಗಷ್ಟೇ ರಿಲೀಸ್‌ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ಮೇಕಪ್ ರಾಮಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮೂಗು ಸುರೇಶ್ ಅವರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ.

Kamal Haasan: ಕಮಲ್‌ ಹಾಸನ್‌ಗೆ ಕನ್ನಡದ ಬಗ್ಗೆ ಅರಿವಿಲ್ಲ: ನಟ ಶ್ರೀನಾಥ್, ನಾಗತಿಹಳ್ಳಿ ಚಂದ್ರಶೇಖರ್ ತಿರುಗೇಟು

ಒಟ್ಟಿಗೆ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದೇಕೆ?

ಈ ಕುರಿತು ಮಾತನಾಡಿದ ಎಂ.ಎನ್. ಸುರೇಶ್, "ಈ ಹಿಂದೆ ನಾನು ಕೆಲವು ಸಿನಿಮಾಗಳಿಗೆ ಸಹ-ನಿರ್ಮಾಪಕನಾಗಿ ಕೆಲಸ ಮಾಡಿದ್ದೆ. ಆದರೆ ಸ್ವತಂತ್ರವಾಗಿ ನಿರ್ದೇಶನ ಮಾಡುವ ಯಾವುದೇ ಯೋಚನೆ ನನಗಿರಲಿಲ್ಲ. ನನ್ನ ಕೆಲಸದ ಶೈಲಿಯನ್ನು ಹತ್ತಿರದಿಂದ ನೋಡಿದ್ದ ಆಪ್ತ ಸ್ನೇಹಿತರು ನೀವೇ ಡೈರೆಕ್ಷನ್ ಮಾಡಿ ಎಂದು ಧೈರ್ಯ ತುಂಬಿದರು. ಮೊದಲ ಬಾರಿ ನಿರ್ದೇಶನ ಮಾಡುತ್ತಿರುವುದರಿಂದ ಬೇರೆಯವರ ಹಣ ಹಾಕಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ನಿರ್ಧರಿಸಿ, ನನ್ನ ಇಡೀ ಜೀವನದಲ್ಲಿ ನಾನು ಕಷ್ಟಪಟ್ಟು ಕೂಡಿಟ್ಟಿದ್ದ ನನ್ನ ಹಣವನ್ನೇ ಈ ಚಿತ್ರಕ್ಕೆ ಬಂಡವಾಳವಾಗಿ ಹೂಡಿದ್ದೇನೆ. ಇದಕ್ಕೆ ನನ್ನ ಕುಟುಂಬದವರು ಸಂಪೂರ್ಣ ಬೆಂಬಲ ನೀಡಿದ್ದಾರೆ" ಎಂದು ಹೇಳುತ್ತಾರೆ.

ಇದು ತಂದೆ-ಮಗನ ಬಾಂಧವ್ಯದ ಕಥೆ

ಹರೀಶ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದು, ಶೀರ್ಷಿಕೆಯೇ ಹೇಳುವಂತೆ ಇದು ಇಂದಿನ ತಲೆಮಾರಿನ ತಂದೆ ಮತ್ತು ಮಗನ ನಡುವಿನ ಬಾಂಧವ್ಯ, ಭಾವನಾತ್ಮಕ ಒಳಸುಳಿಗಳನ್ನು ಹೊಂದಿರುವ ಕೌಟುಂಬಿಕ ಕಥಾಹಂದರವಾಗಿದೆ. ಚಿತ್ರದಲ್ಲಿ ಮೂಗು ಸುರೇಶ್ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಉಳಿದಂತೆ ಮಂಜುನಾಥ್ ಹೆಗ್ಡೆ, ರೇಣುಕಾಬಾಲಿ, ಶ್ರೀಮಂತ ಹಾಗೂ ವಿನ್ಯಾ ಶೆಟ್ಟಿ ಮುಂತಾದ ಪ್ರತಿಭಾವಂತರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಪುಣ್ಯೇಶ್ ಕುಮಾರ್ ಸಂಗೀತ ನೀಡಿದ್ದು, ಸೂರ್ಯಕಾಂತ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಅವರ ಸಂಕಲನವಿದೆ. ಅಹಲ್ಯ ಸುರೇಶ್ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕಿಯಾಗಿ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾವು ಜೂನ್ 12 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.