ನಂಬಿಕೆಯ ಸುತ್ತ ಹೊಸೆಯಲ್ಪಟ್ಟ ವಿಶಿಷ್ಟ ಪ್ರೇಮಕಥೆ; ಶೂಟಿಂಗ್ ಮುಗಿಸಿದ ರಂಗಭೂಮಿ ಕಲಾವಿದರ ʻಲವ್ ಸೀಸನ್ಸ್ʼ ಸಿನಿಮಾ
ನವಿರು ಪ್ರೇಮಕಥೆಯ ಎಳೆ ಇರುವ ಲವ್ ಸೀಸನ್ಸ್ ಸಿನಿಮಾವು ಚಿತ್ರೀಕರಣ ಪೂರೈಸಿದೆ. ರಂಗಭೂಮಿ ಹಿನ್ನೆಲೆಯ ಕೃತ್ವಿಕ್ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ 'ನಟನಾ' ಸಂಸ್ಥೆಯ ಮುಕುಂದ ರಾಮಸ್ವಾಮಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಗಲ್ಲಿಗಳ ನೈಜ ಕಥೆ ಈ ಚಿತ್ರದಲ್ಲಿದ್ದು, ರಂಗಭೂಮಿಯ ದಿಗ್ಗಜ ಕಲಾವಿದರ ದಂಡೇ ಚಿತ್ರದಲ್ಲಿದೆ.
-
ನವಿರು ಪ್ರೇಮದ ಎಳೆಯನ್ನು ಇಟ್ಟುಕೊಂಡು ಪ್ರತಿಯೊಬ್ಬರ ಬದುಕಿಗೆ ಹತ್ತಿರವಾಗುವಂತಹ ಕಥಾನಕವನ್ನು ಹೊತ್ತು ಬರುತ್ತಿದೆ 'ಲವ್ ಸೀಸನ್ಸ್' ಸಿನಿಮಾ. ರಂಗಭೂಮಿ ಹಿನ್ನೆಲೆಯ ಪ್ರತಿಭಾವಂತ ನಿರ್ದೇಶಕ ಕೃತ್ವಿಕ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರವು ಇತ್ತೀಚೆಗಷ್ಟೇ ತನ್ನ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿ ಆಗಿದೆ.
ಗಲ್ಲಿಯ ಕಥೆಗೆ ರಂಗಭೂಮಿಯ ಕಳೆ
ಸಾಮಾನ್ಯವಾಗಿ ಸಿನಿಮಾ ಜಗತ್ತಿನಲ್ಲಿ ಮಣ್ಣಿನ ವಾಸನೆಯ ಕಥೆಗಳು ಹೆಚ್ಚು ಸದ್ದು ಮಾಡುತ್ತವೆ. ಆದರೆ ನಿರ್ದೇಶಕ ಕೃತ್ವಿಕ್ ಅವರ ಪ್ರಕಾರ, 'ಲವ್ ಸೀಸನ್ಸ್' ನಮ್ಮ ಕಣ್ಣ ಮುಂದೆಯೇ ಇರುವ, ಆದರೆ ನಮಗೆ ಕಾಣದಂತಿರುವ ಗಲ್ಲಿ ಗಲ್ಲಿಗಳ ನೈಜ ಕಥೆ. ಕಳೆದ ಹತ್ತು ವರ್ಷಗಳಿಂದ ರಂಗಭೂಮಿ ಮತ್ತು ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಇವರು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಬಹುತೇಕ ತಾಂತ್ರಿಕ ವರ್ಗ ಮತ್ತು ನಟರು ರಂಗಭೂಮಿಯಿಂದ ಬಂದವರೇ ಆಗಿರುವುದು ವಿಶೇಷ.
Sadhu Kokila: ನಟ ಸಾಧು ಕೋಕಿಲ, ಮಂಡ್ಯ ರಮೇಶ್‌ಗೆ ಬಿಗ್ ರಿಲೀಫ್: ಲೈಂಗಿಕ ದೌರ್ಜನ್ಯ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಮಂಡ್ಯ ರಮೇಶ್ ಅವರ 'ನಟನಾ' ಸಂಸ್ಥೆಯಲ್ಲಿ ತರಬೇತಿ ಪಡೆದ ಮುಕುಂದ ರಾಮಸ್ವಾಮಿ ಈ ಚಿತ್ರದ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯರಾಗಿ ದಿಯಾ ಕೀರ್ತಿ, ಚಂದನ ಗೌಡ ಮತ್ತು ಶ್ವೇತಾ ಕೊಗ್ಲೂರ್ ಸಾಥ್ ನೀಡಿದ್ದಾರೆ. ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿ ಎನ್.ಆರ್ ಮಂಜುನಾಥ (ನೀಲೇರಿ) ಅವರು ಬಂಡವಾಳ ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಸಂಗೀತವಿದ್ದು, ಕೆ. ಕಲ್ಯಾಣ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಅವರ ಸಂಕಲನ ಮತ್ತು ಭಜರಂಗಿ ಮೋಹನ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.
'ನಂಬಿಕೆ' ಎನ್ನುವ ಚುಂಬಕ ಶಕ್ತಿ
ಇಂದಿನ ಕಾಲಘಟ್ಟದಲ್ಲಿ ಒಬ್ಬರನ್ನೊಬ್ಬರು ನಂಬುವುದು ಅತಿ ದೊಡ್ಡ ಸವಾಲು. ಅಂತಹ ಕಠಿಣ ಕಾಲಮಾನದಲ್ಲಿ 'ನಂಬಿಕೆ' ಎನ್ನುವ ಚುಂಬಕ ಶಕ್ತಿ ಹಾಗೂ ಪ್ರೇಮದ ಪವಿತ್ರ ಸಂಬಂಧದ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆಯಂತೆ. "ನಂಬಿಕೆಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ವಿಶಿಷ್ಟ ಕಥೆಯೇ ಈ ಲವ್ ಸೀಸನ್ಸ್" ಅಂತ ಚಿತ್ರತಂಡ ಹೇಳಿಕೊಂಡಿದೆ. ಬೆಂಗಳೂರಿನ ವಿವಿಧ ಆಯಾಮಗಳನ್ನು ತೋರಿಸುವ ಉದ್ದೇಶದಿಂದ ನಗರದ ಹಲವು ಏರಿಯಾಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆಯಂತೆ.