ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಲವ್ ಸೀಸನ್ಸ್ʼ ಚಿತ್ರದ ಹಾಡುಗಳಿಗೆ ಸಖತ್‌ ರೆಸ್ಪಾನ್ಸ್;‌ ಕೆ. ಕಲ್ಯಾಣ್‌ ಜೊತೆ ಖುಷಿ ಹಂಚಿಕೊಂಡ ಚಿತ್ರತಂಡ

ರಂಗಭೂಮಿ ಪ್ರತಿಭೆಗಳ ಸಂಗಮವಾಗಿರುವ, ಕೃತ್ವಿಕ್ ನಿರ್ದೇಶನದ ‘ಲವ್ ಸೀಸನ್ಸ್’ ಸಿನಿಮಾ ಇದೇ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದ ಮೂರು ಹಾಡುಗಳು ಈಗಾಗಲೇ ಭಾರಿ ಯಶಸ್ಸು ಕಂಡಿದ್ದು, ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಈ ಸಂಭ್ರಮವನ್ನು ಹಂಚಿಕೊಂಡಿದೆ.

ಜುಲೈ 3ಕ್ಕೆ ‘ಲವ್ ಸೀಸನ್ಸ್’ ಧಮಾಕಾ; ಬಿಡುಗಡೆಗೂ ಮುನ್ನವೇ ಹಾಡುಗಳು ಹಿಟ್

-

Avinash GR
Avinash GR Jun 17, 2026 4:40 PM

ನೂತನ ಪ್ರತಿಭೆಗಳೇ ಸಿನಿತಂಡದ ಶಕ್ತಿಯಾಗಿರುವ, ಕೃತ್ವಿಕ್ ನಿರ್ದೇಶನದ ‘ಲವ್ ಸೀಸನ್ಸ್’ ಸಿನಿಮಾ ಇದೇ ಜುಲೈ 3ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಬಿಡುಗಡೆಗೆ ಮುನ್ನವೇ ಚಿತ್ರದ ಮೂರು ಹಾಡುಗಳಿಗೆ ಕೇಳುಗರಿಂದ ಭರಪೂರ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ಯಶಸ್ಸಿನ ಖುಷಿಯನ್ನು ಚಿತ್ರತಂಡ ಪತ್ರಿಕಾಗೋಷ್ಠಿಯ ಮೂಲಕ ಹಂಚಿಕೊಂಡಿದೆ. ಸಂಗೀತ ನಿರ್ದೇಶಕರು, ಗಾಯಕ-ಗಾಯಕಿಯರು ಹಾಗೂ ತಾಂತ್ರಿಕ ವರ್ಗದವರ ಸಮ್ಮುಖದಲ್ಲಿ ಚಿತ್ರತಂಡ ಹಾಡುಗಳ ಗೆಲುವಿನ ಸಿಹಿಯನ್ನು ಸಂಭ್ರಮಿಸಿದೆ.

ಹಾಡುಗಳೇ ಸಿನಿಮಾದ ಆಮಂತ್ರಣ ಪತ್ರಿಕೆ

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಿರಿಯ ಗೀತಸಾಹಿತಿ ಕೆ. ಕಲ್ಯಾಣ್ ಮಾತನಾಡಿ, "ಹಾಡುಗಳು ಯಾವತ್ತಿಗೂ ಚಿತ್ರವೊಂದರ ಆಮಂತ್ರಣ ಪತ್ರಿಕೆಯಂತೆ ಕೆಲಸ ಮಾಡುತ್ತವೆ. ಹಿಂದೆಲ್ಲಾ ಆಡಿಯೋ ರಿಲೀಸ್ ಮೂಲಕವೇ ಸಿನಿಮಾ ತಲುಪಿಸುವ ಟ್ರೆಂಡ್ ಇತ್ತು, ಈಗ ಕಾಲ ಬದಲಾಗಿದೆ. ಈ ಬದಲಾವಣೆಯ ನಡುವೆಯೂ ಸಂಗೀತ ನಿರ್ದೇಶಕ ವೀರ್ ಸಮರ್ಥ್ ನೆನಪಿನಲ್ಲಿ ಉಳಿಯುವಂತಹ ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಆರಂಭದಲ್ಲಿ ವೀರ್ ಸಮರ್ಥ್ ಬಿಟ್ಟರೆ ಬೇರೆ ಯಾರ ಮುಖ ಪರಿಚಯವೂ ನನಗಿರಲಿಲ್ಲ. ಆದರೆ, ಇಡೀ ಪ್ರತಿಭಾನ್ವಿತ ತಂಡ ಒಂದಾಗಿ ಸೃಷ್ಟಿಸಿರುವ ಈ ಹಾಡುಗಳ ಯಶಸ್ಸು ತುಂಬು ಖುಷಿ ನೀಡಿದೆ" ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

Cult Movie Review: ʻಸಾರಾಯಿ ಸೀಸೆಯಲಿ ನನ್ನ ದೇವಿ ಕಾಣುವಳುʼ ಎನ್ನುವ ಭಗ್ನಪ್ರೇಮಿಯೊಬ್ಬನ ʼಕಲ್ಟ್‌ʼ ಲವ್‌ ಸ್ಟೋರಿ

ಇದು ಗಲ್ಲಿ-ಗಲ್ಲಿಗಳ ನೈಜ ಕಥೆ

ಸಿನಿಮಾ ಜಗತ್ತಿನಲ್ಲಿ ಹೆಚ್ಚಾಗಿ ಮಣ್ಣಿನ ವಾಸನೆಯ ಕಥೆಗಳು ಸದ್ದು ಮಾಡುತ್ತವೆ. ಆದರೆ, ನಿರ್ದೇಶಕ ಕೃತ್ವಿಕ್ ಪ್ರಕಾರ, ‘ಲವ್ ಸೀಸನ್ಸ್’ ನಮ್ಮ ಕಣ್ಣ ಮುಂದೆಯೇ ಇರುವ, ಆದರೆ ನಮಗೆ ಕಾಣದಂತಿರುವ ಗಲ್ಲಿ-ಗಲ್ಲಿಗಳ ನೈಜ ಪ್ರೇಮ ಕಥೆಯಾಗಿದೆ. ಕಳೆದ ಹತ್ತು ವರ್ಷಗಳಿಂದ ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಕೃತ್ವಿಕ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಬಹುತೇಕ ನಟರು ಮತ್ತು ತಾಂತ್ರಿಕ ವರ್ಗದವರು ರಂಗಭೂಮಿ ಹಿನ್ನೆಲೆಯವರೇ ಆಗಿರುವುದು ಚಿತ್ರದ ಮತ್ತೊಂದು ವಿಶೇಷತೆ.

ರಂಗಭೂಮಿ ಪ್ರತಿಭೆಗಳ ಸಂಗಮ

ಮಂಡ್ಯ ರಮೇಶ್ ಅವರ 'ನಟನಾ' ಸಂಸ್ಥೆಯಲ್ಲಿ ತರಬೇತಿ ಪಡೆದ ಮುಕುಂದ ರಾಮಸ್ವಾಮಿ ಈ ಚಿತ್ರದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯರಾಗಿ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರ್ ಸಾಥ್ ನೀಡಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ‘ಕಾಮಿಡಿ ಕಿಲಾಡಿಗಳು’ ಸದಾನಂದ, ಹುಲಿ ಕಾರ್ತಿಕ್ ಹಾಗೂ ಬೇಬಿ ರೀತು ಸಿಂಗ್ ಒಳಗೊಂಡ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

ಎನ್.ಆರ್ ಮಂಜುನಾಥ್ (ನೀಲೇರಿ) ಅವರು ‘ಎನ್.ಆರ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡಿದ್ದು, ಕೆ. ಕಲ್ಯಾಣ್, ಪ್ರಮೋದ್ ಮರವಂತೆ, ಸಾಯಿ ಸರ್ವೇಶ್ ಅವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ ಮಾಡಿದ್ದಾರೆ.