ಗಂಭೀರ ನರಗಳ ಸಮಸ್ಯೆಯಿಂದ ಬಳಲುತ್ತಿರುವ ಗಾಯಕ ಸೋನು ನಿಗಮ್; ಇಂಥ ಪರಿಸ್ಥಿತಿಯಲ್ಲೂ ಮುಂಬೈ ಲೈವ್ ಕಾನ್ಸರ್ಟ್‌ಗೆ ಸಜ್ಜು!
ಖ್ಯಾತ ಗಾಯಕ ಸೋನು ನಿಗಮ್ ಅವರು 'ಪಿಂಚ್ಡ್ ನರ್ವ್' (ನರಗಳ ಮೇಲಿನ ಒತ್ತಡ) ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈ-ಡೋಸ್ ಮಾತ್ರೆಗಳಿಂದಾಗಿ ಅವರ ಧ್ವನಿಯಲ್ಲಿ ಏರುಪೇರಾಗಿದ್ದರೂ, ಮುಂಬೈನಲ್ಲಿ ನಿಗದಿಯಾಗಿರುವ ಬೃಹತ್ ಲೈವ್ ಕಾನ್ಸರ್ಟ್‌ನಲ್ಲಿ ಹಾಡುವುದಾಗಿ ಅಭಿಮಾನಿಗಳಿಗಾಗಿ ಭರವಸೆ ನೀಡಿದ್ದಾರೆ.
-
ಗಾಯಕ ಸೋನು ನಿಗಮ್ ಅವರು ತಮಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯೊಂದರ ಬಗ್ಗೆ ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಸೋನು, "ನನ್ನ ನರಗಳು ಕತ್ತರಿಗೆ (Pinched nerve) ಸಿಕ್ಕಿದಂತಾಗಿವೆ, ಅವುಗಳ ಮೇಲೆ ಒತ್ತಡ ಬಿದ್ದಿದೆ. ನಾನು ಒಂದು ವಾರದಿಂದ ಎಂಆರ್‌ಐ (MRI) ಮತ್ತು ಸಿಟಿ (CT) ಸ್ಕ್ಯಾನ್‌ಗಳನ್ನು ಮಾಡಿಸುತ್ತಿದ್ದೇನೆ. ಸಾಕಷ್ಟು ಔಷಧಿಗಳನ್ನೂ ತೆಗೆದುಕೊಳ್ಳುತ್ತಿದ್ದೇನೆ" ಎಂದಿದ್ದಾರೆ.
ನಿರಂತರ ಚಿಕಿತ್ಸೆ ಪಡೆಯುತ್ತಿರುವ ಸೋನು
ಈ ಚಿಕಿತ್ಸೆಯ ಪ್ರಕ್ರಿಯೆಯು ಇದುವರೆಗೆ ಎಷ್ಟು ಕಷ್ಟಕರವಾಗಿತ್ತು ಎಂಬುದರ ಕುರಿತು ಮಾತನಾಡಿರುವ ಸೋನು ನಿಗಮ್, "ನೋವನ್ನ ನಿವಾರಿಸಲು ಮತ್ತು ನರಗಳ ಸಮಸ್ಯೆಯನ್ನ ಸರಿಪಡಿಸಲು ಹೈ-ಡೋಸ್ ಔಷಧಿಗಳನ್ನ ನೀಡಲಾಗುತ್ತಿದೆ. ಫಿಸಿಯೋಥೆರಪಿ ತುಂಬಾ ನೋವಿನಿಂದ ಕೂಡಿತ್ತು. ನಾನು ಈಗ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಅದರಿಂದಾಗಿ ನನ್ನ ಗಂಟಲಿಗೂ ಕೂಡ ಸ್ವಲ್ಪ ಸಮಸ್ಯೆ ಆಗಿದೆ, ಧ್ವನಿಯಲ್ಲಿ ಏರುಪೇರಾಗುತ್ತಿದೆ" ಎಂದು ಹೇಳಿದ್ದಾರೆ. ಅಂದಹಾಗೆ, ಶೀಘ್ರದಲ್ಲೇ ಮುಂಬೈನಲ್ಲಿ ನಡೆಯಲಿರುವ ಬೃಹತ್ ಲೈವ್ ಕಾನ್ಸರ್ಟ್‌ನಲ್ಲಿ ಅವರು ಹಾಡಬೇಕಿದೆ. ಆದರೂ ಇಂತಹ ಪರಿಸ್ಥಿತಿಯಲ್ಲೂ ಲೈವ್ ಕಾನ್ಸರ್ಟ್ ನಡೆಸಿಕೊಡುವುದಾಗಿ ಅಭಿಮಾನಿಗಳಿಗೆ ಸೋನು ಭರವಸೆ ನೀಡಿದ್ದಾರೆ.
ಮೊದಲೇ ಫಿಕ್ಸ್ ಆಗಿರುವ ಕಾರ್ಯಕ್ರಮ
ತುಂಬಾ ದಿನಗಳ ನಂತರ ಮುಂಬೈನಲ್ಲಿ ಬೃಹತ್ ಲೈವ್ ಕಾನ್ಸರ್ಟ್ ಆಯೋಜನೆಯಾಗಿದ್ದು, ಬಹಳ ಮೊದಲೇ ಒಪ್ಪಿಕೊಂಡಿದ್ದ ಈ ಕಾರ್ಯಕ್ರಮವನ್ನು ಅನಾರೋಗ್ಯದ ಕಾರಣಕ್ಕಾಗಿ ರದ್ದುಗೊಳಿಸಲು ಸೋನು ನಿಗಮ್‌ಗೆ ಇಷ್ಟವಿಲ್ಲ. ಎಷ್ಟೇ ನೋವಿದ್ದರೂ, ಧ್ವನಿಯಲ್ಲಿ ಏರುಪೇರಾಗಿದ್ದರೂ ತಮ್ಮ ಅಭಿಮಾನಿಗಳನ್ನ ನಿರಾಸೆಗೊಳಿಸಬಾರದು ಎಂಬ ಉದ್ದೇಶಿದಂದ ಶೋ ನಡೆಸಿಕೊಡಲು ರೆಡಿಯಾಗಿದ್ದಾರೆ. ಸದ್ಯ ಸೋನು ನಿಗಮ್ ಹಂಚಿಕೊಂಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಅವರ ಆರೋಗ್ಯದ ಸ್ಥಿತಿ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿದೆ.
Sonu Nigam: ಹುಬ್ಬಳ್ಳಿಯ ಕಾರ್ಯಕ್ರಮ; ಪೋಷಕರಿಂದ ತಪ್ಪಿಸಿಕೊಂಡಿದ್ದ ಬಾಲಕನಿಗೆ ನೆರವಾದ ಸೋನು ನಿಗಮ್
ಅಷ್ಟಕ್ಕೂ ಸೋನುಗೆ ಆಗಿರುವ ಈ ಸಮಸ್ಯೆ ಏನು?
ಈ ಕುರಿತು ವೈದ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದು, "ಮೂಳೆಯ ಬೆಳವಣಿಗೆ ಅಥವಾ ಊದಿಕೊಂಡ ಅಂಗಾಂಶಗಳಿಂದ ನರವು ಸಂಕುಚಿತಗೊಂಡಾಗ ಅಥವಾ ಕಿರಿಕಿರಿಗೆ ಒಳಗಾದಾಗ 'ಪಿಂಚ್ಡ್ ನರ್ವ್' ಸಂಭವಿಸುತ್ತದೆ. ಈ ಒತ್ತಡವು ಸಾಮಾನ್ಯ ನರದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಹುದು, ನೋವು, ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಅಥವಾ ದೌರ್ಬಲ್ಯವನ್ನು ಉಂಟುಮಾಡಬಹುದು. ಕುತ್ತಿಗೆ, ಬೆನ್ನು, ತೋಳುಗಳು ಅಥವಾ ಕಾಲುಗಳಲ್ಲಿ ಕಾಣಿಸಿಕೊಳ್ಳಬಹುದು" ಎಂದು ಹೇಳಿದ್ದಾರೆ.
ಸೋನು ನಿಗಮ್ ಹಂಚಿಕೊಂಡ ವಿಡಿಯೋ
Jogi Prem: ಬಾಲಿವುಡ್ ಗಾಯಕ ಸೋನು ನಿಗಮ್‌ಗೆ ಹಿಗ್ಗಾಮುಗ್ಗಾ ಬೈದಿದ್ರಂತೆ ಜೋಗಿ ಪ್ರೇಮ್!
ಅನೇಕರು ನರದ ಮೇಲಿನ ಒತ್ತಡವನ್ನು ಸಣ್ಣ ಸಮಸ್ಯೆ ಎಂದು ಭಾವಿಸುತ್ತಾರೆ, ಆದರೆ ಇದು ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. "ನರದ ಮೇಲಿನ ಒತ್ತಡವು ತೀವ್ರಗೊಂಡರೆ, ಅದು ನಡೆಯುವುದು, ಮಲಗುವುದು, ಕುಳಿತುಕೊಳ್ಳುವುದು, ಕೆಲಸ ಮಾಡುವುದು ಅಥವಾ ದೈನಂದಿನ ಚಟುವಟಿಕೆಗಳಿಗೂ ಅಡ್ಡಿಪಡಿಸುವಷ್ಟು ಗಂಭೀರವಾಗಬಹುದು. ನೋವಿನ ಜೊತೆಗೆ ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಅಥವಾ ಸ್ನಾಯುಗಳ ದೌರ್ಬಲ್ಯವೂ ಕಾಣಿಸಿಕೊಳ್ಳಬಹುದು. ರೋಗಲಕ್ಷಣಗಳು ಮುಂದುವರಿದರೆ ಅಥವಾ ಉಲ್ಬಣಗೊಂಡರೆ, ದೀರ್ಘಕಾಲದ ನರ ಹಾನಿಯನ್ನು ತಡೆಗಟ್ಟಲು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ" ಎಂದು ವೈದ್ಯರು ಹೇಳುತ್ತಾರೆ.