ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉತ್ತರ ಕರ್ನಾಟಕದ ಸೊಗಡಿನ ‘ನಾವು ತುಂಬಾ ಒಳ್ಳೆಯವರು’ ಚಿತ್ರದ ಟೈಟಲ್‌ ಸಾಂಗ್‌ ರಿಲೀಸ್

‘ನಾವು ತುಂಬಾ ಒಳ್ಳೆಯವರು’ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. 'ಪಪ್ಪಿ' ಖ್ಯಾತಿಯ ಆಯುಷ್ ಮಲ್ಲಿ ನಿರ್ದೇಶನದ ಈ ಸಿನಿಮಾ ಉತ್ತರ ಕರ್ನಾಟಕದ ಭಾಷಾ ಸೊಗಡು ಮತ್ತು ವಠಾರದ ಹಾಸ್ಯಮಯ ಸನ್ನಿವೇಶಗಳನ್ನು ಒಳಗೊಂಡಿದೆ. ಶಂಕರ್ ನಾಗ್ ಅವರ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಚಿತ್ರದಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಲಾಗಿದೆಯಂತೆ.

‘ನಾವು ತುಂಬಾ ಒಳ್ಳೆಯವರು’ ಚಿತ್ರದ ಟೈಟಲ್‌ ಸಾಂಗ್‌ ರಿಲೀಸ್

-

Avinash GR
Avinash GR Nov 22, 2026 1:06 PM

‘ಪಪ್ಪಿ’ ಚಿತ್ರದ ಮೂಲಕ ಉತ್ತರ ಕರ್ನಾಟಕದ ಸೊಗಡು ಹಾಗೂ ಮಕ್ಕಳ ಮುಗ್ಧತೆಯನ್ನು ತೆರೆಯ ಮೇಲೆ ತಂದು ಸಿನಿಪ್ರಿಯರ ಮನಗೆದ್ದಿದ್ದ ನಿರ್ದೇಶಕ ಆಯುಷ್ ಮಲ್ಲಿ, ಇದೀಗ ಮತ್ತೊಂದು ವಿಭಿನ್ನ ಹಾಗೂ ಮನರಂಜನಾತ್ಮಕ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಪಪ್ಪಿ’ ಚಿತ್ರದ ಮೂಲಕ ಮನೆಮಾತಾಗಿದ್ದ ಜಗದೀಶ್‌ - ಆದಿತ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ‘ನಾವು ತುಂಬಾ ಒಳ್ಳೆಯವರು’ ಎಂಬ ಕುತೂಹಲಕಾರಿ ಶೀರ್ಷಿಕೆ ಇಡಲಾಗಿದೆ.

ಮಕ್ಕಳನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನೆರವೇರಿತು. ವಿಶೇಷವೆಂದರೆ, ಚಿತ್ರದಲ್ಲಿ ಅಭಿನಯಿಸಿರುವ ಬಾಲಕಲಾವಿದರ ಕೈಯಿಂದಲೇ ಚಿತ್ರದ ಗೀತೆಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇದೇ ವೇಳೆ ಖ್ಯಾತ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದು, ಅನುರಾಧಾ ಭಟ್ ಸುಮಧುರವಾಗಿ ಹಾಡಿರುವ ಗೀತೆಯ ಮೇಕಿಂಗ್ ವಿಡಿಯೋವನ್ನು ಕೂಡ ಪ್ರದರ್ಶಿಸಿ ಮೆಚ್ಚುಗೆ ಗಳಿಸಲಾಯಿತು.

ಶಂಕರ್ ನಾಗ್ ಸಿನಿಮಾವೇ ಸ್ಪೂರ್ತಿ

ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಹಾಗೂ ನಾಯಕ ನಟ ಆಯುಷ್ ಮಲ್ಲಿ, "ನನ್ನ ಮೊದಲ ಚಿತ್ರ ‘ಪಪ್ಪಿ’ ಬಿಡುಗಡೆಯಾದ ತಕ್ಷಣವೇ ಈ ಹೊಸ ಸಿನಿಮಾದ ಕೆಲಸವನ್ನು ಕೈಗೆತ್ತಿಕೊಂಡೆ. ‘ಪಪ್ಪಿ’ ಸಿನಿಮಾವನ್ನು ವೀಕ್ಷಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಧ್ರುವ ಸರ್ಜಾ, ಮೋಹಕತಾರೆ ರಮ್ಯಾ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಖುದ್ದಾಗಿ ಪ್ರೋತ್ಸಾಹ ನೀಡಿದ್ದು ನನಗೆ ಮತ್ತಷ್ಟು ಧೈರ್ಯ ಮತ್ತು ಜವಾಬ್ದಾರಿ ತುಂಬಿತು. ಈ ಬಾರಿಯೂ ಉತ್ತರ ಕರ್ನಾಟಕದ ಸಂಸ್ಕೃತಿ ಹಾಗೂ ಆ ಭಾಗದ ಭಾಷಾ ಸೊಗಡನ್ನು ತೆರೆಯ ಮೇಲೆ ತರಬೇಕೆಂಬುದು ನನ್ನ ಮುಖ್ಯ ಉದ್ದೇಶವಾಗಿತ್ತು. ಆರಂಭದಲ್ಲಿ ಚಿತ್ರಕ್ಕೆ ಯಾವುದೇ ಹೆಸರಿಟ್ಟಿರಲಿಲ್ಲ; ಯಾರೇ ಸಿನಿಮಾದ ಹೆಸರು ಕೇಳಿದರೂ ತಮಾಷೆಗೆ ‘ನಾವು ತುಂಬಾ ಒಳ್ಳೆಯವರು’ ಎನ್ನುತ್ತಿದ್ದೆ. ಅದಕ್ಕೆ ಅವರು ‘ಮತ್ತೆ ನಾವೇನು ಕೆಟ್ಟವರಾ?’ ಎಂದು ಮರುಪ್ರಶ್ನಿಸುತ್ತಿದ್ದರು. ಕೇಳಿದ ತಕ್ಷಣ ಎಲ್ಲರಲ್ಲೂ ಕುತೂಹಲ ಹಾಗೂ ಪ್ರಶ್ನೆ ಮೂಡಿಸುವ ಈ ಶೀರ್ಷಿಕೆಯೇ ಚಿತ್ರಕ್ಕೆ ಸೂಕ್ತವೆನಿಸಿ ಇದನ್ನೇ ಅಂತಿಮಗೊಳಿಸಿದೆ. ಶಂಕರ್ ನಾಗ್ ಅವರ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಚಿತ್ರವೇ ನನಗೆ ಈ ಸಿನಿಮಾ ಮಾಡಲು ದೊಡ್ಡ ಸ್ಫೂರ್ತಿ" ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.

Kannada New Movie: ‘ನಾವು ತುಂಬಾ ಒಳ್ಳೆಯವರು’ ಟ್ರೇಲರ್‌ ಬಿಡುಗಡೆ

ಬಿಜಾಪುರದಲ್ಲಿ ಸಂಪೂರ್ಣ ಚಿತ್ರೀಕರಣ

ಚಿತ್ರದ ಕಥಾಹಂದರ ಹಾಗೂ ಚಿತ್ರೀಕರಣದ ಅನುಭವಗಳನ್ನು ವಿವರಿಸಿದ ನಿರ್ದೇಶಕರು, ಒಂದು ವಠಾರದ ಅಜ್ಜಿಯ ಮನೆಯಲ್ಲಿ ಬಾಡಿಗೆಗೆ ಇರುವವರು ಹಾಗೂ ಆ ಅಜ್ಜಿಯ ನಡುವೆ ನಡೆಯುವ ಹಾಸ್ಯಭರಿತ ಸನ್ನಿವೇಶಗಳೇ ಈ ಚಿತ್ರದ ಜೀವಾಳ ಎಂದರು. ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರಿಗೆ ನಗುವಿನ ಹೊಳೆ ಹರಿಸುವ ಈ ಕಥೆ, ಕ್ಲೈಮ್ಯಾಕ್ಸ್ ಹಂತಕ್ಕೆ ಬರುತ್ತಿದ್ದಂತೆ ಮನಕಲಕುವ ಭಾವನಾತ್ಮಕ ತಿರುವು ಪಡೆಯುತ್ತದೆ. ನೈಜತೆಗೆ ಒತ್ತು ನೀಡುವ ಸಲುವಾಗಿ ಬಿಜಾಪುರ ಭಾಗದ ಮನೆದಾಳು ವಾಡೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಉತ್ತರ ಕರ್ನಾಟಕದ ಸ್ಥಳೀಯ ರಂಗಭೂಮಿ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಆಯುಷ್ ಮಲ್ಲಿ ಮಾಹಿತಿ ನೀಡಿದರು.

ಚಿತ್ರದ ನಾಯಕಿ ಸಹನಾ ಪ್ರಕಾಶ್ ತಮ್ಮ ಪಾತ್ರದ ಬಗ್ಗೆ ಮಾತನಾಡಿ, "ಇದು ನನ್ನ ವೃತ್ತಿಜೀವನದ ಎರಡನೇ ಸಿನಿಮಾ. ಇದರಲ್ಲಿ ನಾನು ‘ಪೂರ್ಣಿ’ ಎಂಬ ಅತ್ಯಂತ ಚುರುಕು ಹಾಗೂ ಬಬ್ಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಮ್ಮ ಕುಟುಂಬದಲ್ಲಿ ಯಾರಿಗೂ ಸಿನಿಮಾ ಹಿನ್ನೆಲೆಯಿಲ್ಲ, ಹೀಗಾಗಿ ನಟಿಯಾಗಿ ಈ ತಂಡದೊಂದಿಗೆ ಕೆಲಸ ಮಾಡಿದ್ದು ನನಗೊಂದು ಹೊಸ ಮತ್ತು ಸುಂದರ ಅನುಭವ" ಎಂದರು.

ಮತ್ತೋರ್ವ ಪ್ರಮುಖ ನಟಿ ಸಂಜನಾ ಮೂಲಿ ಮಾತನಾಡಿ, "ನಾನು ಮೂಲತಃ ಗದಗಿನವಳು. ಚಿತ್ರದಲ್ಲಿ ನನ್ನ ನಿಜವಾದ ಹೆಸರನ್ನೇ ಪಾತ್ರಕ್ಕೂ ಇಡಲಾಗಿದ್ದು, ಶಿಕ್ಷಕಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಿಜಜೀವನದಂತೆ ಇಲ್ಲಿಯೂ ನನ್ನದು ಹೆಚ್ಚು ಮೌನವಾಗಿರುವ ಪಾತ್ರವಾದ್ದರಿಂದ ನನಗೆ ಬಹಳ ಆಪ್ತವೆನಿಸಿತು" ಎಂದು ಸಂತಸ ಹಂಚಿಕೊಂಡರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ಏಳನೇ ತರಗತಿ ವಿದ್ಯಾರ್ಥಿನಿ ಸಾಹಿತಿ ಈ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವುದು ವಿಶೇಷ.

ಡಿಸೆಂಬರ್ 18ರಂದು ರಾಜ್ಯಾದ್ಯಂತ ರಿಲೀಸ್

ಚಿತ್ರದ ಸಂಗೀತ ನಿರ್ದೇಶಕ ರೋಹಿತ್ ಸೊವೆರ್ ಮಾತನಾಡುತ್ತಾ, "ಈವರೆಗೆ 150ಕ್ಕೂ ಹೆಚ್ಚು ಕಿರುಚಿತ್ರಗಳು ಹಾಗೂ ಡಾಲಿ ಧನಂಜಯ್ ನಿರ್ಮಾಣದ ‘ಜೆ.ಸಿ’ ಸೇರಿದಂತೆ ಹತ್ತು ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ಆದರೆ, ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸುವಾಗ ಪರದೆಯ ಮೇಲಿನ ದೃಶ್ಯಗಳನ್ನು ನೋಡಿದಾಗಲೆಲ್ಲಾ ನನಗೆ ನಗು ತಡೆಯಲಾಗುತ್ತಿರಲಿಲ್ಲ, ಅಷ್ಟರಮಟ್ಟಿಗೆ ಸಿನಿಮಾ ಹಾಸ್ಯಮಯವಾಗಿ ಮೂಡಿಬಂದಿದೆ" ಎಂದರು.

ಚಿತ್ರದಲ್ಲಿ ಒಟ್ಟು ಐದು ಇಂಪಾದ ಹಾಡುಗಳಿದ್ದು, ವಿ. ನಾಗೇಂದ್ರ ಪ್ರಸಾದ್ ಅವರೊಂದಿಗೆ ಆಕಾಶ್ ಮನಗೂಳಿ ಮತ್ತು ಹರೀಶ್ ಶೃಂಗ ಸಾಹಿತ್ಯ ರಚಿಸಿದ್ದಾರೆ. ಬಿ. ಸುರೇಶ್ ಬಾಬು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿರುವುದಲ್ಲದೆ ಚಿತ್ರದ ಸಣ್ಣ ಪಾತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಎಂ.ಎನ್. ವಿಶ್ವ ಅವರ ಸಂಕಲನವಿರುವ ಈ ಚಿತ್ರವನ್ನು ಬಿ.ಬಿ. ಸಂಕನೂರು ಬ್ಯಾನರ್ ಅಡಿಯಲ್ಲಿ ಅಂದಪ್ಪ ಸಂಕನೂರ್ ನಿರ್ಮಿಸಿದ್ದು, ಇದೇ ಡಿಸೆಂಬರ್ 18ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.