ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐತಿಹಾಸಿಕ ಸಿನಿಮಾದ ಮೂಲಕ ಮರಳಿದ ʻನೆನಪಿರಲಿʼ ಪ್ರೇಮ್; ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್

ಲವೀ ಸ್ಟಾರ್‌ ಪ್ರೇಮ್‌ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಒಂದು ಗಿಫ್ಟ್‌ ನೀಡಿದ್ದಾರೆ. ತಮ್ಮ ಮುಂದಿನ ಐತಿಹಾಸಿಕ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ರಮೇಶ್ ಬೇಗಾರ್ ನಿರ್ದೇಶನದ ಈ ಚಿತ್ರವು ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿ ಆಧರಿಸಿದ್ದು, ಇದರ ಫಸ್ಟ್‌ ಲುಕ್‌ನಲ್ಲಿ ಪ್ರೇಮ್ ಕೈಯಲ್ಲಿ ಕತ್ತಿ ಹಿಡಿದು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಸ್ ಅವತಾರದಲ್ಲಿ ʼನೆನಪಿರಲಿʼ ಪ್ರೇಮ್; ಐತಿಹಾಸಿಕ ಚಿತ್ರದಲ್ಲಿ ರಗಡ್ ಲುಕ್

-

Avinash GR
Avinash GR Apr 18, 2026 2:02 PM

'ನೆನಪಿರಲಿ', 'ಜೊತೆ ಜೊತೆಯಲಿ', 'ಪಲ್ಲಕ್ಕಿ', 'ಚಾರ್ ಮಿನಾರ್' ಮುಂತಾದ ಸೂಪರ್ ಹಿಟ್ ಸಿನಿಮಾಗಳ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿರುವ ಪ್ರತಿಭಾವಂತ ನಟ ʻಲವ್ಲೀ ಸ್ಟಾರ್‌ʼ ಪ್ರೇಮ್. ಅಂದಹಾಗೆ, ಇಂದು (ಏ.18) ನೆನಪಿರಲಿ ಪ್ರೇಮ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ತಿರುವು ಪಡೆಯಲು ಸಜ್ಜಾಗಿದ್ದಾರೆ ಪ್ರೇಮ್.‌

ರೊಮ್ಯಾಂಟಿಕ್ ಸಿನಿಮಾಗಳ ಮೂಲಕವೇ "ಲವ್ಲಿ ಸ್ಟಾರ್" ಆಗಿ ಹೆಚ್ಚು ಮಿಂಚಿದ್ದ ಪ್ರೇಮ್, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಅವರ ಮುಂದಿನ ಐತಿಹಾಸಿಕ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

Rishab shetty: ಐತಿಹಾಸಿಕ ಸಿನಿಮಾಕ್ಕೆ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ನಾಯಕ

ಇದು 'ಜಲಪಾತ' ನಿರ್ದೇಶಕರ ಸಿನಿಮಾ

2023ರಲ್ಲಿ ಪರಿಸರ ಕಾಳಜಿಯ 'ಜಲಪಾತ' ಸಿನಿಮಾವನ್ನು ನಿರ್ಮಿಸಿದ್ದ 'ಶ್ರೀ ಬ್ಯಾನರ್' ಅಡಿಯಲ್ಲಿ ಪ್ರೇಮ್‌ ಅವರ ಈ ಹೊಸ ಸಿನಿಮಾ ತಯಾರಾಗುತ್ತಿದೆ. ವಿಶೇಷವೆಂದರೆ, ಜಲಪಾತ ತಂಡವೇ ಈ ಚಿತ್ರವನ್ನೂ ಮಾಡುತ್ತಿದ್ದು, ಈ ಬಾರಿಯೂ ಪರಿಸರ ಅರಿವಿನ ವಿಚಾರಗಳು ಸಿನಿಮಾದಲ್ಲಿ ಅಡಕವಾಗಿವೆಯಂತೆ. "ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರವು ಇತಿಹಾಸ ಮತ್ತು ವರ್ತಮಾನಕ್ಕೆ ಕೊಂಡಿ ಬೆಸೆಯುವ ವಿಭಿನ್ನ ಕಥಾಹಂದರವನ್ನು ಹೊಂದಿದೆ. ಪೂರ್ತಿ ಮಾಸ್ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಪ್ರೇಮ್ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಲಿದೆ" ಎಂದು ಚಿತ್ರತಂಡ ಹೇಳಿಕೊಂಡಿದೆ.

ಬರ್ತ್‌ಡೇ ಪೋಸ್ಟರ್‌ನಲ್ಲಿ ರಗಡ್ ಲುಕ್

ಪ್ರೇಮ್ ಅವರ ಜನ್ಮದಿನದ ಅಂಗವಾಗಿ ಚಿತ್ರತಂಡ ಬಿಡುಗಡೆ ಮಾಡಿರುವ ಫಸ್ಟ್ ಲುಕ್ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟರ್‌ನಲ್ಲಿ ಪ್ರೇಮ್ ಅವರು ಹಿಂದೆಂದೂ ಕಾಣದಷ್ಟು ಹರಿತವಾದ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ಹೊಳೆಯುತ್ತಿರುವ ಮುದ್ರೆಯುಂಗುರ ಮತ್ತು ಹಿರಿದಾದ ಕತ್ತಿ ಅವರ ಪಾತ್ರದ ಗಾಂಭೀರ್ಯವನ್ನು ಹೆಚ್ಚಿಸಿದೆ. ಹಣೆಯ ಮೇಲೆ ಹರಡಿದ ಮುಂಗುರುಳು, ಗಾಳಿಯಲ್ಲಿ ಹಾರುವ ಕೇಶ ವಿನ್ಯಾಸ, ಟ್ರೆಂಡಿ ಗಡ್ಡ ಎಲ್ಲವೂ ಗಮನಸೆಳೆಯುತ್ತಿದೆ. ಪ್ರೇಮ್ ಅವರ ಈ ಲುಕ್‌ ಪಕ್ಕಾ 'ಮಾಸ್' ಎನಿಸುವಂತಿದೆ.

ನೆನಪಿರಲಿ ಪ್ರೇಮ್‌ ಹೊಸ ಲುಕ್

ರಮೇಶ್‌ ಬೇಗಾರ್‌ ನಿರ್ದೇಶನ

ಶೃಂಗೇರಿಯ ಪ್ರಸಿದ್ಧ ರಂಗಕರ್ಮಿ, ಯಕ್ಷಗಾನ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ರಮೇಶ್ ಬೇಗಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಪ್ರೇಮ್ ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಈ ಚಿತ್ರದ ಶೀರ್ಷಿಕೆ ಮತ್ತು ಪೂರ್ಣ ವಿವರಗಳನ್ನು ಶೀಘ್ರದಲ್ಲೇ ಟೀಸರ್ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.