ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

100 ಕೋಟಿ ಕ್ಲಬ್‌ ಸೇರಲು ‘ಪ್ರೇಮದ ಊರಲಿ’ ಚಿತ್ರ ಇನ್ನೂ ಎಷ್ಟು ಗಳಿಸಬೇಕು? ಅತ್ತ ಕರ್ನಾಟಕದಲ್ಲಿ ‘ಜೈಲರ್ 2’ ಕಲೆಕ್ಷನ್‌ ಎಷ್ಟಾಯ್ತು?

Premada Oorali Movie: ರಂಗಾಯಣ ರಘು ನಟನೆಯ ʻಪ್ರೇಮದ ಊರಲಿʼ ಸಿನಿಮಾವು ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ದಾಖಲೆ ಬರೆದಿದ್ದು, ಶೀಘ್ರದಲ್ಲೇ 100 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ. ಈಗಾಗಲೇ 80 ಕೋಟಿ ಗಳಿಸಿ ‘ಟಾಕ್ಸಿಕ್’ ದಾಖಲೆ ಅಳಿಸಿಹಾಕಿರುವ ಈ ಸಿನಿಮಾ, ಸೂಪರ್‌ಸ್ಟಾರ್ ರಜನಿಕಾಂತ್ ಅವರ ‘ಜೈಲರ್ 2’ ಅಬ್ಬರದ ನಡುವೆಯೂ ದೃಢವಾಗಿ ನಿಂತಿದೆ.

ʻಜೈಲರ್ 2ʼಗೂ ಜಗ್ಗದ ʻಪ್ರೇಮದ ಊರಲಿʼ; 100 ಕೋಟಿ ಕ್ಲಬ್‌ಗೆ ಸೇರೋದು ಯಾವಾಗ?

-

Avinash GR
Avinash GR Oct 17, 2026 5:46 PM

ಸ್ಯಾಂಡಲ್‌ವುಡ್‌ನ ಸರ್ಪ್ರೈಸ್ ಹಿಟ್ ಎನಿಸಿಕೊಂಡಿರುವ ‘ಪ್ರೇಮದ ಊರಲಿ’ ಸಿನಿಮಾವು ಹಲವು ದಾಖಲೆಗಳನ್ನು ಮುರಿದಿದೆ. ಈ ವರ್ಷ ಕನ್ನಡ ಚಿತ್ರರಂಗ ಮಂಕಾಗಿದ್ದ ಹೊತ್ತಿನಲ್ಲಿ ಬಂದ ‘ಪ್ರೇಮದ ಊರಲಿ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಮುಚ್ಚಿದ್ದ ಥಿಯೇಟರ್‌ ಬಾಗಿಲುಗಳನ್ನೂ ತೆರೆಸಿದೆ. ಸದ್ಯ ಎಲ್ಲರ ಗಮನ ಇರುವುದು ಈ ಸಿನಿಮಾ ಯಾವಾಗ 100 ಕೋಟಿ ರೂ. ಕ್ಲಬ್ ಸೇರಲಿದೆ ಎಂಬುದರ ಮೇಲೆಯೇ!

ಸದ್ಯ ‘ಪ್ರೇಮದ ಊರಲಿ’ ಸಿನಿಮಾದ ಕಲೆಕ್ಷನ್ 80 ಕೋಟಿ ರೂ. ಸನಿಹದಲ್ಲಿದೆ. ಇನ್ನೂ 20 ಕೋಟಿ ರೂ. ಗಳಿಕೆಯಾದರೆ, ಈ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಲಿದೆ. ಹಾಗೆ ನೋಡಿದರೆ, ಯಶ್ ಅವರ ‘ಟಾಕ್ಸಿಕ್’ ಸಿನಿಮಾದ ಕರ್ನಾಟಕದ ಕಲೆಕ್ಷನ್ 60–70 ಕೋಟಿ ರೂ. ಎನ್ನಲಾಗಿದೆ. ಹೀಗಾಗಿ, ‘ಪ್ರೇಮದ ಊರಲಿ’ ಈ ವರ್ಷ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕಳೆದ ವರ್ಷ ‘ಸು ಫ್ರಮ್ ಸೋ’ ಮಾಡಿದಂತಹ ಮ್ಯಾಜಿಕ್ ಅನ್ನೇ ಈ ವರ್ಷ ‘ಪ್ರೇಮದ ಊರಲಿ’ ಸಿನಿಮಾ ಮರುಕಳಿಸಿದೆ ಎಂಬುದು ವಿಶೇಷ.

‘ಜೈಲರ್ 2’ಗೂ ಜಗ್ಗದ ‘ಪ್ರೇಮದ ಊರಲಿ’

‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ರಂದು ತೆರೆಕಂಡಿದೆ. ಅತ್ತ ತೆಲುಗಿನ ‘ರಣಬಾಲಿ’ ಸಿನಿಮಾ ಕೂಡ ಬಿಡುಗಡೆಯಾಗಿದೆ. ‘ಜೈಲರ್ 2’ ಸಿನಿಮಾ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ತೆರೆಕಂಡಿದ್ದರಿಂದ ‘ಪ್ರೇಮದ ಊರಲಿ’ ಸಿನಿಮಾಗೆ ಹೊಡೆತ ಬೀಳಬಹುದು, ಕಲೆಕ್ಷನ್ ತಗ್ಗಬಹುದು ಎಂಬ ಮಾತುಗಳಿತ್ತು. ಆದರೆ ‘ಜೈಲರ್ 2’ ಬಂದ ಮೇಲೂ ‘ಪ್ರೇಮದ ಊರಲಿ’ ಚಿತ್ರ ಪ್ರತಿದಿನ ಸರಾಸರಿ 3+ ಕೋಟಿ ರೂ. ಗಳಿಕೆ ಕಾಣುತ್ತಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಮುಂದಿನ ಒಂದು ವಾರದಲ್ಲಿ 100 ಕೋಟಿ ರೂ. ಕ್ಲಬ್ ಸೇರುವುದು ನಿಶ್ಚಿತ ಎನ್ನಲಾಗಿದೆ. ಜೊತೆಗೆ ದಸರಾ ಹಬ್ಬದ ರಜೆ ಇರುವುದರಿಂದ ಚಿತ್ರದ ಕಲೆಕ್ಷನ್‌ಗೆ ಮತ್ತಷ್ಟು ಅನುಕೂಲವಾಗಲಿದೆ.

Premada Oorali movie: ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ; ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಗಳಿಕೆ

‘ಜೈಲರ್ 2’ ಕಲೆಕ್ಷನ್ ಎಷ್ಟು?

ಅತ್ತ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದೆ. ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾ 213 ಕೋಟಿ ರೂ. ಬಾಚಿಕೊಂಡಿದೆ. ಭಾರತದಲ್ಲಿ 113 ಕೋಟಿ ರೂ. ಗಳಿಕೆಯಾಗಿದ್ದರೆ, ವಿದೇಶಗಳಿಂದಲೇ 100 ಕೋಟಿ ರೂ. ಹರಿದುಬಂದಿದೆ. ಶನಿವಾರ ಮತ್ತು ಭಾನುವಾರದ ವೀಕೆಂಡ್ ಹಾಗೂ ಮುಂದಿನ ವಾರದ ಹಬ್ಬದ ರಜೆಗಳು ಇರುವುದರಿಂದ ಮೊದಲ ವಾರದಲ್ಲೇ ಈ ಸಿನಿಮಾ 500 ಕೋಟಿ ರೂ. ಕ್ಲಬ್ ಸೇರುವ ನಿರೀಕ್ಷೆಯಿದೆ.

ಇನ್ನು ಕರ್ನಾಟಕದಲ್ಲಿ ಮೊದಲ ದಿನ 14.70 ಕೋಟಿ ರೂ. ಹಾಗೂ ಎರಡನೇ ದಿನ 7.10 ಕೋಟಿ ರೂ. ಗಳಿಕೆಯಾಗಿದೆ. ಒಟ್ಟಾರೆಯಾಗಿ ಎರಡು ದಿನಗಳಲ್ಲಿ 21.80 ಕೋಟಿ ರೂ. ಕಲೆಕ್ಷನ್ ಆಗಿದ್ದು, ಮೊದಲ ವಾರಾಂತ್ಯಕ್ಕೆ ಕರ್ನಾಟಕದಲ್ಲೇ ಒಟ್ಟು 35 ಕೋಟಿ ರೂ. ಗಳಿಸುವ ಸಾಧ್ಯತೆಗಳಿವೆ.