ʻಪುಷ್ಪ 2ʼ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ; ವಿಚಾರಣೆಗೆ ಗೈರಾದ ನಟ ಅಲ್ಲು ಅರ್ಜುನ್, ಕೋರ್ಟ್ ಹೇಳಿದ್ದೇನು?
'ಪುಷ್ಪ 2' ಚಿತ್ರದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರಿಗೆ ನಾಂಪಲ್ಲಿ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ವರ್ಚುವಲ್ ಮೂಲಕ ಹಾಜರಾಗಲು ಅಲ್ಲು ಅರ್ಜುನ್ ಕೋರಿದ್ದ ಮನವಿಯನ್ನು ತಿರಸ್ಕರಿಸಿರುವ ಕೋರ್ಟ್, ಜುಲೈ 6 ರಂದು ಖುದ್ದಾಗಿ ಹಾಜರಾಗಲು ಆದೇಶಿಸಿದೆ.
-
ನಟ ಅಲ್ಲು ಅರ್ಜುನ್ ಅವರಿಗೆ ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯವು ಬಿಗ್ ಶಾಕ್ ನೀಡಿದೆ. ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ಕೋರಿದ್ದ ಅಲ್ಲು ಅರ್ಜು ಅವರ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯವಯ ಮುಂದಿನ ವಿಚಾರಣೆಗೆ ನೇರವಾಗಿ ಕೋರ್ಟ್‌ಗೆ ಹಾಜರಾಗುವಂತೆ ಖಡಕ್ ಆದೇಶ ನೀಡಿದೆ.
ಏನಿದು ಘಟನೆ?
2024ರ ಡಿಸೆಂಬರ್‌ನಲ್ಲಿ ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್ ರೋಡ್ಸ್‌ನಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ 'ಪುಷ್ಪ-2' ಚಿತ್ರದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಟ ಅಲ್ಲು ಅರ್ಜುನ್ ಆಗಮಿಸಿದ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಸೂಕ್ತ ಮುಂಜಾಗ್ರತಾ ಭದ್ರತಾ ಕ್ರಮಗಳಿಲ್ಲದ ಕಾರಣ ಅಲ್ಲಿ ಭೀಕರ ಕಾಲ್ತುಳಿತ ಸಂಭವಿಸಿತ್ತು.
Allu Sirish Wedding: ಅಲ್ಲು ಸಿರೀಶ್ ಹಳದಿ ಶಾಸ್ತ್ರ ಫೋಟೋ ವೈರಲ್; ಅಲ್ಲು ಅರ್ಜುನ್ ಬೇಸರ ಹೊರಹಾಕಿದ್ದೇಕೆ?
ಈ ದುರ್ಘಟನೆಯಲ್ಲಿ ರೇವತಿ ಎಂಬ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದರೆ, ಅವರ ಪುತ್ರ ಶ್ರೀತೇಜ ತೀವ್ರವಾಗಿ ಗಾಯಗೊಂಡಿದ್ದ. ಈ ಘಟನೆಯ ಬಳಿಕ ಸರ್ಕಾರವು ಆರ್‌ಟಿಸಿ ಕ್ರಾಸ್‌ರೋಡ್ಸ್‌ನಲ್ಲಿ ವಿಶೇಷ ಪ್ರದರ್ಶನಗಳು ಹಾಗೂ ಸಾರ್ವಜನಿಕ ಸಂಭ್ರಮಾಚರಣೆಗಳಿಗೆ ನೀಡುತ್ತಿದ್ದ ಅನುಮತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ಪ್ರಕರಣದಲ್ಲಿ ಅಲ್ಲು ಅರ್ಜುನ್ 11ನೇ ಆರೋಪಿ!
ಘಟನೆಯ ಕುರಿತು ಸುದೀರ್ಘ ತನಿಖೆ ನಡೆಸಿದ ಚಿಕ್ಕಡಪಲ್ಲಿ ಪೊಲೀಸರು ಇದೀಗ ನಾಂಪಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಪೊಲೀಸರು ಸಲ್ಲಿಸಿರುವ ಈ ವರದಿಯಲ್ಲಿ ಒಟ್ಟು 23 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಥಿಯೇಟರ್ ಬಳಿ ಭದ್ರತಾ ಲೋಪ ಹಾಗೂ ನಿರ್ಲಕ್ಷ್ಯಕ್ಕೆ ಕಾರಣವಾದ ಮ್ಯಾನೇಜ್‌ಮೆಂಟ್ ಅನ್ನು ಪ್ರಮುಖ ಜವಾಬ್ದಾರರನ್ನಾಗಿ ಮಾಡಿ ಅವರನ್ನು ಎ1 ನಿಂದ ಎ10 ಆರೋಪಿಗಳನ್ನಾಗಿ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿಯನ್ನಾಗಿ ಪೊಲೀಸರು ಸೇರಿಸಿದ್ದಾರೆ.
ವರ್ಚುವಲ್ ಹಾಜರಾತಿಗೆ ಕೋರ್ಟ್ ನಕಾರ
ಪೊಲೀಸರ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯವು ಪ್ರಾಥಮಿಕ ಪುರಾವೆಗಳ ಆಧಾರದ ಮೇಲೆ ಎಲ್ಲಾ ಆರೋಪಿಗಳಿಗೂ ಸಮನ್ಸ್ ಜಾರಿ ಮಾಡಿತ್ತು. ಪ್ರಕರಣದ ಟ್ರಯಲ್ಸ್ ಆರಂಭವಾಗುವ ಮುನ್ನ ಎಲ್ಲಾ ಆರೋಪಿಗಳು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಆದೇಶಿಸಲಾಗಿತ್ತು. ಇಂದು (ಜೂನ್ 22) ನಡೆದ ವಿಚಾರಣೆಗೆ ಅಲ್ಲು ಅರ್ಜುನ್ ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು.
ಅಲ್ಲು ಅರ್ಜುನ್ ಸದ್ಯ ಮುಂಬೈನಲ್ಲಿ ನಿರ್ದೇಶಕ ಅಟ್ಲಿ ಅವರ ಮುಂಬರುವ ಚಿತ್ರ 'ರಾಕಾ' ಶೂಟಿಂಗ್ ಶೆಡ್ಯೂಲ್‌ನಲ್ಲಿ ಬ್ಯುಸಿಯಾಗಿರುವುದರಿಂದ ಅವರು ಖುದ್ದಾಗಿ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆನ್‌ಲೈನ್ (ವರ್ಚುವಲ್) ಮೂಲಕ ಹಾಜರಾಗಲು ಅವರ ಪರ ವಕೀಲರು ಕೋರ್ಟ್‌ಗೆ ಅನುಮತಿ ಕೋರಿದ್ದರು. ಆದರೆ ನ್ಯಾಯಾಲಯ ಇದನ್ನು ತಿರಸ್ಕರಿಸಿದೆ. ಅಲ್ಲು ಅರ್ಜುನ್ ಪರ ವಕೀಲರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ಅವರ ಪರವಾಗಿ ಹಾಜರಾತಿ ವಿನಾಯಿತಿ ಅರ್ಜಿಯನ್ನು ಸಲ್ಲಿಸಿ, ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಿಭಾಯಿಸಿದ್ದಾರೆ.
ಜುಲೈ 6 ಕ್ಕೆ ವಿಚಾರಣೆ ಮುಂದೂಡಿಕೆ
ಕಾಲ್ತುಳಿತ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 6 ಕ್ಕೆ ಮುಂದೂಡಿದೆ. ಅಂದು ಖುದ್ದಾಗಿ ಅಲ್ಲು ಅರ್ಜುನ್ ಹಾಜರಾಗಬೇಕು ಎಂದು ಕೋರ್ಟ್ ಹೇಳಿದೆ. ಅಂದಹಾಗೆ, ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಶ್ರೀತೇಜ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಅಲ್ಲು ಅರ್ಜುನ್ ಅವರೇ ಭರಿಸುತ್ತಾ ಆ ಕುಟುಂಬಕ್ಕೆ ಮಾನವೀಯತೆಯ ಆಧಾರದ ಮೇಲೆ ಆಸರೆಯಾಗಿ ನಿಂತಿದ್ದಾರೆ.