ಆಸ್ಕರ್ ವಿಜೇತ 'ನಾಟು ನಾಟು' ಹಾಡಿನ ಗಾಯಕ ರಾಹುಲ್ ಸಿಪ್ಲಿಗಂಜ್ ವಿರುದ್ಧ FIR: ಬೆದರಿಕೆ, ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿದ ಯುವತಿ!
ಆಸ್ಕರ್ ಪ್ರಶಸ್ತಿ ವಿಜೇತ 'ಆರ್‌ಆರ್‌ಆರ್' ಚಿತ್ರದ 'ನಾಟು ನಾಟು' ಹಾಡಿನ ಗಾಯಕ ಹಾಗೂ ಬಿಗ್ ಬಾಸ್ ತೆಲುಗು 3 ವಿಜೇತ ರಾಹುಲ್ ಸಿಪ್ಲಿಗಂಜ್ ವಿರುದ್ಧ ವಿಶಾಖಪಟ್ಟಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಯುವತಿಯೊಬ್ಬರು ರಾಹುಲ್ ಸೇರಿದಂತೆ ಒಟ್ಟು 12 ಜನರ ವಿರುದ್ಧ ದೂರು ನೀಡಿದ್ದಾರೆ.
-
ಆಸ್ಕರ್ ಪ್ರಶಸ್ತಿ ವಿಜೇತ 'ಆರ್‌ಆರ್‌ಆರ್' ಚಿತ್ರದ 'ನಾಟು ನಾಟು' ಹಾಡಿನ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ 'ಬಿಗ್ ಬಾಸ್ ತೆಲುಗು 3' ವಿಜೇತ, ಗಾಯಕ ರಾಹುಲ್ ಸಿಪ್ಲಿಗಂಜ್ ವಿರುದ್ಧ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಮದುವೆ ಆಗುವುದಾಗಿ ಭರವಸೆ ನೀಡಿ ವಂಚನೆ, ಬೆದರಿಕೆ ಹಾಗೂ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಯುವತಿಯೊಬ್ಬರು ದೂರು ನೀಡಿದ್ದಾರೆ.
12 ಜನರ ವಿರುದ್ಧ ಪ್ರಕರಣ: ಯುವತಿಯ ದೂರಿನಲ್ಲೇನಿದೆ?
ವಿಶಾಖಪಟ್ಟಣದ ಎಂವಿಪಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ರಾಹುಲ್ ಸಿಪ್ಲಿಗಂಜ್ ಸೇರಿದಂತೆ ಒಟ್ಟು 12 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ರಾಹುಲ್ ಅವರ ಭಾವ ಎಂದು ಪರಿಚಯಿಸಿಕೊಂಡಿದ್ದ ಕರ್ಪೂರಾಪು ರಾಹುಲ್ ರೆಡ್ಡಿ ಎಂಬಾತ ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ಆತ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿ, ತನ್ನ ಗೌರವಕ್ಕೆ ಧಕ್ಕೆ ತಂದಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಗಾಯಕ ರಾಹುಲ್ ಸಿಪ್ಲಿಗಂಜ್ ತಮಗೆ ಬೆದರಿಕೆ ಹಾಕಿ, ಬಲವಂತವಾಗಿ ವಿಡಿಯೋ ಹೇಳಿಕೆಯೊಂದನ್ನು ರೆಕಾರ್ಡ್ ಮಾಡಿಸಿಕೊಂಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಆ ವಿಡಿಯೋದಲ್ಲಿದ್ದ ವಿಷಯದ ಕುರಿತು ತನಿಖೆ ನಡೆಯಬೇಕಿದೆ. ಸದ್ಯ ಈ ಬ್ಲ್ಯಾಕ್‌ಮೇಲ್ ಮತ್ತು ಕಿರುಕುಳದ ಆರೋಪಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ರಾಹುಲ್ ಸಿಪ್ಲಿಗಂಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Pushpa 2 Box office collection: ಮೊದಲನೇ ದಿನದ ಗಳಿಕೆಯಲ್ಲಿ ಆರ್‌ಆರ್‌ಆರ್ ದಾಖಲೆ ಮುರಿದ ಪುಷ್ಪಾ-2..?
ಬೋನಾಲು ಸಂಭ್ರಮದ ಬೆನ್ನಲ್ಲೇ ಎಫ್‌ಐಆರ್ ಆಘಾತ
ತಮ್ಮ ಮನೆಯಲ್ಲಿ ನಡೆದ ಬೋನಾಲು ಹಬ್ಬದ ಸಂಭ್ರಮಾಚರಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮರುದಿನವೇ ರಾಹುಲ್ ಅವರಿಗೆ ಈ ಎಫ್‌ಐಆರ್ ಆಘಾತ ಎದುರಾಗಿದೆ. ವಿಡಿಯೋ ಹಂಚಿಕೊಳ್ಳುತ್ತಾ, "ಪೋತರಾಜು ಕುಣಿದಾಗ ಇಡೀ ಮನೆಗೆ ಮಹಾಂಕಾಳಿ ಅಮ್ಮನವರ ಶಕ್ತಿ ಬಂದಂತಾಗುತ್ತದೆ. ಜೈ ಮಹಾಂಕಾಳಿ! ಜೈ ಪೋತರಾಜು!" ಎಂದು ಅವರು ಬರೆದುಕೊಂಡಿದ್ದರು.
ಯಾರೀ ರಾಹುಲ್ ಸಿಪ್ಲಿಗಂಜ್?
ಯೂಟ್ಯೂಬ್‌ನಲ್ಲಿ ಸ್ವತಂತ್ರ ಗಾಯಕನಾಗಿ ಪಯಣ ಆರಂಭಿಸಿದ್ದ ರಾಹುಲ್, ತೆಲುಗು ಚಿತ್ರರಂಗದ ಪ್ರಮುಖ ಗಾಯಕರಾಗಿ ಬೆಳೆದರು. ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಚಿತ್ರದಲ್ಲಿ ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದ, ಚಂದ್ರಬೋಸ್ ಸಾಹಿತ್ಯದ 'ನಾಟು ನಾಟು' ಹಾಡನ್ನು ಕಾಲ ಭೈರವ ಜೊತೆಗೂಡಿ ಹಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದರು ರಾಹುಲ್ ಸಿಪ್ಲಿಗಂಜ್. ಈ ಹಾಡಿಗೆ 'ಆಸ್ಕರ್' ಪ್ರಶಸ್ತಿ ದೊರೆತಿತ್ತು.
ಆಸ್ಕರ್ ಗೆಲುವಿನ ನಂತರ ತೆಲಂಗಾಣ ಸರ್ಕಾರದಿಂದ 1 ಕೋಟಿ ರೂಪಾಯಿ ನಗದು ಬಹುಮಾನ ದೊರೆತಿತ್ತು. ಅದಕ್ಕೂ ಮುನ್ನ 'ಬಿಗ್ ಬಾಸ್ ತೆಲುಗು 3' ರಿಯಾಲಿಟಿ ಶೋ ವಿನ್ನರ್ ಆಗಿದ್ದರು. ಅಂದಹಾಗೆ, ಕಳೆದ ವರ್ಷ ಹರಿಣ್ಯಾ ರೆಡ್ಡಿ ಅವರನ್ನು ಮದುವೆಯಾಗಿದ್ದ ರಾಹುಲ್, ಇತ್ತೀಚೆಗೆ ಪವನ್ ಕಲ್ಯಾಣ್ ಅವರ 'ಹರಿ ಹರ ವೀರ ಮಲ್ಲು: ಪಾರ್ಟ್ 1' ಮತ್ತು ಮಹೇಶ್ ಬಾಬು ಅವರ 'ಗುಂಟೂರು ಖಾರಂ' ಚಿತ್ರಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ.