Coolie Movie: ಅಂದುಕೊಂಡ ದಿನಕ್ಕೆ ರಿಲೀಸ್ ಆಗಲ್ವಾ ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರ? ಏನಿದು ಕೃತಿಚೌರ್ಯ ಆರೋಪ?
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೂಲಿ’ (Coolie) ಬಿಡುಗಡೆಗೆ ಮುನ್ನ ಕೃತಿಚೌರ್ಯದ ಆರೋಪ ಕೇಳಿ ಬಂದಿದೆ. ಚಿತ್ರದ ಪೋಸ್ಟರ್‌ಗಳು ಹಾಲಿವುಡ್‌ನ ‘ಮೇಡಂ ವೆಬ್’, ‘ಗ್ಲಾಸ್’, ಮತ್ತು ‘ರೆಬೆಲ್ ಮೂನ್’ ಚಿತ್ರಗಳ ಜತೆಗೆ ತಮಿಳಿನ ‘ಬೀಸ್ಟ್’ ಚಿತ್ರದ ಪೋಸ್ಟರ್‌ಗಳನ್ನು ಯಥಾವತ್ತಾಗಿ ಕದ್ದಿರುವುದಾಗಿ ನೆಟ್ಟಿಗರು ಆರೋಪಿಸಿದ್ದಾರೆ.

ರಜನಿ ಕಾಂತ್

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ (Superstar Rajinikanth) ನಟನೆಯ ಬಹುನಿರೀಕ್ಷಿತ ಚಿತ್ರ ‘ಕೂಲಿ’ (Coolie) ಬಿಡುಗಡೆಗೂ ಮುನ್ನವೇ ಕೃತಿಚೌರ್ಯದ (Plagiarism) ವಿವಾದಕ್ಕೆ ಸಿಲುಕಿದೆ. ಚಿತ್ರದ ಪೋಸ್ಟರ್‌ಗಳು ಹಾಲಿವುಡ್‌ನ (Hollywood) ‘ಮೇಡಂ ವೆಬ್’, ‘ಗ್ಲಾಸ್’, ಮತ್ತು ‘ರೆಬೆಲ್ ಮೂನ್’ ಚಿತ್ರಗಳ ಜತೆಗೆ ತಮಿಳಿನ ‘ಬೀಸ್ಟ್’ ಸಿನಿಮಾದ ಪೋಸ್ಟರ್‌ಗಳನ್ನು ಯಥಾವತ್ತಾಗಿ ಕದ್ದಿರುವುದಾಗಿ ನೆಟ್ಟಿಗರು ಆರೋಪಿಸಿದ್ದಾರೆ. ಈ ಕೃತಿಚೌರ್ಯವನ್ನು ‘ಬೌದ್ಧಿಕ ದಾರಿದ್ರ್ಯ’ ಎಂದು ಲೇವಡಿ ಮಾಡಿರುವ ನೆಟ್ಟಿಗರು, ʼಕೂಲಿʼ ತಂಡದ ಕ್ರಿಯಾಶೀಲತೆಯ ಕೊರತೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
‘ಕೂಲಿ’ ಚಿತ್ರದ ಪೋಸ್ಟರ್‌ಗಳಲ್ಲಿ ಹಾಲಿವುಡ್ ಚಿತ್ರಗಳ ವಿನ್ಯಾಸವನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ರೀತಿ ವಿಜಯ್ ಅವರ ‘ಬೀಸ್ಟ್’ ಸಿನಿಮಾದ ಪೋಸ್ಟರ್‌ನ ವಿನ್ಯಾಸವನ್ನೂ ಕದ್ದು, ‘ಕೂಲಿ’ಗೆ ಬಳಸಿಕೊಂಡಿರುವುದು ನೆಟ್ಟಿಗರ ಹದ್ದಿನ ಕಣ್ಣಿಗೆ ಬಿದ್ದಿದೆ. ಎಕ್ಸ್ ಬಳಕೆದಾರ ಅಕ್ಷಯ್ ಆರ್. ಪಿಳ್ಳೈ ಈ ಸಾಮ್ಯತೆಗಳನ್ನು ಫೋಟೊದೊಂದಿಗೆ ಬಹಿರಂಗಪಡಿಸಿದ್ದಾರೆ. ‘ಕೂಲಿ’ ಚಿತ್ರದ ನಾಲ್ಕು ಪೋಸ್ಟರ್‌ಗಳ ಪೈಕಿ ಮೂರು ಕೃತಿಚೌರ್ಯದ ಆರೋಪಕ್ಕೆ ಒಳಗಾಗಿದೆ. ವಿಶೇಷವಾಗಿ ‘ಬೀಸ್ಟ್’ ಚಿತ್ರದ ಅಭಿಮಾನಿಯೊಬ್ಬರು ರಚಿಸಿದ್ದ ಪೋಸ್ಟರ್ ವಿನ್ಯಾಸವನ್ನೂ ಕದ್ದಿರುವುದು ನಂಬಲಸಾಧ್ಯ ಎಂದು ಅವರು ಟೀಕಿಸಿದ್ದಾರೆ.
ಮತ್ತೊಬ್ಬ ಎಕ್ಸ್ ಬಳಕೆದಾರ ಲಿಧಿ ಹಾಟ್‌ಶಾಟ್, ‘ಕೂಲಿ’ ಪೋಸ್ಟರ್‌ಗಳು ಎರಡು ಇಂಗ್ಲಿಷ್ ಚಿತ್ರಗಳ ನಕಲು ಎಂದು ಆರೋಪಿಸಿ, ಚಿತ್ರದ ಬಿಡುಗಡೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇದಲ್ಲದೆ, ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳಲ್ಲಿಯೂ ‘ಕೂಲಿ’ ಚಿತ್ರವು ಕೃತಿಚೌರ್ಯಕ್ಕೆ ಒಳಗಾಗಿರಬಹುದು ಎಂದು ಕೆಲವು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಹಾಲಿವುಡ್‌ನಿಂದ ಪ್ರೇರಣೆ ಪಡೆಯುವುದು ಸಾಮಾನ್ಯವಾದರೂ, ಇಂತಹ ಸ್ಪಷ್ಟ ಕೃತಿಚೌರ್ಯವು ಚಿತ್ರತಂಡದ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳನ್ನು ಎತ್ತಿದೆ.
ಈ ಸುದ್ದಿಯನ್ನು ಓದಿ: Viral News: ಮೃತ ತಾಯಿಯ ಖಾತೆಗೆ 1.13 ಲಕ್ಷ ಕೋಟಿ ರೂ. ಹಣ ಜಮೆ: ಒಂದೇ ದಿನದಲ್ಲಿ ಶಾರೂಖ್ ಖಾನ್‌ಗಿಂತ ಶ್ರೀಮಂತನಾದ ಯುವಕ
ಈ ವಿವಾದವು ‘ಕೂಲಿ’ ಚಿತ್ರದ ಮೇಲಿನ ಉತ್ಸಾಹವನ್ನು ಕಡಿಮೆ ಮಾಡಿದ್ದು, ರಜನಿಕಾಂತ್ ಅಭಿಮಾನಿಗಳಲ್ಲಿ ನಿರಾಸೆಯನ್ನುಂಟು ಮಾಡಿದೆ. ಚಿತ್ರತಂಡ ಈ ಆರೋಪಗಳಿಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಈ ಘಟನೆಯು ಚಿತ್ರರಂಗದಲ್ಲಿ ಕೃತಿಚೌರ್ಯದ ಸಮಸ್ಯೆಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ, ಕಾನೂನಾತ್ಮಕ ಮತ್ತು ಸೃಜನಶೀಲ ಜವಾಬ್ದಾರಿಯ ಬಗ್ಗೆ ಗಮನ ಸೆಳೆದಿದೆ.
‘ಕೂಲಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ರಜನಿಕಾಂತ್ ಜತೆ ನಟ ಉಪೇಂದ್ರ, ಆಮೀರ್ ಖಾನ್, ಅಕ್ಕಿನೇನಿ ನಾಗಾರ್ಜುನ ಸೇರಿ ಹಲವು ಸ್ಟಾರ್‌ಗಳು ನಟಿಸಿದ್ದಾರೆ. ಆಗಸ್ಟ್ 14ರಂದು ಚಿತ್ರವು ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.