ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಬ್ಬಬ್ಬಾ! ಬರೀ ಪ್ರಚಾರಕ್ಕೆ ಇಷ್ಟೊಂದು ದುಡ್ಡು ಖರ್ಚು ಮಾಡ್ತಾರಾ? ʻರಾಮಾಯಣʼ ಟೀಮ್‌ನಿಂದ ಮೆಗಾ ಪ್ಲ್ಯಾನ್!‌

ನಿತೇಶ್ ತಿವಾರಿ ನಿರ್ದೇಶನದ ಹಾಗೂ ಯಶ್-ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾ ಪ್ರಚಾರಕ್ಕಾಗಿ ಬರೋಬ್ಬರಿ ದುಬಾರಿ ಮೊತ್ತವನ್ನು ಮೀಸಲಿಟ್ಟಿದ್ದು, ಈ ಸುದ್ದಿ ಭಾರಿ ವೈರಲ್‌ ಆಗುತ್ತಿದೆ. ಸದ್ಯ ಈ ಸಿನಿಮಾದ ಟ್ರೇಲರ್ ಲಾಂಚ್ ಮುಂದೂಡಲಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕ ಘೋಷಣೆ ಆಗಲಿದೆ.

ಬರೀ ಪ್ರಚಾರಕ್ಕೇ ನೂರಾರು ಕೋಟಿ ಖರ್ಚು! ʻರಾಮಾಯಣʼ ಟೀಮ್‌ನ ಸಖತ್‌ ಪ್ಲ್ಯಾನ್

-

Avinash GR
Avinash GR Jul 25, 2026 5:20 PM

ನಿರ್ದೇಶಕ ನಿತೇಶ್‌ ತಿವಾರಿ ಸಾರಥ್ಯದಲ್ಲಿ ʻರಾಮಾಯಣʼ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿರುವುದು ಗೊತ್ತೇ ಇದೆ. ನಮಿತ್‌ ಮಲ್ಹೋತ್ರಾ ಮತ್ತು ನಟ ಯಶ್‌ ಅವರು ಈ ಸಿನಿಮಾವನ್ನು ಬರೋಬ್ಬರಿ 4 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾ ದೇವಿಯಾಗಿ ಸಾಯಿ ಪಲ್ಲವಿ ಮತ್ತು ರಾವಣಾಸುರನಾಗಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದು, ಈ ಚಿತ್ರದ ಮೇಲೆ ವಿಶ್ವಾದ್ಯಂತ ಭಾರಿ ನಿರೀಕ್ಷೆಗಳಿವೆ. ಸದ್ಯ ಈ ಸಿನಿಮಾದ ಪ್ರಚಾರಕ್ಕಾಗಿ ಮೀಸಲಿಟ್ಟಿರುವ ಬಜೆಟ್ ವಿವರಗಳನ್ನು ಕಂಡು ಸಿನಿಪ್ರಿಯರು ಅಚ್ಚರಿಗೊಂಡಿದ್ದಾರೆ.

ಬರೀ ಪ್ರಚಾರಕ್ಕಾಗಿಯೇ 375 ಕೋಟಿ ರೂ. ಖರ್ಚು!

ಸಾಮಾನ್ಯವಾಗಿ ಭಾರತದ ಬಿಗ್‌ ಪ್ಯಾನ್‌ ಇಂಡಿಯಾ ಸಿನಿಮಾಗಳ ಪ್ರಚಾರಕ್ಕಾಗಿ ಹತ್ತಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ 'ರಾಮಾಯಣ' ತಂಡವು ಗ್ಲೋಬಲ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು, ಪ್ರಚಾರಕ್ಕಾಗಿಯೇ ಬರೋಬ್ಬರಿ 375 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಮುಂದಾಗಿರುವುದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ವಿದೇಶಗಳಲ್ಲಿ ಈ ಚಿತ್ರದ ಪ್ರಚಾರ ಮತ್ತು ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸೋನಿ ಪಿಕ್ಚರ್ಸ್, ಕೇವಲ ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಚಾರಕ್ಕಾಗಿಯೇ 235 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ.

ಇನ್ನು ದೇಶೀಯ ಮಾರುಕಟ್ಟೆಯ ಪ್ರಚಾರಕ್ಕಾಗಿ ನಿರ್ಮಾಪಕರು ಮತ್ತೊಂದು 140 ಕೋಟಿ ರೂಪಾಯಿಗಳನ್ನು ಮೀಸಲಿಡುತ್ತಿದ್ದಾರೆ. ಪ್ರಚಾರಕ್ಕಾಗಿಯೇ ಇಷ್ಟೊಂದು ಬಜೆಟ್ ಮೀಸಲಿಟ್ಟಿರುವುದು ಭಾರತೀಯ ಸಿನಿಮಾದ ಇತಿಹಾಸದಲ್ಲೇ ಅಪರೂಪದ ದಾಖಲೆ ಎಂದು ಹೇಳಲಾಗುತ್ತಿದೆ. ಹಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ಗಳ ಸಾಲಿನಲ್ಲಿ 'ರಾಮಾಯಣ'ವನ್ನು ನಿಲ್ಲಿಸುವ ಉದ್ದೇಶದಿಂದಲೇ ನಿರ್ಮಾಪಕರು ಈ ಮಟ್ಟದಲ್ಲಿ ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಪ್ರಮೋಷನ್‌ ತಂತ್ರ ಹಾಗೂ ಖರ್ಚಾಗುತ್ತಿರುವ ಹಣದ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.

ಟ್ರೇಲರ್ ರಿಲೀಸ್‌ ಮುಂದೂಡಿದ್ದೇಕೆ?

ಅಸಲಿಗೆ ಶುಕ್ರವಾರ (ಜುಲೈ 24) ಈ ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆಯಾಗಬೇಕಿತ್ತು. ಆದರೆ ಅನಪೇಕ್ಷಿತವಾಗಿ ಟ್ರೇಲರ್ ಲಾಂಚ್ ಅನ್ನು ನಿರ್ಮಾಪಕರು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಇದರ ಹಿಂದೆ ಸೋನಿ ಪಿಕ್ಚರ್ಸ್ ಜೊತೆ ಮಾಡಿಕೊಂಡ ಅಂತರರಾಷ್ಟ್ರೀಯ ಒಪ್ಪಂದವೇ ಪ್ರಮುಖ ಕಾರಣ. ಹಾಲಿವುಡ್ ಮಟ್ಟದ ವೇದಿಕೆಗಳಲ್ಲಿ ಜಾಗತಿಕ ಪ್ರೇಕ್ಷಕರ ಮುಂದೆ ಈ ಪ್ರಾಜೆಕ್ಟ್ ಅನ್ನು ಇನ್ನಷ್ಟು ಅದ್ಧೂರಿಯಾಗಿ ಕೊಂಡೊಯ್ಯಲು ಈ ಪಬ್ಲಿಸಿಟಿ ತಂತ್ರವನ್ನು ಬದಲಾಯಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

Ramayana trailer: ಕೊನೆಯ ಕ್ಷಣದಲ್ಲಿ ರಾಮಾಯಣ ಟ್ರೇಲರ್ ರಿಲೀಸ್ ರದ್ದು; ಕಾರಣ ಇದು

ಕೇವಲ ಬಜೆಟ್ ಮತ್ತು ತಾರಾಗಣದಲ್ಲಿ ಮಾತ್ರವಲ್ಲದೆ, ತಂತ್ರಜ್ಞಾನದಲ್ಲೂ ಈ ಸಿನಿಮಾ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ. ಆರ್. ರೆಹಮಾನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಂಗೀತವು ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದೆ. ಅಷ್ಟೇ ಅಲ್ಲದೆ, ಅತ್ಯುತ್ತಮ ಐಮ್ಯಾಕ್ಸ್ (IMAX) ಫಾರ್ಮ್ಯಾಟ್‌ನಲ್ಲಿ, ದೈತ್ಯ ಹಾಲಿವುಡ್ ವಿಎಫ್‌ಎಕ್ಸ್ (VFX) ಸಂಸ್ಥೆಗಳ ಸಹಯೋಗದೊಂದಿಗೆ ಈ ಚಿತ್ರವನ್ನು ರೂಪಿಸಲಾಗುತ್ತಿದೆ.

ಮೊದಲ ಭಾಗವನ್ನು ಈ ವರ್ಷದ ದೀಪಾವಳಿಯ ಕೊಡುಗೆಯಾಗಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಎರಡನೇ ಭಾಗವನ್ನು ಮುಂದಿನ ವರ್ಷದ ದೀಪಾವಳಿಗೆ ಪ್ರೇಕ್ಷಕರ ಮುಂದೆ ತರಲಿದ್ದಾರೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ಘೋಷಿಸಲಿದ್ದು, ಈ ಪೌರಾಣಿಕ ಅದ್ಭುತವು ಬಾಕ್ಸ್ ಆಫೀಸ್‌ನಲ್ಲಿ ಎಂತಹ ಬಿರುಗಾಳಿ ಎಬ್ಬಿಸಲಿದೆ ಎಂದು ಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.