Rashmika Mandanna: ಸ್ಯಾಂಡಲ್‌ವುಡ್‌ನಿಂದ ರಶ್ಮಿಕಾ ಮಂದಣ್ಣ ಬ್ಯಾನ್? ನಟಿ ಕೊಟ್ಟ ಸ್ಪಷ್ಟನೆ ಇದು
Rashmika Mandanna: ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾದಲ್ಲಿ ಮಾತ್ರ ಯಾಕೆ ಅಭಿನಯಿಸುತ್ತಿಲ್ಲ? ಅವರನ್ನು ಕನ್ನಡ ಸಿನಿಮಾರಂಗದಿಂದ ಬ್ಯಾನ್ ಮಾಡಿದ್ದಾರಾ? ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿಕೇಳಿ ಬರುತ್ತಲೇ ಇದೆ. ಈ ಬಗ್ಗೆ ರಶ್ಮಿಕಾ ಅವರೇ ಇದೀಗ ಉತ್ತರ ನೀಡಿದ್ದಾರೆ.

Rashmika Mandanna -

ಬೆಂಗಳೂರು: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. 2016ರಲ್ಲಿ ಕನ್ನಡದ ʼಕಿರಿಕ್ ಪಾರ್ಟಿʼ ಚಿತ್ರದೊಂದಿಗೆ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರಿಗೆ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಅಭಿನಯದ ʼಅನಿಮಲ್ʼ, ʼಕುಬೇರʼ, ʼಪುಷ್ಪ 2ʼ, ʼಛಾವಾʼ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಸಾಲು ಸಾಲು ಆಫರ್ಸ್ ಬರುತ್ತಲೇ ಇದೆ. ಈ ನಡುವೆ ಅವರು ನಟ ವಿಜಯ್ ದೇವರಕೊಂಡ (Vijay Devarakonda) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೂಡ ವೈರಲ್ ಆಗಿದೆ. ರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾದಲ್ಲಿ ಮಾತ್ರ ಯಾಕೆ ಅಭಿನಯಿಸುತ್ತಿಲ್ಲ? ಅವರನ್ನು ಕನ್ನಡ ಸಿನಿಮಾ ರಂಗದಿಂದ ಬ್ಯಾನ್ ಮಾಡಿದ್ದಾರಾ? ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಶ್ಮಿಕಾ ಅವರೇ ಇದೀಗ ಉತ್ತರ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಮೂಲದವರಾಗಿದ್ದು, ತಮ್ಮ ವೃತ್ತಿ ಜೀವನ, ಶಿಕ್ಷಣ ಎಲ್ಲ ಆರಂಭಿಸಿದ್ದು ಬೆಂಗಳೂರಿನಲ್ಲಿ. ಇತ್ತೀಚಿನ ಕೆಲವರ್ಷದಿಂದ ಅವರು ಕನ್ನಡದ ಯಾವುದೇ ಚಿತ್ರ ಮಾಡಿಲ್ಲ. ಹೀಗಾಗಿ ಅವರನ್ನು ಸ್ಯಾಂಡಲ್‌ವುಡ್‌ನಲ್ಲಿ ಬ್ಯಾನ್ ಮಾಡಿರಬಹುದೇ? ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ʼʼಇಲ್ಲಿಯವರೆಗೆ ನನ್ನನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ನಿಷೇಧಿಸಿಲ್ಲ. ನನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಜನರು ಸತ್ಯಕ್ಕಿಂತ ಹೆಚ್ಚಾಗಿ ವದಂತಿಗಳನ್ನೇ ಯಾವಾಗಲೂ ಹಬ್ಬಿಸುತ್ತಿರುತ್ತಾರೆ. ಸದ್ಯ ಪರಭಾಷೆಯ ಸಿನಿಮಾ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದೇನೆ. ಉತ್ತಮ ಅವಕಾಶ ಸಿಕ್ಕರೆ ಕನ್ನಡದಲ್ಲಿಯೂ ನಟಿಸುತ್ತೇನೆʼʼ ಎಂದು ಅವರು ಹೇಳಿದ್ದಾರೆ.
ಬಳಿಕ ʼಕಾಂತಾರʼ ಸಿನಿಮಾದ ಬಗ್ಗೆ ಸಂದರ್ಶಕಿ ಪ್ರಶ್ನಿಸಿದ್ದಾರೆ. ʼಕಾಂತಾರʼ ಸಿನಿಮಾ ಚೆನ್ನಾಗಿದೆ. ಸಿನಿಮಾ ತಂಡವನ್ನು ಪ್ರಶಂಸಿಸಲು ವೈಯಕ್ತಿಕವಾಗಿ ಸಂದೇಶ ಕಳುಹಿಸಿದೆ. ಅದಕ್ಕೆ ಅವರು ಕೂಡ 'ಧನ್ಯವಾದಗಳು' ಎಂದು ಪ್ರತಿಕ್ರಿಯೆ ನೀಡಿದರು ಎಂದರು.
ರಶ್ಮಿಕಾ ಮಂದಣ್ಣ ಸದ್ಯ ಆಯುಷ್ಮಾನ್ ಖುರಾನಾ ಜತೆ ರೊಮ್ಯಾಂಟಿಕ್ ಹಾರರ್ ಕಾಮಿಡಿ 'ಥಮ್ಮಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ತಿಂಗಳೇ ತೆರೆಗೆ ಬರಲಿದೆ. ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್ ಮತ್ತು ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ನಿಶ್ಚಿತಾರ್ಥ ನೆರವೇರಿದ್ದು ಫೆಬ್ರವರಿಯಲ್ಲಿ ಇಬ್ಬರು ವಿವಾಹವಾಗುತ್ತಾರೆ ಎನ್ನಲಾಗಿದೆ.