ʻಗ್ಯಾಂಗ್ಸ್ ಆಫ್ ಯುಕೆ ಚಿತ್ರಕ್ಕೂ ಭೀಮಾತೀರದ ಹಂತಕರಿಗೂ ಸಂಬಂಧವಿಲ್ಲʼ- ನಿರ್ದೇಶಕ ರವಿ ಶ್ರೀವತ್ಸ ಸ್ಪಷ್ಟನೆ
Gangs of UK Movie: ನಿರ್ದೇಶಕ ರವಿ ಶ್ರೀವತ್ಸ ಅವರು ʻಗ್ಯಾಂಗ್ಸ್ ಆಫ್ ಯುಕೆʼ ಏಪ್ರಿಲ್ 10ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಚಿತ್ರವು ಭೀಮಾತೀರದ ಹಂತಕರ ಕಥೆಯಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದು ವ್ಯವಸ್ಥೆಯ ವಿರುದ್ಧ ನೊಂದವರ ಮತ್ತು ತಾಯಿಯ ರಕ್ತಕಣ್ಣೀರಿನ ಕಥೆಯಾಗಿದೆ ಎಂದು ತಿಳಿಸಿದ್ದಾರೆ.
-
ನಿರ್ದೇಶಕ ರವಿ ಶ್ರೀವತ್ಸ ಅವರ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರವು ಘೋಷಣೆ ಆದಾಗಿನಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇದರ ಟ್ರೇಲರ್ ಕೂಡ ಭಾರಿ ಸದ್ದು ಮಾಡಿತ್ತು. ಸದ್ಯ ಈ ಚಿತ್ರದ ಬಿಡುಗಡೆ ದಿನಾಂಕ ಈಗ ಘೋಷಣೆ ಆಗಿದೆ. ಚಂದನ್ ಫಿಲಂಸ್ ಸಂಸ್ಥೆಯಡಿ ಚಂದನ್ ಸುರೇಶ್ ಅವರು ಈ ಚಿತ್ರವನ್ನು ಏಪ್ರಿಲ್ 10ರಂದು ರಾಜ್ಯಾದ್ಯಂತ ರಿಲೀಸ್ ಮಾಡಲಿದ್ದಾರೆ.
ಚಿತ್ರದ ಬಗ್ಗೆ ರವಿ ಶ್ರೀವತ್ಸ ಹೇಳಿದ್ದೇನು?
"ಈ ಸಿನಿಮಾದ ಕಥೆಯಲ್ಲಿ ಬರುವ ಪಾತ್ರಧಾರಿಗಳು ಇವತ್ತಿಗೂ ಜೀವಂತವಾಗಿದ್ದಾರೆ, ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸಮಾಜ, ವ್ಯವಸ್ಥೆ ಮತ್ತು ಆರಕ್ಷಕರ ಸಹಾಯವಿಲ್ಲದೆ ರಕ್ತಕಣ್ಣೀರು ಹಾಕಿಕೊಂಡು ಸುಮ್ಮನೆ ಇದ್ದಾರೆ. ನಮ್ಮನ್ನು ಹೊರಕ್ಕೆ ತರಬೇಡಿ, ನೀವೇನಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಹೇಗೆ ಇದರಲ್ಲಿ ಸಿಕ್ಕಿಕೊಂಡೆ ಎಂದು ಪ್ರಶ್ನಿಸಿದರೆ, ಆ ತಾಯಿ ತನ್ನ ಮಕ್ಕಳನ್ನು ತೋರಿಸಿ ಸುಮ್ಮನಾಗುತ್ತಾಳೆ. ಆ ಮಕ್ಕಳಿಗಾಗಿ ಬದುಕುತ್ತಿದ್ದೇನೆ ಎನ್ನುತ್ತಾಳೆ. ಮತ್ತೋರ್ವ ಹಿರಿಯ ಹೆಣ್ಣು ಇದ್ದಾಳೆ, ಅವಳು ತನ್ನ ಕಥೆಯನ್ನು ಈ ಚಿತ್ರದ ಮೂಲಕ ಹೇಳುತ್ತಾಳೆ" ಎನ್ನುತ್ತಾರೆ ರವಿ ಶ್ರೀವತ್ಸ.
Dr. Vishnuvardhan's samadhi: ಇವತ್ತು ನಿಜವಾಗಿಯೂ ಯಜಮಾನರನ್ನು ಕಳೆದುಕೊಂಡಿದ್ದೇವೆ: ರವಿ ಶ್ರೀವತ್ಸ ಕಣ್ಣೀರು
ಇದು ಬರೀ ಹೊಡೆದಾಟದ ಕಥೆ ಅಲ್ಲ ಎಂದ ರವಿ ಶ್ರೀವತ್ಸ
"ನಮ್ಮ ಗ್ಯಾಂಗ್ಸ್ ಆಫ್ ಯುಕೆ ಎಂಬುದು ಬರೀ ಹೊಡೆದಾಟ, ಬಡಿದಾಟ, ಗ್ಯಾಂಗ್‍ಸ್ಟರ್‌ಗಳು ಇರುವಂತಹ ಸಿನಿಮಾ ಅಲ್ಲ. ಇದು ತಾಯಿಯ ಕಣ್ಣೀರನ ಕಥೆ, ರಕ್ತಕಣ್ಣೀರಿನ ಕಥೆ. ನಟ ಒರಟ ಪ್ರಶಾಂತ್ ಚಿತ್ರದಲ್ಲಿ ಧರ್ಮರಾಯನಂತಿದ್ದವನು, ಪರಶುರಾಮನಾಗುತ್ತಾನೆ. ಇದಕ್ಕೂ ಭೀಮಾತೀರದ ಹಂತಕರ ಕಥೆಗೂ ಸಂಬಂಧವಿಲ್ಲ. ನಮ್ಮಲ್ಲಿ ಕಾಳ, ಅವನ ಮುಗ್ಧ ತಂಗಿ ಕಾಳಿ, ಶಿವಯ್ಯ ಸಾಹುಕಾರ, ಅವನ ಮಾವ ವಿರೂಪಾಕ್ಷ ಸಾಹುಕಾರ, ರುದ್ರೇಶ ಇಂಥ ಪಾತ್ರಗಳಿವೆ. ಒಂದು ಸಣ್ಣ ಗಲಾಟೆಯಿಂದ ಶುರುವಾಗಿ, ಜನ ಹೇಗೆ ಹೋರಾಡುತ್ತಾರೆ ಮತ್ತು ರಕ್ತ ಹೇಗೆ ನಿರಂತರವಾಗಿ ಹರಿಯುತ್ತಾ ಹೋಗುತ್ತದೆ ಎಂದು ತೋರಿಸಿದ್ದೇವೆ" ಎಂದು ಕಥೆಯ ಸುಳಿವನ್ನು ರವಿ ಶ್ರೀವತ್ಸ ಬಿಟ್ಟುಕೊಟ್ಟಿದ್ದಾರೆ.
Bank Robbery: ಭೀಮಾತೀರದ ಎಸ್‌ಬಿಐ ಬ್ಯಾಂಕ್‌ಗೆ ಕನ್ನ; ಪಿಸ್ತೂಲ್, ಚಾಕು ತೋರಿಸಿ ಮುಸುಕುಧಾರಿಗಳಿಂದ ದರೋಡೆ
ಸೆನ್ಸಾರ್ ಮಂಡಳಿ ಪ್ರಮಾಣ ಪತ್ರವನ್ನೇ ಕೊಡುತ್ತಿರಲಿಲ್ಲವೇನೋ?
"ಈ ಸಿನಿಮಾದ ಕಥೆಗೆ ಮತ್ತೊಂದಿಷ್ಟು ಜನ ಬಂದು ಸೇರಿಕೊಳ್ಳುತ್ತಾರೆ. ರಕ್ತ ಬಿಸಿಯಾಗಿರುತ್ತದೆ, ರಕ್ತ ತನ್ನದವರದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ಸಿಕ್ಕ ಆ ಮಣ‍್ಣಿನ ಗಟ್ಟಿತನದ ಕಥೆ ಇದು. ಇದನ್ನು ತೆರೆಯ ಮೇಲೆ ತರಬೇಕು ಎಂದು ಆಸೆಪಟ್ಟು ಚಿತ್ರ ಮಾಡಿದ್ದೇನೆ. ನಾನೊಬ್ಬನೇ ಮಾಡಿದ್ದರೆ ಎಮೋಷನಲ್ ಆಗಿ ಇನ್ನಷ್ಟು ಕ್ರೌರ್ಯ ಹೆಚ್ಚಾಗುತ್ತಿತ್ತು. ಬಹುಶಃ ಆಗ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರವನ್ನೇ ಕೊಡುತ್ತಿರಲಿಲ್ಲವೇನೋ? ಅದೇ ಕಾರಣಕ್ಕೆ ನನ್ನ ಗುರು ಎಂ. ಎಸ್. ರಮೇಶ್ ಅವರನ್ನು ಜೊತೆಗಿಟ್ಟುಕೊಂಡೆ. ಅವರು ಮತ್ತು ಇಡೀ ಚಿತ್ರತಂಡದ ಸಹಕಾರ, ಪ್ರೋತ್ಸಾಹದಿಂದ ಗ್ಯಾಂಗ್ಸ್ ಆಫ್ ಯುಕೆ ಚಿತ್ರ ಚೆನ್ನಾಗಿ ಮೂಡಿಬಂದಿದೆ" ಎನ್ನುತ್ತಾರೆ ರವಿ ಶ್ರೀವತ್ಸ.
ಟ್ರೇಲರ್ ನೋಡಿದವರೆಲ್ಲರೂ ನನಗೆ ಮತ್ತು ರವಿಗೆ ಬೈದಿದ್ದಾರೆ!
"ಈ ಚಿತ್ರದ ಟ್ರೇಲರ್ ನೋಡಿದ ಬಹಳಷ್ಟು ಮಂದಿ ತುಂಬಾ ಕ್ರೌರ್ಯವಿದೆ ಎಂದರು. ನನಗೆ ಮತ್ತು ರವಿಗೆ ಬೈದರು. ಎರಡು ನಿಮಿಷದ ಟ್ರೇಲರ್ ನೋಡಿ, ಎರಡು ಗಂಟೆಯ ಚಿತ್ರದ ಬಗ್ಗೆ ಮಾತನಾಡುವುದು ಕಷ್ಟ. ಜನ ಪ್ರತಿಕ್ರಿಯಿಸಲಿ ಎಂದೇ ನಾವು ಆ ಟ್ರೇಲರ್ ಬಿಟ್ಟಿದ್ದು. ಶಾಂತಿ ಬೇಕು ಎಂದರೆ ಕ್ರಾಂತಿ ಆಗಲೇಬೇಕು ಎನ್ನುವ ಮಾತಿದೆ. ಆ ತಿರುಳು ಈ ಕಥೆಯಲ್ಲಿದೆ. ಎಲ್ಲರೂ ಶಾಂತರಾಗಿರುತ್ತೇವೆ. ಒಂದು ಕ್ಷಣದ ಕೋಪ ಒಂದು ಘಟನೆಗೆ ಕಾರಣವಾದರೆ, ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಚಿತ್ರ ಹೇಳುತ್ತದೆ. ನಾವು ಯಾವುದೋ ನೆಗೆಟಿವ್ ಕಾಮೆಂಟ್‍ಗಳಿಗೆ ಹೆದರುವುದಿಲ್ಲ. ಏಕೆಂದರೆ, ನಮ್ಮ ಸಿನಿಮಾದ ಮೇಲೆ ನಮಗೆ ನಂಬಿಕೆ ಇದೆ" ಎಂದು ಚಿತ್ರಕಥೆ, ಸಂಭಾಷಣೆ ಬರೆದಿರುವ ಎಂ. ಎಸ್. ರಮೇಶ್ ಹೇಳುತ್ತಾರೆ.
"ಒಂದೊಂದು ಫೋಟೋ ಮತ್ತು ಕ್ಲಿಪ್ಪಿಂಗ್ ಹೊರಬರುತ್ತಿದ್ದಂತೆಯೇ ನೆಗೆಟಿವ್ ಆದ ಪ್ರತಿಕ್ರಿಯೆಗಳು ಈಗ ಪಾಸಿಟಿವ್ ಆಗುತ್ತಿವೆ. ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ, ಇದರ ಮುಂದುವರೆದ ಭಾಗ ಮಾಡಬೇಕೆಂಬ ನಮ್ಮ ಆಸೆ ಚಿಗುರಿದೆ. ಈಗಾಗಲೇ ಶೇ. 30ರಷ್ಟು ಮುಂದಿನ ಭಾಗದ ಚಿತ್ರೀಕರಣವಾಗಿದೆ. ಎರಡನೆಯ ಭಾಗ ಮಾಡುವುದಕ್ಕೆ ಯೋಜನೆ ರೂಪುಗೊಳ್ಳುತ್ತಿದೆ. ಪ್ರತಿಕ್ರಿಯೆಗಳಿಂದ ಧೈರ್ಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಮುಂದಿನ ಭಾಗ ಸಹ ಬರಲಿದೆ" ಎನ್ನುತ್ತಾರೆ ಎಂ. ಎಸ್. ರಮೇಶ್.
‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ಡೆಡ್ಲಿ ಆರ್ಟ್ಸ್ ಸಂಸ್ಥೆಯ ಮೂಲಕ ನಿರ್ಮಾಣವನ್ನೂ ಮಾಡುತ್ತಿದ್ದಾರೆ ರವಿ ಶ್ರೀವತ್ಸ. ಈ ಚಿತ್ರದಲ್ಲಿ ‘ಒರಟ’ ಪ್ರಶಾಂತ್, ಮುನಿ, ಪದ್ಮಾವಾಸಂತಿ, ಸೋನು ಉಪಾಧ್ಯ, ಪ್ರವೀಣ್, ‘ಉಗ್ರಂ’ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಅಮೋಘ್ ಮುಂತಾದವರು ನಟಿಸಿದ್ದಾರೆ.