ಪ್ರದೋಷ್ ಮೇಲೆ ದರ್ಶನ್ ವಿರೋಧಿಗಳು ಪ್ರಭಾವ ಬೀರಿದ್ರಾ? ಮಾಫಿ ಸಾಕ್ಷಿ ಆದೇಶ ರದ್ದುಪಡಿಸಲು ಮತ್ತೆ ಅರ್ಜಿ ಸಲ್ಲಿಸಿದ ವಿಜಯಲಕ್ಷ್ಮಿ
Renukaswamy Murder Case: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರಮುಖ ಆರೋಪಿ ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗಲು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸುವಂತೆ ಈ ಅರ್ಜಿಯಲ್ಲಿ ಕೋರಲಾಗಿದೆ. ದರ್ಶನ್ ವಿರೋಧಿಗಳ ಚಿತಾವಣೆಯಿಂದಲೇ ಪ್ರದೋಷ್ ಅಪ್ರೂವರ್ ಆಗಲು ಮುಂದಾಗಿದ್ದಾರೆ ಎಂದು ಆಪಾದಿಸಲಾಗಿದೆ.
-
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಮಹತ್ವದ ತಿರುವುಗಳು ಸಿಗುತ್ತಿದ್ದು, ಪ್ರಕರಣದ ಪ್ರಮುಖ ಆರೋಪಿ ಪ್ರದೋಷ್ ರಾವ್ ಮಾಫಿ ಸಾಕ್ಷಿ ಆಗಲು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದಲ್ಲಿ ಎ-2 ಆರೋಪಿಯಾಗಿರುವ ದರ್ಶನ್ ಪರವಾಗಿ ರಿಟ್ ಅರ್ಜಿ ಸಲ್ಲಿಸಿರುವ ವಿಜಯಲಕ್ಷ್ಮಿ, ಪ್ರದೋಷ್‌ರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ ಹೊರಡಿಸಿರುವ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಪ್ರದೋಷ್ ರಾವ್ ಸ್ವಂತ ಇಚ್ಛೆಯಿಂದಲ್ಲದೆ, ಸ್ವಾರ್ಥ ಸಾಧನೆಗಾಗಿ ಹಾಗೂ ಬೇರೆಯವರ ಚಿತಾವಣೆಯಿಂದ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದಾರೆ ಎಂದು ಅರ್ಜಿಯಲ್ಲಿ ನೇರವಾಗಿ ಆಪಾದಿಸಲಾಗಿದೆ. ನಟ ದರ್ಶನ್ ಅವರ ಬೆಳವಣಿಗೆಯನ್ನು ಸಹಿಸದ ವಿರೋಧಿಗಳು ಪ್ರದೋಷ್ ಮೇಲೆ ಪ್ರಭಾವ ಬೀರಿದ್ದು, ಅವರ ಕುಮ್ಮಕ್ಕಿನಿಂದಲೇ ಈ ಅರ್ಜಿ ಸಲ್ಲಿಕೆಯಾಗಿದೆ ಎಂಬ ಗಂಭೀರ ಸಂಶಯವನ್ನು ವ್ಯಕ್ತಪಡಿಸಲಾಗಿದೆ. ಪ್ರಕರಣ ನಡೆದು ಇಷ್ಟು ಸಮಯದವರೆಗೆ ಸುಮ್ಮನಿದ್ದು, ಈಗ ಏಕಾಏಕಿ ಮಾಫಿ ಸಾಕ್ಷಿಯಾಗಲು ಮುಂದಾಗಿರುವ ಪ್ರದೋಷ್ ಅವರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ಪಾರಾಗ್ತಾರಾ ದರ್ಶನ್?
ಪ್ರದೋಷ್ ಮೇಲಿದೆ ಮೊಬೈಲ್ ಬಳಕೆಯ ಆರೋಪ
ಅಲ್ಲದೆ, ಜೈಲಿನಲ್ಲಿದ್ದುಕೊಂಡೇ ಪ್ರದೋಷ್ ಅನಧಿಕೃತವಾಗಿ ಮೊಬೈಲ್ ಫೋನ್ ಬಳಸಿ ತಮ್ಮ ಪತ್ನಿ ಸೇರಿದಂತೆ ಹಲವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಈ ಸಂಬಂಧ ಈಗಾಗಲೇ ಪ್ರದೋಷ್ ರಾವ್ ವಿರುದ್ಧ ಎನ್‌ಸಿಆರ್ ದಾಖಲಾಗಿ ತನಿಖೆ ನಡೆಯುತ್ತಿದ್ದು, ಅಪ್ರೂವರ್ ಆಗುವ ಪ್ರಕ್ರಿಯೆ ಹಾಗೂ ಸಂಚಿಗೆ ಇದೇ ಮೊಬೈಲ್ ಬಳಕೆಯಾಗಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಎಲ್ಲ ಅಕ್ರಮಗಳ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೆ ಅಧಿಕೃತ ಮೆಮೊ ಸಲ್ಲಿಸಿದ್ದರೂ, ಅದನ್ನು ಪರಿಗಣಿಸದೆ ಮಾಫಿ ಸಾಕ್ಷಿ ಆದೇಶ ನೀಡಲಾಗಿದೆ ಎಂದು ವಿಜಯಲಕ್ಷ್ಮಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಿ, ಅದನ್ನು ರದ್ದುಪಡಿಸಬೇಕೆಂದು ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ.