ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ವಿಚಾರ: ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

Renukaswamy Murder Case: ರೇಣುಕಾಸ್ವಾಮಿ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೆಳ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಒಂದು ವಾರದೊಳಗೆ ನಿಯಮಾನುಸಾರ ಮರು ಆದೇಶ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಪ್ರದೋಷ್ ಮಾಫಿ ಸಾಕ್ಷಿಗೆ ಬ್ರೇಕ್? ದರ್ಶನ್‌ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್

-

Avinash GR
Avinash GR Sep 8, 2026 6:46 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ರಾವ್ ಅಪ್ರೂವರ್ ಆಗಲು ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಪ್ರದೋಷ್‌ ಹೇಳಿಕೆ ದಾಖಲಿಸಲು ಕೆಳಹಂತದ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್, ಒಂದು ವಾರದೊಳಗೆ ಮರು ಆದೇಶ ಹೊರಡಿಸುವಂತೆ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಈ ಮೂಲಕ ನಟ ದರ್ಶನ್‌ಗೆ ಕಾನೂನು ಹೋರಾಟದಲ್ಲಿ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ ದರ್ಶನ್

ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್‌, ಅಪರಾಧದ ಆರಂಭದಿಂದ ಅಂತ್ಯದವರೆಗೂ ದರ್ಶನ್ ಹಾಗೂ ಇತರೆ ಆರೋಪಿಗಳ ಜತೆಗಿದ್ದ ಪ್ರಮುಖ ವ್ಯಕ್ತಿಯಾಗಿದ್ದು, ಘಟನೆಯ ಪ್ರತ್ಯಕ್ಷದರ್ಶಿಯೂ ಆಗಿದ್ದಾರೆ. ಇತ್ತೀಚೆಗೆ ಪ್ರದೋಶ್ ತಾನು ಮಾಫಿ ಸಾಕ್ಷಿಯಾಗಲು ಸಿದ್ಧ ಎಂದು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ, 59ನೇ ಸಿಸಿಎಚ್ ನ್ಯಾಯಾಲಯವು ದರ್ಶನ್ ಅರ್ಜಿಯನ್ನು ತಿರಸ್ಕರಿಸಿ ಪ್ರದೋಷ್‌ ಹೇಳಿಕೆ ದಾಖಲಿಸಿಕೊಳ್ಳಲು ಹಸಿರುನಿಶಾನೆ ತೋರಿತ್ತು. ಕೆಳ ನ್ಯಾಯಾಲಯದ ಈ ನಿರ್ಧಾರವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

59ನೇ ಸಿಸಿಎಚ್ ನ್ಯಾಯಾಲಯಕ್ಕೆ ನೀಡಿದ ಸೂಚನೆ ಏನು?

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಆದರೆ, ಪ್ರದೋಶ್ ಮಾಫಿ ಸಾಕ್ಷಿಯಾಗುವುದಕ್ಕೆ ಹೈಕೋರ್ಟ್ ಸಂಪೂರ್ಣ ತಡೆ ನೀಡಿಲ್ಲ. ಬದಲಿಗೆ, ಪ್ರಕರಣದ ಕುರಿತು ಹೊಸದಾಗಿ ವಿಚಾರಣೆ ನಡೆಸುವ ಯಾವುದೇ ಅಗತ್ಯವಿಲ್ಲ, ಕೇವಲ ನಿಯಮಾನುಸಾರ ಹೊಸದಾಗಿ ಮರು ಆದೇಶವನ್ನಷ್ಟೇ ಒಂದು ವಾರದೊಳಗೆ ಹೊರಡಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.

Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ಪಾರಾಗ್ತಾರಾ ದರ್ಶನ್‌?

ಒಂದು ವಾರದ ನಂತರ ಸ್ಪಷ್ಟ ಚಿತ್ರಣ

ಹೈಕೋರ್ಟ್‌ನ ಈ ನಿರ್ಧಾರದಿಂದ ದರ್ಶನ್‌ಗೆ ಸದ್ಯಕ್ಕೆ ಸಣ್ಣ ಮುನ್ನಡೆ ಸಿಕ್ಕಂತಾಗಿದ್ದರೂ, ಕಾನೂನು ಸಂಕಷ್ಟ ಸಂಪೂರ್ಣವಾಗಿ ದೂರವಾಗಿಲ್ಲ. ವಿಚಾರಣಾ ನ್ಯಾಯಾಲಯವು ಮುಂದಿನ ಒಂದು ವಾರದಲ್ಲಿ ಹೊರಡಿಸಲಿರುವ ಮರು ಆದೇಶದಲ್ಲಿ ಮತ್ತೆ ಪ್ರದೋಶ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಅನುಮತಿ ನೀಡಿದರೆ, ಅದು ದರ್ಶನ್ ಹಾಗೂ ಇತರ ಆರೋಪಿಗಳಿಗೆ ಕಾನೂನಾತ್ಮಕವಾಗಿ ಭಾರೀ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.